
Chief Minister schedules meeting for June 13: District Collector Dr. Suresh B. Itnal holds meeting with officials

ಮುಖ್ಯಮಂತ್ರಿಗಳಿಂದ ಜೂನ್ 13ಕ್ಕೆ ಸಭೆ ನಿಗದಿ: ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ

ಕೊಪ್ಪಳ ಜೂನ್ 11, (ಕರ್ನಾಟಕ ವಾರ್ತೆ): ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಜೂನ್ 13 ರಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಜೂನ್ 11ರಂದು ಸಭೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಮುಂಗಾರು ಆರಂಭ ಹಿನ್ನೆಲೆ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ, ರಸಗೊಬ್ಬರ ವಿತರಣೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸ್ಪಂದನೆ ನೀಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಸಹ ತಮ್ಮ ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಬೇಕು. 2026-27ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿ ಮುಕ್ತಾಯದ ಹಂತಕ್ಕೆ ಬಂದಿದ್ದು ಆಯಾ ಇಲಾಖೆಗಳ ಅಧಿಕಾರಿಗಳು ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದು ಸೂಚನೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ರೈತರ ಬೇಡಿಕೆ ಹಾಗೂ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನೀಕರಿಸಿ, ನಿಯಮಾನುಸಾರ ವಿತರಿಸಿ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟಗಾರರಿಗೆ ನಿಯಮ ಪಾಲನೆ ಕಡ್ಡಾಯಗೊಳಿಸಿ. ಹೆಚ್ಚಿನ ದರ ಅಥವಾ ಕಳಪೆ ಬೀಜ, ರಸಗೊಬ್ಬರ ಮಾರಾಟ ಮಾಡದಂತೆ ಎಚ್ಚರ ವಹಿಸಿ. ಮಳೆಯಿಂದ ಆಗಬಹುದಾದ ಅವಘಡಗಳ ಬಗ್ಗೆ ಎಚ್ಚರ ವಹಿಸಿ. ಅಂಗನವಾಡಿ, ಶಾಲಾ ಕಾಲೇಜು ಕಟ್ಟಡಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ತಿಗೊಳಿಸಿ. ಅವಘಡ ಸಂದರ್ಭದಲ್ಲಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲು ಸನ್ನದ್ಧರಾಗಿರಿ ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಈಗಾಗಲೇ ಶಾಲೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ಬಟ್ಟೆ ಮತ್ತು ಶೂ ಸಾಕ್ಸ್ ವಿತರಣೆಯನ್ನು ಕಾಲಮಿತಿಯೊಳಗೆ ನಿರ್ವಹಣೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಈಗಿರುವ ಒಟ್ಟು ವಸತಿ ನಿಲಯಗಳೆಷ್ಟು? ವಿದ್ಯಾರ್ಥಿಗಳ ಸಂಖ್ಯೆ? ಸ್ವಂತ ಕಟ್ಟಡ ಅಥವಾ ಬಾಡಿಗೆ ಕಟ್ಟಡ, ವಸತಿ ನಿಲಯಕ್ಕೆ ನಿವೇಶನದ ಬೇಡಿಕೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಲು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಂಟಿ ಕೃಷಿ ನಿರ್ದೇಶಕರಾದ ಜೆ.ಡಿ ಕೃಷ್ಣಮೂರ್ತಿ ಮಾತನಾಡಿ, ಈ ವರ್ಷ 10 ಜೂನ್ 2026 ರವರೆಗೆ ಜಿಲ್ಲೆಯ ವಾಡಿಕೆ ಮಳೆ 112 ಮಿ.ಮೀ. ಇದ್ದು, ವಾಸ್ತವಿಕವಾಗಿ 159 ಮಿ.ಮೀ. ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ.41 ರಷ್ಟು ಅಧಿಕ ಮಳೆಯಾಗಿದ್ದು, ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಉತ್ತಮ ಹಸಿ ಮಳೆಯಾಗಿದೆ. ಜಿಲ್ಲೆಯ ಒಟ್ಟು ಬೆಳೆ ವಿಸ್ತೀರ್ಣ ಗುರಿ 3.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಈಗಾಗಲೇ 1.32 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬಿತ್ತನೆ ಕಾರ್ಯವು ಚುರುಕುಗೊಂಡಿರುತ್ತದೆ. ಈ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯ ಹಿನ್ನೆಲೆ ರೈತರು ಸುಮಾರು 1.22 ಲಕ್ಷ ಹೆಕ್ಟೇರ್ ಮೆಕ್ಕೆಜೋಳ, 0.32 ಲಕ್ಷ ಹೆಕ್ಟೇರ್ ಸಜ್ಜೆ, 0.44 ಲಕ್ಷ ಹೆಕ್ಟೇರ್ ಹೆಸರು ಬೆಳೆ ಹಾಗೂ 0.40 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಗೆ ರೈತರು ಮುಂದಾಗಿರುತ್ತಾರೆ. ಜಿಲ್ಲೆಯ ಮುಂಗಾರು ಹಂಗಾಮಿನ ಒಟ್ಟು ರಸಗೊಬ್ಬರ ಬೇಡಿಕೆಯು 1,17,703 ಮೆಟ್ರಿಕ್ ಟನ್ ಆಗಿದ್ದು, ಹಂಗಾಮಿನ ಆರಂಭದಲ್ಲಿ 26,440 ಮೆಟ್ರಿಕ್ ಟನ್ ಆರಂಭಿಕ ಶಿಲ್ಕು ಲಭ್ಯವಿದ್ದು, ಇದುವರೆಗೆ 22,490 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ಹೀಗಾಗಿ ಒಟ್ಟು ಲಭ್ಯತೆ 48,930 ಮೆಟ್ರಿಕ್ ಟನ್ ಆಗಿದ್ದು, ಇದರಲ್ಲಿ 25,978 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಗೊಂಡಿರುತ್ತದೆ. ಪ್ರಸ್ತುತ ಜಿಲ್ಲೆಯ ವಿವಿಧ ಮಾರಾಟ ಕೇಂದ್ರಗಳಲ್ಲಿ 22,952 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ರಸಗೊಬ್ಬರಗಳನ್ನು ಸಮರ್ಪಕವಾಗಿ ವಿತರಣೆ ಮಾಡಲು ಇಲಾಖೆ ಕ್ರಮ ಕೈಗೊಂಡಿದೆ. ಯೂರಿಯಾ 8,186 ಮೆಟ್ರಿಕ್ ಟನ್, ಡಿ ಎ ಪಿ 2,571 ಮೆಟ್ರಿಕ್ ಟನ್, ಎಂ ಓ ಪಿ 1,207 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 10,422 ಮೆಟ್ರಿಕ್ ಟನ್ ಹಾಗೂ ಎಸ್ ಎಸ್ ಪಿ 566 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಡಿಎಫ್‌ಒ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಟಿ., ನಗಾರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರ, ಜಂಟಿ ತೋಟಗಾರಿಕೆ ನಿರ್ದೇಶಕ ಕೃಷ್ಣ ಉಕ್ಕುಂದ, ಡಿಡಿಪಿಐ ಸೋಮಶೇಖರಗೌಡ ಪಾಟೀಲ್, ಡಿಡಿಪಿಯು ಜಗದೀಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
