
Highway-50: Terrible accident near TB Dam National Highway,

ಹೆದ್ದಾರಿ–50:ಟಿ.ಬಿ.ಡ್ಯಾಂ ರಾಷ್ಟ್ರೀಯ ಹೆದ್ದಾರಿ ಸಮೀಪದ ಭೀಕರ ಅಪಘಾತ,

ವಿಜಯನಗರ (ಹೊಸಪೇಟೆ): ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ಗಡಿಭಾಗದಲ್ಲಿರುವ ತುಂಗಭದ್ರಾ ನದಿಯ ಮೇಲ್ಸೇತುವೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಆರು ಮಂದಿ ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದೆ.
ವೇಗವಾಗಿ ಸಾಗುತ್ತಿದ್ದ ಲಾರಿಯೊಂದು ಟ್ರ್ಯಾಕ್ಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 13ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರೆಲ್ಲರೂ ಕೂಡ್ಲಿಗಿ ತಾಲ್ಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಈ ದುರ್ಘಟನೆ ಇಡೀ ಪ್ರದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ತಕ್ಷಣ ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಬಸವರಾಜ್ ಅಗಸರ ಸಮಾದೇಷ್ಟರು ಹಾಗೂ ಘಟಕಾಧಿಕಾರಿ ಗಿರೀಶ್ ಅವರ ನೇತೃತ್ವದ ತಂಡ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ,ಪೊಲೀಸರ ಸಹಕಾರದೊಂದಿಗೆ ರಕ್ಷಣಾ ಕಾರ್ಯವನ್ನು ಶ್ರಮಪಟ್ಟು ನಿರ್ವಹಿಸಿದರು. ಮೃತದೇಹಗಳನ್ನು ಸ್ಥಳಾಂತರಿಸುವುದು ಹಾಗೂ ಗಾಯಾಳುಗಳನ್ನು ತುರ್ತುವಾಗಿ ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ಅವರು ಮಾನವೀಯತೆ ಮೆರೆದಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದ್ದು,ಅವರ ಸಮಯಪ್ರಜ್ಞೆ ಮತ್ತು ಸೇವಾಭಾವ ಅನೇಕ ಜೀವಗಳನ್ನು ಉಳಿಸಲು ನೆರವಾಗಿದೆ.
