ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ; 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ ಸಂಘಟನೆ ಮುಖಂಡರು

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Illegal transportation of ration rice detected; organization leaders called 112 helpline and handed over to police




ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ; 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ ಸಂಘಟನೆ ಮುಖಂಡರು

ಜಾಹೀರಾತು

ಗಂಗಾವತಿ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿದ ವಿವಿಧ ಸಂಘಟನೆಗಳ ಮುಖಂಡರು, 112 ಸಹಾಯವಾಣಿಗೆ ಕರೆ ಮಾಡಿ ವಾಹನವನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

ಕುಡುತಿನಿ ಭಾಗದ ವ್ಯಕ್ತಿಯ ಮೂಲಕ ಕ್ಯಾಂಟರ್ ವಾಹನದಲ್ಲಿ 50 ಕೆಜಿ ತೂಕದ ಚೀಲಗಳಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗಂಗಾವತಿ ಮೂಲಕ ಬೇರೆಡೆಗೆ ಸಾಗಾಟ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಪಡೆದ ಸಂಘಟನೆ ಮುಖಂಡರು 112 ಸಹಾಯವಾಣಿಗೆ ಕರೆ ಮಾಡಿ, ಗಂಗಾವತಿ ನಗರದ ಮರಳಿ ಗ್ರಾಮದ ಸಮೀಪದ ಟೋಲ್ ಗೇಟ್ ಬಳಿ ವಾಹನವನ್ನು ತಡೆದು 112 ಸಹಾಯವಾಣಿ ಪೊಲೀಸ್ ಅಧಿಕಾರಿ ಮಂಜುನಾಥ್ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಕ್ಯಾಂಟರ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ವಾಹನವನ್ನು ಅವರ ವಶಕ್ಕೆ ಒಪ್ಪಿಸಿದರು.

ಬಡವರಿಗಾಗಿ ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕೆಲ ಅಕ್ರಮ ದಂಧೆಕೋರರು ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಖರೀದಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಮುಖಂಡರು ಆಗ್ರಹಿಸಿದರು.

ನಂತರ ಪೊಲೀಸ್ ಠಾಣೆಗೆ ಆಗಮಿಸಿದ ಮುಖಂಡರು, ಪಡಿತರ ಅಕ್ಕಿ ಅಕ್ರಮ ದಂಧೆಯಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನುಬದ್ಧ ಕ್ರಮ ಜರುಗಿಸಬೇಕೆಂದು ಸಂಬಂಧಪಟ್ಟ ಇಲಾಖೆಯನ್ನು ಮಾಧ್ಯಮದ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಗ್ರಾಮೀಣ ಅಧಿಕಾರಿ ಶೇಖರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಕುರಿತು ಪೊಲೀಸ್ ಇಲಾಖೆಯ ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಬಾಬುಗೌಡ, ಕರ್ನಾಟಕ ರಕ್ಷಣಾ ಸೇನಾ ಜಿಲ್ಲಾಧ್ಯಕ್ಷ ಹನುಮೇಶ್ ನಡಲಮನಿ, ಅಖಿಲ ಭಾರತ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಯಮನೂರಪ್ಪ ಗೋನಾಳ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಗಂಗಾವತಿ ತಾಲೂಕು ಅಧ್ಯಕ್ಷ ಬಸವರಾಜ ಕಲ್ಗುಡಿ, ಕಲ್ಯಾಣ ಕರ್ನಾಟಕ ಜಿಲ್ಲಾಧ್ಯಕ್ಷ ಆಂಜನೇಯ ಈಡಿಗೇರ್,ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Total Views: 0
Share This Article