
Gangavathi Municipal Corporation's indifference: Hellish roads, piles of garbage pose a threat of epidemic!
ಗಂಗಾವತಿ ನಗರಸಭೆಯ ಉದಾಸೀನತೆ: ನರಕಸದೃಶವಾದ ರಸ್ತೆಗಳು, ಕಸದ ರಾಶಿಯಿಂದ ಸಾಂಕ್ರಾಮಿಕ ರೋಗದ ಭೀತಿ!

ಗಂಗಾವತಿ: ಗಂಗಾವತಿ ನಗರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೂಲಭೂತ ಸೌಕರ್ಯಗಳು ಸಂಪೂರ್ಣವಾಗಿ ಹಳ್ಳ ಹಿಡಿದಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಮತ್ತು ವಾರ್ಡ್‌ಗಳು ಸಾರ್ವಜನಿಕರ ಸಂಚಾರಕ್ಕೆ
ಯೋಗ್ಯವಾಗಿಲ್ಲದಂತಾಗಿದೆ.ಮೃತ್ಯುಕೂಪಗಳಾದ ತಗ್ಗು-ಗುಂಡಿಗಳುನಗರದ ಪ್ರಮುಖ ರಸ್ತೆಗಳಾದ ಜುಲೈ ಸರ್ಕಲ್ ದಿಂದ ಗೌಳಿಮಾದೆವಪ್ಪ ರಸ್ತೆ, ಭಾಗಿರತಿ ವೃತ್ತದಿಂದ ನೀಲಕಂಟೇಶ್ವರ. ವೃತ್ತದ ವರೆಗೆ, ಸಿ.ಬಿ.ಎಸ್ ವೃತ್ತ, ಇಸಾಂಪುರ ರಸ್ತೆ] ಹಾಗೂ ಗುಂಡಮ್ಮ ಕ್ಯಾಂಪ್ ಮಾರ್ಕೆಟ್ ಮುಂದೆ ರಸ್ತೆ, ಸುತ್ತಮುತ್ತಲಿನ ವಾರ್ಡ್‌ಗಳ ಒಳರಸ್ತೆಗಳು ಸಂಪೂರ್ಣವಾಗಿ ಬಾಯ್ತೆರೆದಿವೆ. ರಸ್ತೆ ತುಂಬಾ ಬಿದ್ದಿರುವ ಬೃಹತ್ ತಗ್ಗು-ಗುಂಡಿಗಳಿಂದಾಗಿ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ದಿನನಿತ್ಯ ಪ್ರಾಣಭಯದಲ್ಲೇ ಸಂಚರಿಸಬೇಕಾಗಿದೆ. ಶಾಲಾ ಮಕ್ಕಳು, ವೃದ್ಧರು ಹಾಗೂ ಪಾದಚಾರಿಗಳು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ನಗರಸಭೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.ಕಸ ಮುಕ್ತವಲ್ಲ, ಕಸದ ಯುಕ್ತ ನಗರ!ಇನ್ನೊಂದೆಡೆ, ನಗರದ ಗುಂಡಮ್ಮ ಕ್ಯಾಂಪ್ ಭಾಗಗಳಲ್ಲಿ ದಿನಗಟ್ಟಲೆ ಕಸ ವಿಲೇವಾರಿಯಾಗದೆ ರಸ್ತೆ ಬದಿಗಳಲ್ಲೇ ಕಸದ ಬೆಟ್ಟ ನಿರ್ಮಾಣವಾಗಿದೆ.
ಕಸ ಕೊಳೆತು ಇಡೀ ಪರಿಸರ ಗಬ್ಬು ನಾರುತ್ತಿದ್ದು, ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಿಗಳು ಮೂಗು ಮುಚ್ಚಿಕೊಂಡು ಬದುಕುವ ನರಕಯಾತನೆ ಎದುರಾಗಿದೆ. ಕಸದ ರಾಶಿಗೆ ಬೀದಿನಾಯಿ ಹಾಗೂ ಹಂದಿಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಕಂಟಕವಾಗಿದೆ.
ರೋಗರುಜಿನಗಳ ಭೀತಿ: ಹೆಚ್ಚಿದ ಸೊಳ್ಳೆಗಳ ಕಾಟದುರ್ವಾಸನೆ ಹಾಗೂ ಕಸದ ರಾಶಿಯಿಂದಾಗಿ ಇಡೀ ನಗರದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ.
ಇದರಿಂದಾಗಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ ಗುನ್ಯಾದಂತಹ ಪ್ರಾಣಾಪಾಯ ತರುವ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕರ ವಸೂಲಾತಿಯಲ್ಲಿ ಮುಂಚೂಣಿಯಲ್ಲಿರುವ ನಗರಸಭೆ, ಸಾರ್ವಜನಿಕರಿಗೆ ಕನಿಷ್ಠ ಸ್ವಚ್ಛತೆ ಹಾಗೂ ಉತ್ತಮ ರಸ್ತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಸಾರ್ವಜನಿಕರ ನೇರ ಎಚ್ಚರಿಕೆ“ನಗರಸಭೆಗೆ ನಾವು ತೆರಿಗೆ ಕಟ್ಟುತ್ತಿರುವುದು ರೋಗಗಳನ್ನು ಕೊಂಡುಕೊಳ್ಳುವುದಕ್ಕಲ್ಲ. ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು ಮತ್ತು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು,” ಎಂದು ನಗರದ ನಾಗರಿಕರು ತೀವ್ರ ಎಚ್ಚರಿಕೆ ನೀಡಿದ್ದಾರೆ.
