
ಪ್ರತಿಭಟನೆಗೆ ‘ಅವರ ಕೆಲಸ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ’
Massive Hindu convention of 'Basavadi Sharanas' to be held in Gangavathi on November 3Massive Hindu convention of 'Basavadi Sharanas' to be held in Gangavathi on November 3ಗಂಗಾವತಿಯಲ್ಲಿ ನ.3ರಂದು ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ
ಸನಾತನ ಧರ್ಮ–ಭಾರತೀಯ ಸಂಸ್ಕೃತಿ ಸಂರಕ್ಷಣೆ, ರೈತರ ಹಿತರಕ್ಷಣೆ ಹಾಗೂ ಪರಿಸರ ಜಾಗೃತಿಗೆ ಸಂಕಲ್ಪ

ಗಂಗಾವತಿ: ಸನಾತನ ಧರ್ಮದ ಉಳಿವು, ಭಾರತೀಯ ಮೂಲ ಸಂಸ್ಕೃತಿಯ ಸಂರಕ್ಷಣೆ, ರೈತರ ಹಿತರಕ್ಷಣೆ, ಕೃಷಿ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ನವೆಂಬರ್ 3ರಂದು ಗಂಗಾವತಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ ಆಯೋಜಿಸಲಾಗಿದೆ ಎಂದು ಕನೇರಿಮಠದ ಪ್ರತಿನಿಧಿ ಶ್ರೀಕುಮಾರಸ್ವಾಮಿ ತಿಳಿಸಿದರು.
ನಗರದ ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಆರು ಬೃಹತ್ ಬಸವಾದಿ ಶರಣರ ಹಿಂದೂ ಸಮಾವೇಶಗಳು ಯಶಸ್ವಿಯಾಗಿ ನಡೆದಿದ್ದು, ಗಂಗಾವತಿಯಲ್ಲಿ ಏಳನೇ ಸಮಾವೇಶ ನಡೆಯಲಿದೆ ಎಂದರು.
ಭಾರತೀಯ ಮೂಲ ಸಂಸ್ಕೃತಿ ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಬಸವಣ್ಣನವರು ಮತ್ತು ವಚನಕಾರರು ಪ್ರತಿಪಾದಿಸಿದ ಸಮಾನತೆ, ಕಾಯಕ ಹಾಗೂ ದಾಸೋಹದ ಆಶಯಗಳನ್ನು ಸಮಾಜದಲ್ಲಿ ಬಲಪಡಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ನಾಡಿನ ಜೀವನಾಡಿಯಾಗಿರುವ ರೈತರ ಹಿತರಕ್ಷಣೆ, ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೂ ಇದೆ ಎಂದು ಹೇಳಿದರು.
ಈ ಸಮಾವೇಶವು ಕನೇರಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವ ಅಥವಾ ಮಾರ್ಗದರ್ಶನದಲ್ಲಿ ನಡೆಯುತ್ತಿಲ್ಲ. ಬಸವಾದಿ ಶರಣರು ಹಾಗೂ ಹಿಂದೂ ಧರ್ಮ ಪ್ರತಿಪಾದಕರು ಆಯೋಜಿಸುವ ಇಂತಹ ಕಾರ್ಯಕ್ರಮಗಳಿಗೆ ಆಹ್ವಾನಿಸಿದಲ್ಲಿ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಶ್ರೀಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸಮಾವೇಶದಲ್ಲಿ ನಾಡಿನ ವಿವಿಧ ಭಾಗಗಳಿಂದ ಸುಮಾರು 300 ಮಠಾಧೀಶರು, ಪೂಜ್ಯ ಸಂತರು ಹಾಗೂ ಪ್ರಮುಖ ಮುಖಂಡರು ಭಾಗವಹಿಸಲಿದ್ದು, ಸುಮಾರು 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಗಂಗಾವತಿ ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು, ಧರ್ಮಪ್ರೇಮಿಗಳು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಗೆ ‘ಅವರ ಕೆಲಸ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ’
ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಹಾಗೂ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ಭಾಗವಹಿಸದಂತೆ ಒತ್ತಾಯಿಸಿ ಇತ್ತೀಚೆಗೆ ಗಂಗಾವತಿಯಲ್ಲಿ ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶ್ರೀಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
“ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ವಿರೋಧಿಸುವ ಹಾಗೂ ಪ್ರತಿಭಟಿಸುವ ಹಕ್ಕಿದೆ. ಅವರು ಅವರ ಕೆಲಸ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
ಸಮಾವೇಶಕ್ಕೆ ಸಿದ್ಧತೆ ಭರದಿಂದಸಮಾವೇಶದ ಸಂಯೋಜಕ ನೀಲಕಂಠಪ್ಪ ನಾಗಶೇಟ್ಟಿ ಮಾತನಾಡಿ, ಬಸವಾದಿ ಶರಣರ ಹಿಂದೂ ಸಮಾವೇಶ ಸ್ವಾಗತ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಾವೇಶದ ಯಶಸ್ಸಿಗಾಗಿ ಅಗತ್ಯವಿರುವ ಎಲ್ಲ ಪೂರ್ವಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಾರಾಣಸಿಯ ಶ್ರೀ ಮೌನಯೋಗಿ ಮುಕ್ತಿನಾಥ ಸ್ವಾಮಿಗಳು, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಖಜಾಂಚಿ ವಿರುಪಾಕ್ಷಪ್ಪ ಸಿಂಗನಾಳ, ಕಾರ್ಯದರ್ಶಿ ಎಂ. ರವೀಂದ್ರ ನಾಗಪ್ಪ, ಸಹ ಖಜಾಂಚಿಗಳಾದ ವೆಂಕಟೇಶ ಅಮರಜ್ಯೋತಿ, ಕೆ. ವೆಂಕಟೇಶ, ಆರ್ಥಿಕ ಸಮಿತಿ ಪ್ರಮುಖರಾದ ವಾಸು ಕೊಳಗದ ಸೇರಿದಂತೆ ಹಲವರು ಉಪಸ್ಥಿತರಿದ್ದರು.




