ಪಂಚಾಯಿತಿ’ ಸಿನಿಮಾದಲ್ಲಿ ಯೂಟ್ಯೂಬರ್‌ಗಳಿಗೂ ಅವಕಾಶ!ಉತ್ತರ ಕರ್ನಾಟಕದ ಕಲಾವಿದರಿಗೆ ಆದ್ಯತೆ; ನಿಜ ಜೀವನದ ಜೋಗತಿ ದೀಪಾ ಜೋಗತಿ ಪ್ರಮುಖ ಪಾತ್ರದಲ್ಲಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Opportunity for YouTubers in the movie ‘Panchayati’!
Priority given to artists from North Karnataka; real-life Jogathi Deepa Jogathi plays a lead role.

ಪಂಚಾಯಿತಿ’ ಸಿನಿಮಾದಲ್ಲಿ ಯೂಟ್ಯೂಬರ್‌ಗಳಿಗೂ ಅವಕಾಶ!
ಉತ್ತರ ಕರ್ನಾಟಕದ ಕಲಾವಿದರಿಗೆ ಆದ್ಯತೆ; ನಿಜ ಜೀವನದ ಜೋಗತಿ ದೀಪಾ ಜೋಗತಿ ಪ್ರಮುಖ ಪಾತ್ರದಲ್ಲಿ

ಜಾಹೀರಾತು


ಬೆಂಗಳೂರು: ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಸಹಸ್ರಾರು ಪ್ರೇಕ್ಷಕರ ಬಳಗವನ್ನು ಹೊಂದಿರುವ ಪ್ರತಿಭಾವಂತ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ನೀಡುವ ಮೂಲಕ ಹಿರಿಯ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಅವರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ನೇಟಿವ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ತಮ್ಮ 14ನೇ ಚಿತ್ರ **‘ಪಂಚಾಯಿತಿ’**ಯಲ್ಲಿ ಯೂಟ್ಯೂಬ್ ಮೂಲಕ ಜನಪ್ರಿಯರಾಗಿರುವ ಕಲಾವಿದರಾದ ಗೋಕುಲ್ ರಾಜ್, ಜಗದೀಶ್ ಮೂಕಿ, ಪ್ರಕಾಶ್ ರಾಜಕುಮಾರ್, ಶ್ರುತಿ ಹೇಮಂತ್, ಬಿಂದು, ವೀರಣ್ಣ ಹೊಸಮನಿ ಸೇರಿದಂತೆ ಹಲವು ಪ್ರತಿಭೆಗಳಿಗೆ ಪ್ರಮುಖ ಪಾತ್ರಗಳನ್ನು ನೀಡಿದ್ದಾರೆ.
ಚಿತ್ರದ ಮತ್ತೊಂದು ವಿಶೇಷವೆಂದರೆ, ಚಿತ್ರದ ಬಹುತೇಕ ಎಲ್ಲ ಪಾತ್ರಗಳಿಗೂ ಉತ್ತರ ಕರ್ನಾಟಕದ ಕಲಾವಿದರನ್ನೇ ಆಯ್ಕೆ ಮಾಡಿರುವುದು. ಉತ್ತರ ಕರ್ನಾಟಕದ ಭಾಷೆ, ಜನಜೀವನ ಹಾಗೂ ಇಲ್ಲಿನ ಸೊಗಡನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
“ಉತ್ತರ ಕರ್ನಾಟಕದ ಭಾಷೆ ಮತ್ತು ಇಲ್ಲಿನ ಸೊಗಡು ನನಗೆ ಬಹಳ ಇಷ್ಟ. ಹನ್ನೆರಡು ವರ್ಷಗಳ ಹಿಂದೆ ‘ಡಿಸೆಂಬರ್-1’ ಚಿತ್ರವನ್ನು ಇಲ್ಲಿನ ಪ್ರಾದೇಶಿಕತೆಯನ್ನು ಅಳವಡಿಸಿಕೊಂಡು ಮಾಡಿದ್ದೆ. ಆ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿತ್ತು. ಇಲ್ಲಿನ ಜನರ ಆತ್ಮೀಯತೆ ನನ್ನನ್ನು ಮತ್ತೆ ಉತ್ತರ ಕರ್ನಾಟಕಕ್ಕೆ ಕರೆತಂದಿದೆ,” ಎಂದು ನಿರ್ದೇಶಕ ಪಿ. ಶೇಷಾದ್ರಿ ತಿಳಿಸಿದ್ದಾರೆ.
ಜೋಗತಿ ದೀಪಾ ಜೋಗತಿ ಅಭಿನಯ
ಚಿತ್ರದ ಮತ್ತೊಂದು ವಿಶೇಷವೆಂದರೆ, ನಿಜ ಜೀವನದ ಜೋಗತಿ ದೀಪಾ ಜೋಗತಿ ಅವರು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿರುವುದು. ಮೂಲತಃ ರಾಯಚೂರಿನವರಾದ ಅವರು ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಜೋಗತಿ ಸಮುದಾಯದ ಪ್ರತಿನಿಧಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಚಿತ್ರಕ್ಕಾಗಿ ಜನಪದ ಸೊಗಡಿನ ಹಾಡೊಂದನ್ನೂ ಹಾಡಿದ್ದಾರೆ.
ಹುಬ್ಬಳ್ಳಿ, ಧಾರವಾಡ, ಶಿವಳ್ಳಿ, ಕುಂದಗೋಳ, ಹೆಬ್ಬಳ್ಳಿ, ಬೂದನಗುಡ್ಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸಲಾಗಿದೆ.
ಸದ್ಯ ಚಿತ್ರದ ಸಂಕಲನ ಕಾರ್ಯ ಪೂರ್ಣಗೊಂಡಿದ್ದು, ಸಂಗೀತ ಜೋಡಣೆ, ಶಬ್ದ ವಿನ್ಯಾಸ ಸೇರಿದಂತೆ ಉಳಿದ ಪೋಸ್ಟ್‌ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ.
ಚಿತ್ರದಲ್ಲಿ ಶ್ರುತಿ ಬಿಸರಹಳ್ಳಿ, ಬಸವರಾಜ್ ತಿರ್ಲಾಪುರ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರವಿಂದ ಮಿತ್ರ ಕಥೆ ಬರೆದಿದ್ದು, ಗುರುಪ್ರಸಾದ್ ಕಾಶಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶಿವಾ ಸಂಗೀತ, ಬಿ.ಎಸ್. ಕೆಂಪರಾಜ್ ಸಂಕಲನ ಮಾಡಿದ್ದಾರೆ.
ಪಿ.ಆರ್.ಒ. ಆಗಿ ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ, ಸಹ ನಿರ್ದೇಶಕರಾಗಿ ಟಿ.ಆರ್. ಪ್ರಭು, ವಿದ್ಯಾಶ್ರೀ, ಪ್ರಕಾಶ್ ರಾಜಕುಮಾರ್ ಕಾರ್ಯನಿರ್ವಹಿಸಿದ್ದಾರೆ. ರವಿಶಂಕರ್ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದೊಡ್ಡ ನಾಗಯ್ಯ ಚಿತ್ರದ ನಿರ್ಮಾಪಕರಾಗಿದ್ದಾರೆ.

Total Views: 0
ಜಾಹೀರಾತು
Share This Article