Kannada film ‘Puttannana Katte’ selected for the Melbourne Film Festival in Australia.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಕನ್ನಡದ ‘ಪುಟ್ಟಣ್ಣನ ಕತ್ತೆ’ ಆಯ್ಕೆ

ವಿಶಿಷ್ಟ ಕಥಾನಕದ ಚಿತ್ರದ ಮೂಲಕ ಸಿದ್ದು ಪೂರ್ಣಚಂದ್ರ ಮತ್ತೆ ಪ್ರೇಕ್ಷಕರ ಮುಖಾಮುಖಿ
ಬೆಂಗಳೂರು: ಸೂಕ್ಷ್ಮ ಕಥಾನಕಗಳ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಿದ್ದು ಪೂರ್ಣಚಂದ್ರ ಅವರು ಇದೀಗ ‘ಪುಟ್ಟಣ್ಣನ ಕತ್ತೆ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ವಿಶೇಷ ಕಥಾವಸ್ತು ಹೊಂದಿರುವ ಈ ಚಿತ್ರವು ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್ಗೆ ಆಯ್ಕೆಯಾಗಿದ್ದು, ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ.

ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಮೆಲ್ಬೋರ್ನ್ ಚಲನಚಿತ್ರೋತ್ಸವದಲ್ಲಿ ಚಿತ್ರವೊಂದು ಆಯ್ಕೆಯಾಗುವುದು ಅದರ ಕಥಾವಸ್ತು ಮತ್ತು ನಿರ್ಮಾಣ ಗುಣಮಟ್ಟಕ್ಕೆ ದೊರೆಯುವ ಪ್ರಮುಖ ಮಾನ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ‘ಪುಟ್ಟಣ್ಣನ ಕತ್ತೆ’ ಚಿತ್ರಕ್ಕೆ ದೊರೆತಿರುವ ಅವಕಾಶವು ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ್ದಾಗಿದೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಕತ್ತೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡ ವಿಶಿಷ್ಟ ಚಿತ್ರವೆಂಬ ಹೆಗ್ಗಳಿಕೆಗೆ ‘ಪುಟ್ಟಣ್ಣನ ಕತ್ತೆ’ ಪಾತ್ರವಾಗಲಿದೆ. ಬೆಂಗಳೂರಿನಂತಹ ನಗರಗಳಲ್ಲಿ ಕತ್ತೆ ಹಾಲು ಮಾರುವವರು ಕಾಣಿಸಿಕೊಳ್ಳುವ ಸಂದರ್ಭಗಳಿವೆ. ಹಳ್ಳಿಯೊಂದರಿಂದ ಕತ್ತೆಯೊಂದಿಗೆ ಪಟ್ಟಣಕ್ಕೆ ಬರುವ ವ್ಯಕ್ತಿಯ ಸುತ್ತ ನಡೆಯುವ ಆಸಕ್ತಿದಾಯಕ ಕಥೆಯನ್ನು ಚಿತ್ರ ಹೊಂದಿದೆ.
ಕಥನದ ಆತ್ಮದಂತಿರುವ ಪುಟ್ಟಣ್ಣನ ಪಾತ್ರಕ್ಕೆ ಭೀಮೇಶ್ ಗೌಡ ಜೀವ ತುಂಬಿದ್ದಾರೆ. ಅನೀಶ್ ಆರ್ಯನ್ ಅವರು ಚಿತ್ರದ ನಾಯಕನಾಗಿ ಸಂಕೀರ್ಣವಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಪೂರ್ಣಚಂದ್ರ ಫಿಲಂಸ್ ಬ್ಯಾನರ್ನಡಿಯಲ್ಲಿ ತನ್ಮಯ್ ಎಸ್. ಗೌಡ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ. ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರು, ಲಕ್ಕಿ ಶಂಕರ್, ವಾಸು, ರಾಕಿ, ಮಂಡ್ಯ ಸಿದ್ದು ಮೊದಲಾದವರು ಅಭಿನಯಿಸಿದ್ದಾರೆ.
ತಾಂತ್ರಿಕ ಬಳಗ: ರಾಜು ಹೆಮ್ಮಿಗೆಪುರ – ಛಾಯಾಗ್ರಹಣ; ಅನಂತ್ ಆರ್ಯನ್ – ಸಂಗೀತ ನಿರ್ದೇಶನ; ದೀಪು ಸಿ.ಎಸ್. – ಸಂಕಲನ. ಸುಧೀಂದ್ರ ವೆಂಕಟೇಶ್, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ಅವರು ಪಿಆರ್ಒಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಈಗಾಗಲೇ ದಾರಿಯಾವುದಯ್ಯ ವೈಕುಂಠಕ್ಕೆ, ಬ್ರಹ್ಮಕಮಲ, ಈ ಪಾದ ಪುಣ್ಯ ಪಾದ ಮುಂತಾದ ವಿಶಿಷ್ಟ ಕಥಾ ಚಿತ್ರಗಳನ್ನು ನೀಡಿರುವ ಸಿದ್ದು ಪೂರ್ಣಚಂದ್ರ ಅವರಿಗೆ ‘ಪುಟ್ಟಣ್ಣನ ಕತ್ತೆ’ ಚಿತ್ರದ ಮೆಲ್ಬೋರ್ನ್ ಚಲನಚಿತ್ರೋತ್ಸವ ಆಯ್ಕೆಯ ಹಿನ್ನೆಲೆಯಲ್ಲಿ ಹಾರ್ದಿಕ ಶುಭಾಶಯಗಳು.

