
Sewerage has been stagnant in Hatkolli village for decades: People are worried about PDO Manjula's negligence
ಹಚ್ಚೊಳ್ಳಿ ಗ್ರಾಮದಲ್ಲಿ ದಶಕಗಳಿಂದ ಚರಂಡಿ ಗೋಳು: ಪಿಡಿಒ ಮಂಜುಳಾ ನಿರ್ಲಕ್ಷ್ಯಕ್ಕೆ ಜನ ತತ್ತರ

ಸಿರುಗುಪ್ಪ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿಗಡಿ ಭಾಗದ ಗ್ರಾಮವೆಂದು ನಿಷ್ಕಾಳಜಿ ತೋರಲಾಗುತ್ತಿದೆಯೇ? ಹಚ್ಚೊಳ್ಳಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಳಚೆ ನೀರು ನೇರವಾಗಿ ರಸ್ತೆ ಮೇಲೆ ಹರಿದು ಜನಜೀವನ ದುಸ್ತರವಾಗಿದೆ.
ರಸ್ತೆಯೇ ಚರಂಡಿ: ಗ್ರಾಮದ ಒಳರಸ್ತೆಗಳಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಪ್ಲಾಸ್ಟಿಕ್, ಕಸ-ಕಡ್ಡಿ ರಸ್ತೆ ಬದಿಯಲ್ಲಿ ರಾಶಿ ಬಿದ್ದು, ಹಂದಿಗಳು ಇದೇ ನೀರಿನಲ್ಲಿ ಮಲಗಿರುವ ದೃಶ್ಯ ಕಂಡುಬಂದಿದೆ.

ಸಾಂಕ್ರಾಮಿಕ ರೋಗಗಳ ಭೀತಿ ಸ್ಥಳೀಯರನ್ನು ಕಾಡುತ್ತಿದೆ.12 ವರ್ಷದಿಂದ ಒಂದೇ ಪಿಡಿಒ: ಗ್ರಾಮದಲ್ಲಿ 12 ವರ್ಷದಿಂದಲೂ ಒಂದೇ ಸ್ಥಳದಲ್ಲಿ ಪಿಡಿಒ ಕಾರ್ಯನಿರ್ವಹಿಸುತ್ತಿದ್ದರೂ ಮೂಲಸೌಕರ್ಯ ಸಮಸ್ಯೆ ಬಗೆಹರಿಯದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ಮೌನ: ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ದೂರವಾಣಿ ಸಂಪರ್ಕಿಸಿದರೂ ಜಿಲ್ಲಾ ಪಂಚಾಯತ್ ಸಿಇಒ ಹ್ಯಾರಿಸ್, ತಾಲ್ಲೂಕು ಮಟ್ಟದ ಅಧಿಕಾರಿ ಪವನ್ ಕುಮಾರ್ ಹಾಗೂ ಇಲಾಖೆಯ ಯಾವುದೇ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಣದ ಕೊರತೆಯ ನೆಪ? ಬಳ್ಳಾರಿ ಪಂಚಾಯತಿಯಲ್ಲಿ ಮೂಲಭೂತ ಸೌಕರ್ಯಗಳಿಗೇ ಹಣದ ಕೊರತೆ ಎಂಬ ಪ್ರಶ್ನೆ ಎದ್ದಿದೆ. ಇಡೀ ಇಲಾಖೆಯ ಮರ್ಯಾದೆ ತೆಗೆದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಒತ್ತಾಯ: ಗಡಿ ಭಾಗದ ಗ್ರಾಮವೆಂದು ಕಡೆಗಣಿಸದೆ, ತಕ್ಷಣವೇ ಚರಂಡಿ ವ್ಯವಸ್ಥೆ ದುರಸ್ತಿ ಮಾಡಿ, ನೈರ್ಮಲ್ಯ ಕಾಪಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
