Green Festival' at Muddaballi School: Vanamahotsava Launched
ಮುದ್ದಾಬಳ್ಳಿ ಶಾಲೆಯಲ್ಲಿ ಹಸಿರಿನ ಹಬ್ಬ: ವನಮಹೋತ್ಸವಕ್ಕೆ ಚಾಲನೆ

ಮಕ್ಕಳು, ಯುವಜನರು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ಪರಿಸರ ನಿರ್ಮಿಸಲಿ
ಗಂಗಾವತಿ: ಅಲ್ಫಾ ಹೆಲ್ತ್ ಎಜುಕೇಶನ್ ಅಂಡ್ ರೂರಲ್ ಡೆವಲಪ್ಮೆಂಟ್ ಫೌಂಡೇಶನ್ (ರಿ), ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘಟನೆ, ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಮುದ್ದಾಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಶರಣಗೌಡ ಮಾಲಿಪಾಟೀಲ್ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಲ್ಮಾ ಜಾನ್, ವನಮಹೋತ್ಸವ ಎಂದರೆ ಕೇವಲ ಸಸಿಗಳನ್ನು ನೆಡುವ ಕಾರ್ಯಕ್ರಮವಲ್ಲ. ಪರಿಸರ ಸಂರಕ್ಷಣೆ, ಶುದ್ಧ ಗಾಳಿ ಹಾಗೂ ಹಸಿರಿನ ಮಹತ್ವವನ್ನು ಮಕ್ಕಳಲ್ಲಿ ಮತ್ತು ಗ್ರಾಮಸ್ಥರಲ್ಲಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಎಲ್ಲ ಸಮುದಾಯದವರು ಒಗ್ಗೂಡಿ ಸಸಿಗಳನ್ನು ನೆಟ್ಟು, ಅವುಗಳ ಪೋಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಾಗ ಪರಿಸರ ಕಾಳಜಿಯ ಜೊತೆಗೆ ಸಾಮಾಜಿಕ ಏಕತೆಯ ಸಂದೇಶವನ್ನು ಸಾರಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಖಾಸಿಂ ಅಲಿ ಮುದ್ದಾಬಳ್ಳಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ. ಮಕ್ಕಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಸಂರಕ್ಷಿಸಿ ಬೆಳೆಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಡಾ. ಶಂಕ್ರಪ್ಪ ಬಿನ್ನಾಳ್ ಪರಿಸರ ಸಂರಕ್ಷಣೆಯ ಅಗತ್ಯತೆ ಹಾಗೂ ಹಸಿರಿನ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕರು, ಶಿಕ್ಷಕಿಯರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ವೆಂಕರೆಡ್ಡಿ ಚುಕ್ಕನಕಲ್, ಎಸ್ಡಿಎಂಸಿ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಹಾಲವರ್ತಿ, ಮಹೇಶ್ ಹಡಪದ, ಮಾರುತಿ ಹಾಲವರ್ತಿ ಸೇರಿದಂತೆ ಶಾಲೆಯ ಶಿಕ್ಷಕ-ಶಿಕ್ಷಕಿಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಶೂಗಳನ್ನು ವಿತರಿಸಲಾಯಿತು.



