
National Snake Bite Control Awareness Program in Venkatagiri

ವೆಂಕಟಗಿರಿಯಲ್ಲಿ ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ ಕಾರ್ಯಕ್ರಮ

ಕೊಪ್ಪಳ ಜೂನ್ 03 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಹಾಗೂ ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ (ಮೇ 30 ರಂದು) ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ “ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ” ಕಾರ್ಯಕ್ರಮ ನಡೆಯಿತು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ದೇವಮ್ಮ ಅವರು ಮಾತನಾಡಿ, ಹಾವು ಕಡಿತದಿಂದ ಉಂಟಾಗುವ ಮರಣವನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಾರತ ಹಳ್ಳಿಗಳ ದೇಶ ಶೇ. 70 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಭಾರತದಲ್ಲಿ ಪ್ರಮುಖ 4 ವಿಷಕಾರಿ ಹಾವುಗಳಾದ ನಾಗರಹಾವು, ಕಟ್ಟಾವು, ಕೊಳಕುಮಂಡಲ ಹಾವು ಹಾಗೂ ಗರಗಸ ಮಂಡಲ ಹಾವು ಕಡಿತದಿಂದ ಉಂಟಾಗುವ ಸಾವುಗಳಲ್ಲಿ 90% ಅಧಿಕ ಸಾವುಗಳಿಗೆ ಕಾರಣವಾಗುತ್ತವೆ. ಈ 4 ಹಾವುಗಳ ಬಗ್ಗೆ ಎಚ್ಚರಿಗೆ ವಹಿಸಬೇಕು ನಾಗರಹಾವು ಬಿಟ್ಟು ಉಳಿತ 3 ವಿಷಕಾರಿ ಹಾವುಗಳು ರಾತ್ರಿವೇಳೆ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಹಾಗಾಗಿ ರಾತ್ರಿವೇಳೆ ಹೊರಗಡೆ ಹೋಗುವಾಗ ಟಾರ್ಚ್ ಬಳಸಬೇಕು. ಮನೆ ಅಂಗಳವನ್ನು ಇಲಿ ಹೆಗ್ಗನಗಳಂತಹ ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಸಬೇಕು. ಮನೆಯಂಗಳ ಅಥವಾ ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ತಿರುಗಾಡುವ ಸ್ಥಳಗಳಲ್ಲಿ ಗಿಡಗಂಟಿಗಳನ್ನು ಕಡಿದು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದರು.
ಹಾವುಗಳಿರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವಾಗ ಶೂಗಳನ್ನು ಬಳಸುವುದು. ರಾತ್ರಿ ಮನೆಯ ಹೊರಗೆ ಹಾಗೂ ಹೊಲಗದ್ದೆಗಳಲ್ಲಿ ಮಲಗಬೇಕಾದಾಗ ನೆಲದಲ್ಲಿ ಮಲಗದೆ ಎತ್ತರ ಪ್ರದೇಶದ ಮಂಚ ಬಳಸುವುದು ಅಗತ್ಯವಾಗಿದೆ. ನೆಲದಲ್ಲಿ ಮಲಗಲೇ ಬೇಕೆಂದರೆ ಕಡ್ಡಾಯವಾಗಿ ಸೊಳ್ಳೆಪರದೆ ಬಳಸುವುದು ಹಾಗೂ ರೈತರು ಹೊಲದಲ್ಲಿ ದನ-ಕರಗಳಿಗೆ ಮೇವು ಹಾಗೂ ಹಸಿಹುಲ್ಲು ಕಿಳುವಾಗ ಕುಡುಗೊಲು ಬಳಸಬೇಕು. ಒಂದು ವೇಳೆ ಹಾವು ಕಚ್ಚಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ 40 ನಿಮಿಷದೊಳಗಾಗಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಹಾವು ಕಡೆದ ವ್ಯಕ್ತಿಯನ್ನು ಸಮಾದಾನ ಪಡಿಸಿ, ಗಾಬರಿ ಪಡಿಸಬೇಡಿ. ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ. ರಕ್ತಬಂಧಕಪಟ್ಟಿ ಕಟ್ಟಬೇಡಿ. ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಿ. ಗಾಯವನ್ನು ಕತ್ತರಿಸಬೇಡಿ, ಏನನ್ನು ಹಚ್ಚಬೇಡಿ. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಿ. ನಾಟಿ ಔಷಧ ಅಥವಾ ಅಸುರಕ್ಷಿತ ಚಿಕಿತ್ಸಾ ಪದ್ದತಿಯನ್ನು ಅವಲಂಬಿಸಬೇಡಿ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತ-ಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇಟ್ಟುಕೊಂಡು ಇದರ ಬಗ್ಗೆ ಇತರರಿಗೂ ಮಾಹಿತಿ ನೀಡಿ, ಜಾಗೃತರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಂತೋಷ ಕುಮಾರ ಸೇರಿದಂತೆ ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ನಾಗರಿಕರು, ಗರ್ಭಿಣಿ ಬಾಣಂತಿಯರು ಭಾಗವಹಿಸಿ, ಯಶಸ್ವಿಗೊಳಸಿದರು.
