
Bherya Ramakumar Selected for the Main Dasara Poets' Meet
An Honor Bestowed for Contributions to Literature and the Environment
ಪ್ರಧಾನ ದಸರಾ ಕವಿಗೋಷ್ಠಿಗೆ ಭೇರ್ಯ ರಾಮಕುಮಾರ್ ಆಯ್ಕೆ
ಸಾಹಿತ್ಯ, ಪರಿಸರ ಸೇವೆಗೆ ಸಂದ ಗೌರವ
ಮೈಸೂರು: ಹಿರಿಯ ಸಾಹಿತಿ ಹಾಗೂ ಪರಿಸರ ಚಿಂತಕ ಡಾ. ಭೇರ್ಯ ರಾಮಕುಮಾರ್ ಅವರು ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಪ್ರಧಾನ ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.
ಡಾ. ಭೇರ್ಯ ರಾಮಕುಮಾರ್ ಅವರು ನವಚೇತನ, ಬದುಕು ಕವನ ಸಂಕಲನಗಳು ಹಾಗೂ ನಾವು ಬದುಕಲು ಬಿಡಿ ನಾಟಕ ಸಂಕಲನವನ್ನು ಹೊರತಂದಿದ್ದಾರೆ. ಅವರ ಮತ್ತೊಂದು ಕವನ ಸಂಕಲನ ಬಾಳೊಂದು ಪಗಡೆಯಾಟ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ. 1985ರಿಂದ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.
ಸಾಹಿತ್ಯ ಸಂಘಟಕರಾಗಿಯೂ ಗುರುತಿಸಿಕೊಂಡಿರುವ ಅವರು ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ಅಧ್ಯಕ್ಷರಾಗಿ 365 ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಪರಿಸರ ಚಿಂತಕರಾಗಿರುವ ಅವರು 1,000ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದ್ದಾರೆ.
ಸಮಾಜಮುಖಿ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿರುವ ಭೇರ್ಯ ರಾಮಕುಮಾರ್ ಅವರು ಸ್ವತಃ ನೇತ್ರದಾನಿ ಹಾಗೂ ದೇಹದಾನಿಯಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ತಮ್ಮ ನೇತ್ರಗಳನ್ನು ಹಾಗೂ ಮೈಸೂರು ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡುವುದಾಗಿ ಒಪ್ಪಿಗೆ ಪತ್ರ ನೀಡಿದ್ದಾರೆ.
ಅವರ ಸಾಹಿತ್ಯ ಹಾಗೂ ಪರಿಸರ ಸೇವೆಯನ್ನು ಪರಿಗಣಿಸಿ 1993ರಲ್ಲಿ ಕೇಂದ್ರ ಸರ್ಕಾರದ ನೆಹರು ಯುವ ಪ್ರಶಸ್ತಿ, 2022ರಲ್ಲಿ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2023ರಲ್ಲಿ ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, 2026ರಲ್ಲಿ ಪರಿಸರ ರತ್ನ ಪ್ರಶಸ್ತಿ ಹಾಗೂ 2026ರ ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.
ಪ್ರಧಾನ ದಸರಾ ಕವಿಗೋಷ್ಠಿ ಅ.17ರಂದು ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆಯಲಿದೆ.




