ಎಸ್‌ಐಆರ್‌ ವಿರುದ್ಧ ಹೋರಾಟಕ್ಕೆ ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

ಎಸ್‌ಐಆರ್‌ ವಿರುದ್ಧ ಹೋರಾಟಕ್ಕೆ ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ

Satyagraha' digital platform for the fight against SIR

ರಾಹುಲ್ ಗಾಂಧಿ ಪ್ರಯತ್ನಕ್ಕೆ ತಂತ್ರಜ್ಞಾನದ ಸ್ಪರ್ಶ; ಜನರ ಹೋರಾಟಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಒಗ್ಗೂಡಿಸುವ ವೇದಿಕೆ: ಡಾ. ಆನಂದ ಕುಮಾರ್

ಬೆಂಗಳೂರು: ಎಸ್‌ಐಆರ್‌ ಮೂಲಕ ಶೋಷಿತರು, ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗಗಳ ಮತಗಳನ್ನು ಅಳಿಸುವ ಷಡ್ಯಂತ್ರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗದ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಹೋರಾಟಗಾರರಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಎಐಸಿಸಿ ಎಸ್‌ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಡಿಜಿಟಲ್ ಜಗತ್ತಿನಲ್ಲಿ ಚದುರಿರುವ ಜನರ ಧ್ವನಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಅವುಗಳನ್ನು ಪರಿಣಾಮಕಾರಿ ಜನಚಳವಳಿಯನ್ನಾಗಿ ರೂಪಿಸುವ ಉದ್ದೇಶ ಈ ವೇದಿಕೆಯ ಹಿಂದಿದೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜೆನ್‌-ಜಿ ಹಾಗೂ ಆಲ್ಫಾ ಪೀಳಿಗೆಯ ಯುವ ಸಮುದಾಯಗಳ ಹೋರಾಟಗಳಿಗೂ ಇದು ಹೊಸ ರಾಷ್ಟ್ರೀಯ ವೇದಿಕೆ ಒದಗಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸತ್ಯಾಗ್ರಹದ ಪರಿಕಲ್ಪನೆಯನ್ನು ಡಿಜಿಟಲ್ ಯುಗಕ್ಕೆ ಹೊಂದಿಸಿರುವುದು ವಿಶೇಷ ಪ್ರಯೋಗ. ದೇಶದ ವಿವಿಧ ಭಾಗಗಳಲ್ಲಿ ಹಕ್ಕುಗಳು ಮತ್ತು ಸಮಸ್ಯೆಗಳಿಗಾಗಿ ಹೋರಾಡುತ್ತಿರುವ ಜನರು ಹಾಗೂ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳು, ರೈತರು, ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಯುವಜನರು ಸೇರಿದಂತೆ ವಿವಿಧ ಸಮುದಾಯಗಳ ಹೋರಾಟಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ನೀಡುವ ಕೇಂದ್ರ ಬಿಂದುವಾಗಿ ಇದು ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಜನರು ತಮ್ಮದೇ ಆದ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ಹೋರಾಟಗಳು ಸ್ಥಳೀಯ ಮಟ್ಟಕ್ಕೆ ಸೀಮಿತವಾಗುತ್ತವೆ. ಒಂದು ಗ್ರಾಮದ ಭೂಮಿ ಸಮಸ್ಯೆ, ಮತ್ತೊಂದು ಪ್ರದೇಶದ ಮಹಿಳಾ ಸುರಕ್ಷತೆ, ಇನ್ನೊಂದೆಡೆ ರೈತರ ಹೋರಾಟ—ಇವು ಬೇರೆಬೇರೆ ಸಮಸ್ಯೆಗಳಂತೆ ಕಂಡರೂ, ಅವುಗಳ ಹಿಂದಿರುವ ‘ನ್ಯಾಯದ ಬೇಡಿಕೆ’ ಒಂದೇ. ಇಂತಹ ವಿಭಿನ್ನ ಧ್ವನಿಗಳನ್ನು ಒಂದೇ ಡಿಜಿಟಲ್ ನಕ್ಷೆಯಲ್ಲಿ ಜೋಡಿಸುವ ಪ್ರಯತ್ನವೇ ‘ಸತ್ಯಾಗ್ರಹ’ ವೇದಿಕೆ ಎಂದು ಅವರು ವಿವರಿಸಿದ್ದಾರೆ.

ಎಸ್‌ಐಆರ್‌ ವಿರುದ್ಧ ಸಂಘಟಿತ ಹೋರಾಟ ನಡೆಸಿ ಚುನಾವಣಾ ಆಯೋಗದ ಮೇಲೆ ಒತ್ತಡ ತಂದ ಕೀರ್ತಿ ಕರ್ನಾಟಕದ ಹೋರಾಟಗಾರರಿಗೆ ಸಲ್ಲುತ್ತದೆ ಎಂದು ಹೇಳಿದ ಡಾ. ಆನಂದ ಕುಮಾರ್, ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಇಂತಹ ಹೋರಾಟಗಳಿಗೆ ‘ಸತ್ಯಾಗ್ರಹ’ ಪ್ರಮುಖ ಜಾಲವಾಗಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ರಾಹುಲ್ ಗಾಂಧಿಯವರ ಈ ಪ್ರಯತ್ನದಿಂದ ಸಾಂಪ್ರದಾಯಿಕ ರಾಜಕೀಯ ಸಂಘಟನೆಗಳಾಚೆಗೆ ಒಂದು ರೀತಿಯ ‘ಡಿಜಿಟಲ್ ಜನಚಳವಳಿ ಜಾಲ’ ರೂಪುಗೊಳ್ಳುವ ಸಾಧ್ಯತೆಯಿದೆ. ಸಂಸತ್ತು, ಬೀದಿ ಹೋರಾಟ ಅಥವಾ ಮನವಿಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ, ಡಿಜಿಟಲ್ ವೇದಿಕೆಯ ಮೂಲಕ ಹೋರಾಟಗಳಿಗೆ ಸಂಪರ್ಕ ಮತ್ತು ಬೆಂಬಲ ಒದಗಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ.

ಕೇವಲ ಸರ್ಕಾರದ ನೀತಿಗಳನ್ನು ಟೀಕಿಸುವುದಕ್ಕಿಂತ, ದೇಶದ ವಿವಿಧ ಭಾಗಗಳಲ್ಲಿರುವ ಜನರ ಅಸಮಾಧಾನ ಹಾಗೂ ಹಕ್ಕೊತ್ತಾಯಗಳನ್ನು ಗುರುತಿಸಿ ಅವುಗಳನ್ನು ಒಗ್ಗೂಡಿಸುವ ಪ್ರಯತ್ನ ಇದಾಗಿದೆ. ಜನರ ಸಮಸ್ಯೆಗಳಿಗೆ ಆದ್ಯತೆ ನೀಡುವ ಹಾಗೂ ಅಗತ್ಯವಿರುವ ಕಡೆ ನೆರವು ಒದಗಿಸುವ ಉದ್ದೇಶವನ್ನು ವೇದಿಕೆ ಹೊಂದಿದೆ. ಇದು ಒಂದು ದಿನದ ಅಭಿಯಾನವಾಗಿರದೆ ದೀರ್ಘಾವಧಿಯ ಪ್ರಯತ್ನವಾಗುವ ನಿರೀಕ್ಷೆಯಿದೆ ಎಂದು ಡಾ. ಆನಂದ ಕುಮಾರ್ ತಿಳಿಸಿದ್ದಾರೆ.

ಚಳವಳಿಗಳು ಭಾರತದ ರಾಜಕೀಯದಲ್ಲಿ ಹೊಸದಲ್ಲ. ಆದರೆ ವಿವಿಧ ಜನಹೋರಾಟಗಳನ್ನು ಡಿಜಿಟಲ್ ನಕ್ಷೆಯಲ್ಲಿ ಜೋಡಿಸಿ, ಅವುಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ಪ್ರಯತ್ನ ಹೊಸ ರಾಜಕೀಯ ಪ್ರಯೋಗವಾಗಿದೆ. ಮುಂದಿನ ದಿನಗಳಲ್ಲಿ ‘ಸತ್ಯಾಗ್ರಹ’ ಕೇವಲ ಕಾಂಗ್ರೆಸ್‌ನ ಡಿಜಿಟಲ್ ಪ್ರಚಾರ ವೇದಿಕೆಯಾಗದೆ, ನೈಜ ಜನಹೋರಾಟಗಳಿಗೆ ಸಂಪರ್ಕ, ಬೆಂಬಲ ಹಾಗೂ ರಾಜಕೀಯ ಪ್ರಭಾವ ಒದಗಿಸುವ ರಾಷ್ಟ್ರೀಯ ವೇದಿಕೆಯಾಗಿ ರೂಪುಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Total Views: 0
Share This Article