ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು: ಕಾರ್ಮಿಕ ಸಂಘಟನೆಗಳ ಆಗ್ರಹ

H.Mallikarjun
H.Mallikarjun - Kalyanasiri
2 Min Read

Labor organizations demand immediate response to construction workers’ issues

ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು: ಕಾರ್ಮಿಕ ಸಂಘಟನೆಗಳ ಆಗ್ರಹ

ಕೊಪ್ಪಳ:ಕರ್ನಾಟಕ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ, ಕೊಪ್ಪಳ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಪತ್ರವನ್ನು ಕೊಪ್ಪಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಐಎಫ್‌ಟಿಯು ಜಿಲ್ಲಾ ಮುಖಂಡ ಬಸವರಾಜ್ ಶೀಲವಂತರ್, ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಾರ್ಮಿಕರ ಹಿತಕ್ಕಾಗಿ ಸಮರ್ಪಕವಾಗಿ ಬಳಸುತ್ತಿಲ್ಲ. ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಸಹಾಯಧನವನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಜಾಹೀರಾತು

ಸಿಐಟಿಯು ಕಾರ್ಮಿಕ ಮುಖಂಡ ಕಾಸಿಂ ಸರ್ದಾರ್ ಮಾತನಾಡಿ,ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರವನ್ನು ರದ್ದುಪಡಿಸಿ, ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸಲು ಮಾಸಿಕ ಪಿಂಚಣಿಯನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು. ಮದುವೆ ಸಹಾಯಧನವನ್ನು ₹2 ಲಕ್ಷಕ್ಕೆ ಏರಿಸಬೇಕು. ಹೆರಿಗೆ ಸಹಾಯಧನವನ್ನು ಚೆಕ್ ಮೂಲಕವಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಎಐಯುಟಿಯುಸಿ ಮುಖಂಡ ಶರಣು ಗಡ್ಡಿ ಮಾತನಾಡಿ, ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಅನಗತ್ಯವಾಗಿ ಕಿಟ್ ಖರೀದಿಸುವ ಪದ್ಧತಿಯನ್ನು ತಕ್ಷಣ ನಿಲ್ಲಿಸಿ, ಅದರ ಬದಲಿಗೆ ಹಣವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಬೋಗಸ್ ಕಾರ್ಡ್‌ಗಳನ್ನು ರದ್ದುಪಡಿಸಿ ನೈಜ ಕಟ್ಟಡ ಕಾರ್ಮಿಕರಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕನಿಷ್ಠ ವೇತನದ ಪುನರ್‌ಪರಿಶೀಲನೆಯನ್ನು ಹಿಂಪಡೆಯಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಎಲ್ಲ ಕಟ್ಟಡ ಕಾರ್ಮಿಕರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಒದಗಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಈ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರನ್ನು ಸಂಘಟಿಸಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಸಮನ್ವಯ ಸಮಿತಿಯು ಎಚ್ಚರಿಕೆ ನೀಡಿತು.

ಈ ಸಂದರ್ಭದಲ್ಲಿಐ ಎಫ್ ಟಿ ಯು ಜಿಲ್ಲಾ ಮುಖಂಡರಾದ ತುಕಾರಾಮ್ ಪಾತ್ರೋಟಿ, ಎಸ್.ಎ. ಗಫಾರ್,ಎ ಐ ಸಿ ಸಿ ಟಿ ಯು ಜಿಲ್ಲಾ ಮುಖಂಡ ಹನುಮಂತಪ್ಪ ಹುಳಿಹೈದರ ಚನ್ನಬಸಪ್ಪ ಪ್ಲಾಸ್ಟರ್ ಅಸೋಸಿಯೇಷನ್,, ಗಾಳೇಪ್ಪ ಮುಂಗೋಲಿ, ಅಮೀರ್ ಪಾಷಾ, ಮಂಜುನಾಥ, ಪಕೀರಪ್ಪ, ಪ್ರಕಾಶ ದೇವರಮನಿ, ನಾಗರಾಜ್ ಹುಲಿಗಿ, ಶರಣಪ್ಪ ಗೊರ್ಪಡೆ, ಯಮನೂರಪ್ಪ ಗಂಗಾವತಿ, ಕುಮಾರ್,ಚಂದ್ ಭಾಷಾ, ಬಸವರಾಜ್ ಬೊಮ್ಮನಾಳ, ನಾಗಪ್ಪ ತಸೀಲ್ದಾರ್,ಯಲ್ಲಪ್ಪ ಬೋಚನಲ್ಲಿ ಮರಿಸ್ವಾಮಿ,ಷಣ್ಮುಖ, , ಇಸ್ಮೈಲ್ ಇಟ್ಟಿಗೆ ಹನುಮೇಶ್ ನಿಲೋಗಲ್ ಚಾಂದ್ ಪಾಷಾ ರೇಣುಕಮ್ಮ ರಾಜೇಶ್ವರಿ ಲಕ್ಷ್ಮಿ ಉಪ್ಪಾರ ಶಿಲ್ಪ ಸಾವಿತ್ರಿ ಸಿಂದಗಿ ಮೈಮುದ ಶಿವಪುರ ಮಹೇಶ್ ಬೆಟಿಗೇರಿ ತಾಜುದ್ದೀನ್ ಬೆಳಗಟ್ಟಿ ಕಾಳಮ್ಮ ಶಕುರ್ಸಾಬ್ ಮೈಬೂಬ್ ದಫೇದಾರ್ ಗೌಸ್ ಸೈಯದ್ ಸಾಬ್ ಕಾಳಪ್ಪ ಕಮ್ಮಾರ್ ಷಣ್ಮುಖ ಸೇರಿದಂತೆ ವಿವಿಧ ಕಟ್ಟಡ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಐದು ನೂರಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.

Total Views: 0
Share This Article