ಗಂಗಾವತಿ: 7ನೇ ವಾರ್ಡಿನಲ್ಲಿ ಕಳಪೆ ಯುಜಿಡಿ ಕಾಮಗಾರಿ; ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ!

H.Mallikarjun
H.Mallikarjun - Kalyanasiri
1 Min Read

Gangavathi: Substandard UGD work in 7th Ward; public outrage against the contractor!

ಗಂಗಾವತಿ: 7ನೇ ವಾರ್ಡಿನಲ್ಲಿ ಕಳಪೆ ಯುಜಿಡಿ ಕಾಮಗಾರಿ; ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ!

ಜಾಹೀರಾತು

ಗಂಗಾವತಿ: ನಗರದ 7ನೇ ವಾರ್ಡಿನಲ್ಲಿ ನಡೆಯುತ್ತಿರುವ ಒಳಚರಂಡಿ (UGD) ಪೈಪ್‌ಲೈನ್ ಕಾಮಗಾರಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಗುತ್ತಿಗೆದಾರ ಶಿವರಾಜ್ ಚಲವಾದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಆರೋಪಗಳು:

  • ಮಾನದಂಡಗಳ ಉಲ್ಲಂಘನೆ: ಯುಜಿಡಿ ಪೈಪ್‌ಲೈನ್ ಕಾಮಗಾರಿಯಲ್ಲಿ ಯಾವುದೇ ಗುಣಮಟ್ಟದ ಮಾನದಂಡಗಳನ್ನು ಪಾಲಿಸದೆ, ತರಾತುರಿಯಲ್ಲಿ ಕಳಪೆ ಕೆಲಸ ಮಾಡಲಾಗಿದೆ.
  • ಮನವಿಗೆ ಸಿಗದ ಸ್ಪಂದನೆ: ಕಾಮಗಾರಿಯನ್ನು ಸರಿಪಡಿಸುವಂತೆ ಸ್ಥಳೀಯರು ಹಲವು ಬಾರಿ ಗುತ್ತಿಗೆದಾರರಿಗೆ ಮನವಿ ಮಾಡಿದರೂ, ಗುತ್ತಿಗೆದಾರ ಶಿವರಾಜ್ ಚಲವಾದಿ ಅವರು ಸಾರ್ವಜನಿಕರ ಅಹವಾಲಿಗೆ ಕಿಂಚಿತ್ತೂ ಸ್ಪಂದಿಸದೆ ಉಡಾಫೆ ಹಾಗೂ ನಿರ್ಲಕ್ಷ್ಯ ವಹಿಸಿದ್ದಾರೆ.
  • ಸ್ವಂತ ಖರ್ಚಿನಲ್ಲಿ ದುರಸ್ತಿ: ಗುತ್ತಿಗೆದಾರನ ಬೇಜವಾಬ್ದಾರಿತನದಿಂದ ಬೇಸತ್ತ ವಾರ್ಡಿನ ನಿವಾಸಿಗಳೇ ತಾವೇ ಸ್ವತಃ ಮುಂದೆ ಬಂದು, ತಮ್ಮ ಸ್ವಂತ ಹಣದಿಂದ ಯುಜಿಡಿ ಪೈಪ್‌ಲೈನ್ ಕಾಮಗಾರಿಯನ್ನು ದುರಸ್ತಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕರ ಆತಂಕ:

ಈ ಕಳಪೆ ಕಾಮಗಾರಿಯಿಂದಾಗಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಅಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ಒಳಚರಂಡಿ ಪೈಪ್‌ಲೈನ್‌ಗಳು ಬ್ಲಾಕ್ ಆಗಿ ಇಡೀ ವಾರ್ಡಿನಲ್ಲಿ ತೀವ್ರ ಸ್ವರೂಪದ ಒಳಚರಂಡಿ ಸಮಸ್ಯೆ ತಲೆದೂರುವ ಸಾಧ್ಯತೆಯಿದೆ ಎಂದು ನಿವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಗೆ ನೇರ ಎಚ್ಚರಿಕೆ ಹಾಗೂ ಒತ್ತಾಯ:

ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಕಾಮಗಾರಿಯನ್ನು ಪರಿಶೀಲಿಸಬೇಕು. ಗುತ್ತಿಗೆದಾರನಿಗೆ ನಿಯಮಾವಳಿಗಳ ಪ್ರಕಾರ ಗುಣಮಟ್ಟದ ಕಾಮಗಾರಿ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಸಾರ್ವಜನಿಕರ ಹಣವನ್ನು ಪೋಲು ಮಾಡಿ, ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಗುತ್ತಿಗೆದಾರ ಶಿವರಾಜ್ ಚಲವಾದಿ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಮಾಧ್ಯಮಗಳ ಮೂಲಕ ಉನ್ನತ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.


Total Views: 3
Share This Article