ಎಲ್ಲಾ ವರ್ಗಗಳ ಕಾರ್ಮಿಕರಿಗೆ ಕನಿಷ್ಟ ವೇತನ ಪರಿಷ್ಕರಣೆ ಒತ್ತಾಯ: ವಿಜಯ್‌ ದೊರೆರಾಜು

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Demand for minimum wage revision for all categories of workers: Vijay Doreraju




ಎಲ್ಲಾ ವರ್ಗಗಳ ಕಾರ್ಮಿಕರಿಗೆ ಕನಿಷ್ಟ ವೇತನ ಪರಿಷ್ಕರಣೆ ಒತ್ತಾಯ: ವಿಜಯ್‌ ದೊರೆರಾಜು

ಜಾಹೀರಾತು

ಗಂಗಾವತಿ: ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಸರ್ಕಾರ ಕನಿಷ್ಠ ವೇತನ ಹೆಚ್ಚಳ ಮಾಡಿದ್ದು, ಇದರ ಅನ್ವಯ ಕಾರ್ಮಿಕ ಇಲಾಖೆಯ ಅಧೀನ ಕಾರ್ಯದರ್ಶಿಗಳು ದಿನಾಂಕ: 22-05-2026 ರಂದು ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷರಾದ ವಿಜಯ್‌ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಇಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ವತಿಯಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನಾಲೆಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಗ್ಯಾಂಗ್ ‌ಮನ್, ಗೇಜ್ ರೀಡರ್, ವರ್ಕಿಂಗ್ ಇನ್ಸಪೆಕ್ಟರ್, ವಾಚ್ ‌ಮನ್, ಸವಡಿ, ಕಂಪ್ಯೂಟರ್ ಆಪರೇಟರ್, ಹೌಸ್ ‌ಕೀಪಿಂಗ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ವಿಭಾಗಗಳಲ್ಲಿ ಕೆಲಸ ಮಾಡುವ ಡ್ರೈವರ್ಸ್‌, ಲೋಡರ್ಸ್, ಕ್ಲೀನರ್ಸ್, ಗಾರ್ಡನರ್‌, ಸೂಪರವೈಸರ್ಸ್‌, ಬಸ್ ನಿಲ್ದಾಣದ ಸ್ವಚ್ಛತಾ ವಿಭಾಗದ ಸಫಾಯಿ ಕರ್ಮಚಾರಿ ಕಾರ್ಮಿಕರು ಹಾಗೂ ಇತರೆ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಗಂಗಾವತಿ ಕಾರ್ಮಿಕ ನಿರೀಕ್ಷಕರ ಮುಖಾಂತರ ಬೆಂಗಳೂರಿನ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಹಾಗೂ ಕಲಬುರ್ಗಿ ಪ್ರಾದೇಶಿಕ ಕಛೇರಿಯ ಉಪ ಕಾರ್ಮಿಕ ಆಯುಕ್ತರುರವರುಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪರಶುರಾಮ ಮಾತನಾಡಿ, ಕೌಶಲ್ಯರಹಿತ ಕಾರ್ಮಿಕರಿಂದ ಹಿಡಿದು ಹೆಚ್ಚು ಕೌಶಲ್ಯಪೂರ್ಣ ಕಾರ್ಮಿಕರವರೆಗಿನ ವರ್ಗಗಳಿಗೆ ಪರಿಷ್ಕೃತ ವೇತನಗಳು ನಿಗದಿಗೊಳಿಸಲಾಗಿದೆ. ನಮ್ಮ ಎಐಸಿಸಿಟಿಯು ವಾಸ್ತವಿಕ ಜೀವನ ವೆಚ್ಚದ ಅಧ್ಯಯನಗಳ ಆಧಾರದ ಮೇಲೆ ತಿಂಗಳಿಗೆ ರೂ. 42,000 ಕನಿಷ್ಠ ವೇತನವನ್ನು ಕೋರಿದ್ದನ್ನು ಇಲ್ಲಿ ಸ್ಮರಿಸುತ್ತೇವೆ. ಕನಿಷ್ಠ ವೇತನದಲ್ಲಿನ ಹೆಚ್ಚಳವು ಕಾರ್ಮಿಕರ ಖರೀದಿ ಶಕ್ತಿ ಮತ್ತು ಬಳಕೆ ಶಕ್ತಿಯನ್ನು ಹೆಚ್ಚಿಸುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುತ್ತದೆ. ಹೆಚ್ಚಿನ ಬಳಕೆಯು ಒಟ್ಟು ಬೇಡಿಕೆಯನ್ನು ಉತ್ತೇಜಿಸುತ್ತದೆ. ಇದು ಸರಕು ಮತ್ತು ಸೇವೆಗಳ ದೊಡ್ಡ ಉತ್ಪಾದನೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ವಿವಿಧ ವಲಯಗಳಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ವೇತನ ಹೆಚ್ಚಳದಿಂದ ಮಾತ್ರ ಭಾರತದ ಆರ್ಥಿಕತೆ ಬಲಗೊಳ್ಳಲು ಸಾಧ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ವರ್ಗಗಳ ಕಾರ್ಮಿಕರ ವೇತನ ಪರಿಷ್ಕರಣೆ ಮಾಡುವುದು ಅವಶ್ಯವಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ತ್ಯಾಜ್ಯ ಸಾಗಿಸುವ ವಾಹನ ಚಾಲಕರಾದ ಕೀಶು ನಾಯ್ಕ, ಆಲಂಸಾಬ, ಗಣೇಶ, ಮಾರುತಿ ಹಾಗೂ ಪೌರಕಾರ್ಮಿಕರಾದ ಮಾಯಮ್ಮ, ಕೆಂಚಮ್ಮ, ಶೇಖರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Total Views: 0
Share This Article