
Garbage pile near school and temple; road in darknessಶಾಲೆ–ದೇವಾಲಯದ ಸನಿಹದಲ್ಲೇ ಕಸದ ರಾಶಿ; ಕತ್ತಲಲ್ಲಿ ರಸ್ತೆ
ನಗರಸಭೆ ತಕ್ಷಣ ಸ್ವಚ್ಛತೆ, ಬೀದಿ ದೀಪದ ವ್ಯವಸ್ಥೆ ಮಾಡಲಿ: ಸಾರ್ವಜನಿಕರ ಆಗ್ರಹ
ಗಂಗಾವತಿ: ನಗರದ ಯಶೋಧ ಆಸ್ಪತ್ರೆ ಇಂದ ಗುಂಡಮ್ಮ ಹೋಗುವ ರಸ್ತೆಯಲ್ಲಿ ಶಾಲೆ ಹಾಗೂ ದೇವಾಲಯದ ಎದುರು ಗಡೆ ತಿಂಗಳಿಂದ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇಲ್ಲಿನ ಕಸದ ಪ್ರದೇಶದ ಪಕ್ಕದಲ್ಲೇ ಪ್ರತಿಷ್ಠಿತ ಶ್ರೀ ಭಾಗೀರಥ ಉಪ್ಪಾರ ಶಿಕ್ಷಣ ಸಂಸ್ಥೆ ಹಾಗೂ ಐತಿಹಾಸಿಕ ಶ್ರೀ ಆಂಜನೇಯ ಸ್ವಾಮಿ ದೇವಾಲಯವಿದೆ. ಆದರೆ ಈ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದರಿಂದ ಸ್ವಚ್ಛತೆ ಹದಗೆಟ್ಟಿದ್ದು, ದುರ್ವಾಸನೆ ಹಾಗೂ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.

ಇದರ ಜೊತೆಗೆ ರಾತ್ರಿ ಸಮಯದಲ್ಲಿ ಈ ಭಾಗದಲ್ಲಿ ಸಮರ್ಪಕ ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದರಿಂದ ಕತ್ತಲು ಆವರಿಸುತ್ತಿದೆ. ಶಾಲೆ, ದೇವಾಲಯ ಹಾಗೂ ಸಾರ್ವಜನಿಕರು ಸಂಚರಿಸುವ ಪ್ರದೇಶವಾಗಿರುವುದರಿಂದ ನಗರಸಭೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಸದ ರಾಶಿಯನ್ನು ತೆರವುಗೊಳಿಸಿ, ನಿಯಮಿತ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರ ಜೊತೆಗೆ ಅಗತ್ಯವಿರುವ ಕಡೆ ಬೀದಿ ದೀಪಗಳನ್ನು ಅಳವಡಿಸಬೇಕು. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




