
Government orders have no value: Villagers outraged by Venkatagiri PDO Krishna H for not coming to office even at 9 am!”
“ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲ: ಬೆಳಿಗ್ಗೆ 9 ಆದರೂ ಕಚೇರಿಗೆ ಬಾರದ ವೆಂಕಟಗಿರಿ ಪಿಡಿಒ ಕೃಷ್ಣ ಎಚ್ ವಿರುದ್ಧ ಗ್ರಾಮಸ್ಥರ ಆಕ್ರೋಶ!”


ಗಂಗಾವತಿ: ಕರ್ನಾಟಕ ಸರ್ಕಾರದ ಆದೇಶದಂತೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಉರಿ ಬಿಸಿಲಿನ ಹಿನ್ನೆಲೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಕಾರ್ಯನಿರ್ವಹಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದ್ದರೂ, ವೆಂಕಟಗಿರಿ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಈ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಶನಿವಾರ ಬೆಳಿಗ್ಗೆ ತಮ್ಮ ವಿವಿಧ ಕೆಲಸ ಕಾರ್ಯಗಳಿಗಾಗಿ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದ ಸಾರ್ವಜನಿಕರು, ಬೆಳಿಗ್ಗೆ 9 ಗಂಟೆ ಕಳೆದರೂ ಪಿಡಿಒ ಕೃಷ್ಣ ಎಚ್ ಸೇರಿದಂತೆ ಸಿಬ್ಬಂದಿ ಕಚೇರಿಗೆ ಹಾಜರಾಗದಿರುವುದನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಿಯಮ ಪಾಲನೆ ಮಾಡಬೇಕಾದ ಅಧಿಕಾರಿಗಳೇ ಆದೇಶ ಉಲ್ಲಂಘಿಸಿ ಸಾರ್ವಜನಿಕರನ್ನು ಗಂಟೆಗಳ ಕಾಲ ಕಾಯಿಸುವುದು ಖಂಡನೀಯ ಎಂದು ಗ್ರಾಮಸ್ಥರು ಕಿಡಿಕಾರಿದರು.
“ಸಂಬಳ ಸರ್ಕಾರದಿಂದ, ಸೇವೆ ಜನರಿಗೆ. ಆದರೆ ಇಲ್ಲಿ ಜನರ ಸಮಯಕ್ಕೂ ಗೌರವ ಇಲ್ಲ, ಸರ್ಕಾರದ ಆದೇಶಕ್ಕೂ ಬೆಲೆ ಇಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯ ಜನರ ಶಾಪಕ್ಕೆ ಗುರಿಯಾಗುವಂತಹದ್ದು” ಎಂದು ಸ್ಥಳೀಯ ನಿವಾಸಿ ಟಿ. ಮಹೇಶ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಪಿಡಿಒ ಶ್ರೀ ಕೃಷ್ಣ ಎಚ್ ಅವರಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಎಚ್ಚರಿಕೆ ನೀಡಿ, ಕರ್ತವ್ಯ ಲೋಪದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಾರ್ವಜನಿಕರ ಅಸಮಾಧಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಒತ್ತಾಯಿಸಿದ್ದಾರೆ.
