ಸರ್ವರ್ ಡೌನ್ ಸಮಸ್ಯೆ ಶಾಶ್ವತ ಪರಿಹರಿಸಿ; ಪಡಿತರ ವಿತರಕರ ಕಮಿಷನ್ ಕ್ವಿಂಟಲ್‌ಗೆ ಕನಿಷ್ಠ ₹200ಕ್ಕೆ ಹೆಚ್ಚಿಸಿ

H.Mallikarjun
H.Mallikarjun - Kalyanasiri
3 Min Read
Permanently resolve the server downtime issue; increase the commission for ration distributors to a minimum of ₹200 per quintal

ಸರ್ವರ್ ಡೌನ್ ಸಮಸ್ಯೆ ಶಾಶ್ವತ ಪರಿಹರಿಸಿ; ಪಡಿತರ ವಿತರಕರ ಕಮಿಷನ್ ಕ್ವಿಂಟಲ್‌ಗೆ ಕನಿಷ್ಠ ₹200ಕ್ಕೆ ಹೆಚ್ಚಿಸಿ

ಜಾಹೀರಾತು


ಗಂಗಾವತಿ: ಸರ್ಕಾರಿ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪದೇಪದೇ ಉಂಟಾಗುತ್ತಿರುವ ಸರ್ವರ್ ಡೌನ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗಂಗಾವತಿ ತಾಲೂಕು ಸರ್ಕಾರಿ ಪಡಿತರ ವಿತರಕರ ಸಂಘ (ರಿ.) ಸರ್ಕಾರವನ್ನು ಒತ್ತಾಯಿಸಿದೆ.
ಸರ್ಕಾರದ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಪಡಿತರ ಪಡೆಯಲು ಬರುವ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ವಿಶೇಷವಾಗಿ ವೃದ್ಧರು, ಅಂಗವಿಕಲರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಗಂಟೆಗಟ್ಟಲೆ ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದೆ.
ಸರ್ವರ್ ಕೈಕೊಟ್ಟ ಸಂದರ್ಭದಲ್ಲಿ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಪಡಿತರ ವಿತರಣಾ ಪ್ರಕ್ರಿಯೆಯೇ ಸ್ಥಗಿತಗೊಳ್ಳುತ್ತಿದೆ. ಇದರಿಂದ ತಾಂತ್ರಿಕ ಸಮಸ್ಯೆ ವಿತರಕರ ಕೈಮೀರಿದ ವಿಷಯವಾಗಿದ್ದರೂ, ಫಲಾನುಭವಿಗಳ ಅಸಮಾಧಾನ ಮತ್ತು ಸಾರ್ವಜನಿಕರ ಒತ್ತಡವನ್ನು ಪಡಿತರ ವಿತರಕರೇ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸಂಘ ತಿಳಿಸಿದೆ.


ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ


ಸರ್ವರ್ ಡೌನ್ ಸಮಸ್ಯೆಯನ್ನು ತಾತ್ಕಾಲಿಕವಾಗಿ ಸರಿಪಡಿಸುವ ಬದಲು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಘ ಸರ್ಕಾರವನ್ನು ಆಗ್ರಹಿಸಿದೆ.
ತಾಂತ್ರಿಕ ದೋಷ ಅಥವಾ ಸರ್ವರ್ ಸಮಸ್ಯೆ ಉಂಟಾದ ಸಂದರ್ಭದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸರ್ವರ್ ಸಮಸ್ಯೆಯಿಂದ ನಿಗದಿತ ಅವಧಿಯಲ್ಲಿ ಪಡಿತರ ಪಡೆಯಲು ಸಾಧ್ಯವಾಗದ ಫಲಾನುಭವಿಗಳಿಗೆ ಮುಂದಿನ ತಿಂಗಳಲ್ಲಿ ಅವರ ಹಕ್ಕಿನ ಪಡಿತರವನ್ನು ವಿತರಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದೆ.
ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳು ಪದೇಪದೇ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಬೇಕು. ಪಡಿತರ ವಿತರಕರ ಮೇಲೂ ಅನಗತ್ಯ ಒತ್ತಡ ಉಂಟಾಗದಂತೆ ಇಲಾಖೆಯು ತಾಂತ್ರಿಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕು ಎಂದು ಸಂಘ ಮನವಿ ಮಾಡಿದೆ.


ಪಡಿತರ ವಿತರಕರ ಕಮಿಷನ್ ಹೆಚ್ಚಳಕ್ಕೆ ಒತ್ತಾಯ


ಇದೇ ಸಂದರ್ಭದಲ್ಲಿ ಪಡಿತರ ವಿತರಕರಿಗೆ ನೀಡಲಾಗುತ್ತಿರುವ ಕಮಿಷನ್ ಹಣವನ್ನು ಗಣನೀಯವಾಗಿ ಹೆಚ್ಚಿಸುವಂತೆ ಸಂಘ ಪ್ರಮುಖ ಬೇಡಿಕೆ ಮುಂದಿಟ್ಟಿದೆ.
“ಒಂದು ದೇಶ, ಒಂದು ಪಡಿತರ ಚೀಟಿ” ಪರಿಕಲ್ಪನೆಯಂತೆ ದೇಶದಾದ್ಯಂತ ಪಡಿತರ ವ್ಯವಸ್ಥೆಯಲ್ಲಿ ಸಮಾನತೆ ಹಾಗೂ ನ್ಯಾಯಯುತ ಮಾನದಂಡಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಅದೇ ಮಾದರಿಯಲ್ಲಿ “ಒಂದು ದೇಶ–ನ್ಯಾಯಯುತ ಕಮಿಷನ್” ತತ್ವದಡಿ ಪಡಿತರ ವಿತರಕರಿಗೂ ಸಮರ್ಪಕ ಕಮಿಷನ್ ನೀಡಬೇಕು ಎಂದು ಸಂಘ ಹೇಳಿದೆ.
ನೆರೆ ರಾಜ್ಯಗಳು ಹಾಗೂ ದೇಶದ ಇತರ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ನೀಡಲಾಗುತ್ತಿರುವ ಕಮಿಷನ್‌ಗೆ ಹೋಲಿಸಿದರೆ ಕರ್ನಾಟಕದಲ್ಲಿ ದೊರೆಯುತ್ತಿರುವ ಕಮಿಷನ್ ಪ್ರಸ್ತುತ ದಿನನಿತ್ಯದ ವೆಚ್ಚ ಹಾಗೂ ವಿತರಣಾ ವ್ಯವಸ್ಥೆಯ ನಿರ್ವಹಣೆಗೆ ಸಮರ್ಪಕವಾಗಿಲ್ಲ ಎಂಬುದು ವಿತರಕರ ಅಳಲಾಗಿದೆ.
ಪಡಿತರ ಅಂಗಡಿಗಳ ನಿರ್ವಹಣೆ, ಸಿಬ್ಬಂದಿ ವೇತನ, ವಿದ್ಯುತ್, ಸಾರಿಗೆ ಸೇರಿದಂತೆ ವಿವಿಧ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಕಮಿಷನ್ ಮೊತ್ತದಲ್ಲಿ ನ್ಯಾಯಬೆಲೆ ಅಂಗಡಿಗಳ ನಿರ್ವಹಣೆ ಕಷ್ಟಕರವಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಕ್ವಿಂಟಲ್‌ಗೆ ಕನಿಷ್ಠ ₹200 ಕಮಿಷನ್ ನೀಡಲಿ
ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ, ಗುಜರಾತ್ ಹಾಗೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವ ವ್ಯವಸ್ಥೆಯನ್ನು ಪರಿಗಣಿಸಿ, ಕರ್ನಾಟಕದಲ್ಲಿಯೂ ಸರ್ಕಾರಿ ಪಡಿತರ ವಿತರಕರ ಕಮಿಷನ್ ಹಣವನ್ನು ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹200 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹೆಚ್ಚಿಸಬೇಕು ಎಂದು ಗಂಗಾವತಿ ತಾಲೂಕು ಸರ್ಕಾರಿ ಪಡಿತರ ವಿತರಕರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಪಡಿತರ ವಿತರಕರು ಸರ್ಕಾರದ ಮಹತ್ವದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಡವರು ಮತ್ತು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಆಹಾರಧಾನ್ಯವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಅವರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ಕಮಿಷನ್ ನಿಗದಿಪಡಿಸಬೇಕು ಎಂದು ಸಂಘ ಮನವಿ ಮಾಡಿದೆ.


ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ,

ತಾಂತ್ರಿಕ ದೋಷದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ, ಸರ್ವರ್ ಸಮಸ್ಯೆಯಿಂದ ಪಡಿತರ ವಂಚಿತರಾದವರಿಗೆ ಮುಂದಿನ ತಿಂಗಳಲ್ಲಿ ಪಡಿತರ ಒದಗಿಸುವ ವ್ಯವಸ್ಥೆ ಹಾಗೂ ಪಡಿತರ ವಿತರಕರ ಕಮಿಷನ್ ಹೆಚ್ಚಳ ಸೇರಿದಂತೆ ತಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಬೇಡಿಕೆಗಳಿಗೆ ಸಂಘದ ಗೌರವಾಧ್ಯಕ್ಷ ಟಿ.ಎಂ. ಚನ್ನಬಸವ ಶಾಸ್ತ್ರಿ, ಅಧ್ಯಕ್ಷ ಕೆ. ಮಂಜುನಾಥ, ಉಪಾಧ್ಯಕ್ಷರಾದ ಎಂ.ಪಿ. ಪಂಪನಗೌಡ, ಎಂ.ಡಿ. ಫಯಾಜ್, ಎಚ್. ವೀರಭದ್ರಪ್ಪ ಹಾಗೂ ಬಿ. ರಾಜಶೇಖರ ಸೇರಿದಂತೆ ನಿರ್ದೇಶಕರು ಮತ್ತು ಪದಾಧಿಕಾರಿಗಳಾದ ಎಚ್.ಎಂ. ಚನ್ನಯ್ಯ ಸಂಗಾಪುರ, ಟಿ.ಜಿ. ಬಾಬು, ವಾಜೇಂದ್ರರಾವ್, ದೇಶಪಾಂಡೆ, ದೊಡ್ಡಬಸಮ್ಮ, ವಿಜಯಲಕ್ಷ್ಮೀ, ಸರಸ್ವತಿ, ಶ್ವೇತಾ, ಶಿವಬಸಮ್ಮ, ಮಂಜುನಾಥ ಕುರಿ, ನಿಂಗಪ್ಪ ವಿಠಲಪುರ, ವಸಂತಗೌಡ, ಶಕ್ಷವಲಿ, ಶಿವರಾಜ್ ರಾಂಪೂರ, ವಿ.ಬಿ. ನಜೀರ್, ಆಯಾಜ್, ಮೌನೇಶ ಪತ್ತಾರ ಹಾಗೂ ಶಂಕರ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

Total Views: 1
ಜಾಹೀರಾತು
Share This Article