
Appeal to the Chief Minister demanding protection of SC/ST reservations and inclusion in the 9th Schedule


ಎಸ್.ಸಿ/ಎಸ್.ಟಿ ಮೀಸಲಾತಿ ರಕ್ಷಣೆ ಹಾಗೂ ೯ನೇ ಷೆಡ್ಯೂಲ್‌ಗೆ ಸೇರಿಸಲು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ

ಕೊಪ್ಪಳ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (೧೭.೧%) ಮತ್ತು ಪರಿಶಿಷ್ಟ ಪಂಗಡಗಳ (೬.೯೫%) ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕ್ರಮವಾಗಿ ಶೇ. ೧೭ ಹಾಗೂ ಶೇ. ೭ಕ್ಕೆ (ಒಟ್ಟು ೫೬%) ಹೆಚ್ಚಿಸಿ ಜಾರಿಗೆ ತರಲಾದ ೨೦೨೨ರ ಅಧಿನಿಯಮವನ್ನು ಸಂವಿಧಾನದ ೯ನೇ ಷೆಡ್ಯೂಲ್‌ಗೆ ಸೇರಿಸಲು ಮತ್ತು ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಒತ್ತಾಯಿಸಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಕೊಪ್ಪಳ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಡಾ. ಕೆ.ಎನ್. ಪಾಟೀಲ ಸೇರಿದಂತೆ ಪ್ರಮುಖ ನಾಯಕರು ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಂಟಿ ಮನವಿ ಸಲ್ಲಿಸಿದರು.
ಅಶೋಕ ವೃತ್ತದಲ್ಲಿ ಆಗಮಿಸಿದ ಸಮುದಾಗಳ ಮುಖಂಡರು ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ದಶಕಗಳ ಹೋರಾಟ ಹಾಗೂ ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಮತ್ತು ಸುಭಾಷ್ ಆಡಿ ಆಯೋಗಗಳ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ೫೬% ಮೀಸಲಾತಿಯಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳು ಸೌಲಭ್ಯ ಪಡೆದಿದ್ದರು. ಆದರೆ, ಇತ್ತೀಚೆಗೆ ಹೈಕೋರ್ಟ್ ಈ ಕಾನೂನಿಗೆ ತಡೆಯಾಜ್ಞೆ ನೀಡಿರುವುದರಿಂದ ಈ ಸಮುದಾಯಗಳ ಸಾಮಾಜಿಕ ನ್ಯಾಯಕ್ಕೆ ಭಾರಿ ಹಿನ್ನಡೆಯಾಗಿದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಶಾಶ್ವತ ರಕ್ಷಣೆಗಾಗಿ ಇದನ್ನು ಸಂವಿಧಾನದ ೯ನೇ ಷೆಡ್ಯೂಲ್‌ಗೆ ಸೇರಿಸಲು ೨೦೨೫ರ ಬೆಳಗಾವಿ ಅಧಿವೇಶನದಲ್ಲಿ ಸರ್ವಸಮ್ಮತ ನಿರ್ಣಯ ಕೈಗೊಳ್ಳಲಾಗಿದ್ದರೂ, ಕೇಂದ್ರ ಸರ್ಕಾರದ ಮೇಲೆ ಸೂಕ್ತ ಒತ್ತಡ ಹೇರದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಲಹರಣ ಮಾಡುತ್ತಿವೆ ಎಂದು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪ್ರಮುಖ ಬೇಡಿಕೆಗಳು:
ಸರ್ವಪಕ್ಷಗಳ ಸಭೆ ಮತ್ತು ನಿಯೋಗ: ಈ ವಿಷಯವಾಗಿ ತಕ್ಷಣವೇ ಸರ್ವಪಕ್ಷಗಳ ಸಭೆ ಕರೆಯಬೇಕು ಹಾಗೂ ಪ್ರಧಾನಮಂತ್ರಿಗಳ ಬಳಿಗೆ ಸರ್ವಪಕ್ಷಗಳ ನಿಯೋಗವನ್ನು ಕೊಂಡೊಯ್ಯಬೇಕು.
ನ್ಯಾಯಾಲಯದಲ್ಲಿ ಕಾನೂನು ಹೋರಾಟ: ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸಮರ್ಥ ವಕೀಲರನ್ನು ನೇಮಿಸಬೇಕು. ಒಂದು ವೇಳೆ ತಡೆಯಾಜ್ಞೆ ತೆರವಾಗದಿದ್ದರೆ ತಕ್ಷಣವೇ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ (SLP) ದಾಖಲಿಸಬೇಕು.
ಜನಪ್ರತಿನಿಧಿಗಳ ತುರ್ತು ಸಭೆ: ಎಸ್.ಸಿ/ಎಸ್.ಟಿ ಹಾಗೂ ಒಬಿಸಿ ವರ್ಗದ ಜನಪ್ರತಿನಿಧಿಗಳು ಮತ್ತು ಕಾನೂನು ತಜ್ಞರ ತುರ್ತು ಸಭೆ ಕರೆದು ಚರ್ಚಿಸಬೇಕು.
ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರುದ್ಧ ಕ್ರಮ: ಲಕ್ಷಾಂತರ ಜನರು ಸುಳ್ಳು ಎಸ್.ಸಿ/ಎಸ್.ಟಿ ಜಾತಿ ಪ್ರಮಾಣ ಪತ್ರ ಪಡೆದು ಸೌಲಭ್ಯ ಕಬಳಿಸುತ್ತಿದ್ದು, ಅಂತಹವರ ಹಾಗೂ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ರಾಜ್ಯದ ಎಲ್ಲಾ ಸಂಸದರು, ಶಾಸಕರು ಮತ್ತು ಮಂತ್ರಿಗಳು ಪಕ್ಷಾತೀತವಾಗಿ ಒತ್ತಡ ತಂದು ಈ ಕಾನೂನನ್ನು ಸಂವಿಧಾನದ ೯ನೇ ಷೆಡ್ಯೂಲ್‌ಗೆ ಸೇರಿಸಲು ಹೋರಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಲಿಂಗಸೂರ ಗೋಲಪಲ್ಲಿ ವಾಲ್ಮೀಕಿ ಆಶ್ರಮದ ಸ್ವಾಮೀಜಿ, ಮುಖಂಡರಾದ ರಾಮಣ್ಣ ಕಲ್ಲನವರ, ಟಿ. ರತ್ನಾಕರ, ತುಳಸಿರಾಮ ಬೆಂಗಳೂರು, ಮಂಜುನಾಥ ಜಿ. ಗೊಂಡಬಾಳ, ಹನುಮೇಶ ನಾಯಕ, ಶಿವರಡ್ಡಿ ಕಾರಟಗಿ, ಮಾಲತಿ ನಾಯಕ, ಜ್ಯೋತಿ ಎಂ. ಗೊಂಡಬಾಳ, ಮಂಗಳೇಶ ಕುಕನೂರ, ಮಾನಪ್ಪ ಪೂಜಾರ, ಗದ್ದೆಪ್ಪ ನಾಯಕ, ವೆಂಕಟೇಶ ನಾಯಕ, ರಾಜಣ್ಣ ಚಿತ್ರದುರ್ಗ, ಮುತ್ತು ನಾಯ್ಕರ, ಬಸವರಾಜ ಶಹಪೂರ, ಮಾರ್ಕಂಡಪ್ಪ ಕಲ್ಲನವರ, ಅಂಬಣ್ಣ ನಾಯಕ, ಯಮನೂರಪ್ಪ ಸಿಂಗನಾಳ, ಮಾನಪ್ಪ ಶಾಖಾಪೂರ, ಯಲ್ಲಪ್ಪ ಹಡಗಲಿ, ಹಂಚ್ಯಾಳಪ್ಪ, ಸಂಗಪ್ಪ ಕುಷ್ಟಗಿ, ಬಸವರಾಜ ಕುಷ್ಟಗಿ, ಕೊಟೇಶ ತಳವಾರ, ಪ್ರಶಾಂತ ನಾಯಕ, ಸಂಜೀವ ಇಟಗಿ, ಸಿದ್ದು ಕೋಳಿಪೇಟೆ, ರಾಜೇಶ ಗಂಗಾವತಿ ಅನೇಕರು ಉಪಸ್ಥಿತರಿದ್ದರು.
