
Congratulatory ceremony for the founding Vice Chancellor of Koppal University, Prof. B.K. Ravi

ಕೊಪ್ಪಳ ವಿಶ್ವವಿದ್ಯಾಲಯದ ಸಂಸ್ಥಾಪನಾ ಕುಲಪತಿ ಪ್ರೊ. ಬಿ.ಕೆ. ರವಿ ಅವರಿಗೆ ಅಭಿನಂದನಾ ಸಮಾರಂಭ

ಕೊಪ್ಪಳ ವಿ.ವಿಗೆ ಭದ್ರ ಬುನಾದಿ ಹಾಕಿದ್ದು ಪ್ರೊ.ಬಿ.ಕೆ ರವಿ: ಅಲ್ಲಮಪ್ರಭು ಬೆಟ್ಟದೂರ
ಕೊಪ್ಪಳ ಮೇ 13, (ಕರ್ನಾಟಕ ವಾರ್ತೆ): ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಭದ್ರ ಬುನಾದಿಯನ್ನು ಹಾಕಿದ್ದು ಬಿ.ಕೆ.ರವಿಯವರು. ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಅವರ ಪರಿಶ್ರಮ ಹಿರಿದು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಹಿರಿಯ ಹೋರಾಟಗರಾರದ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಅವರು ಹೇಳಿದರು.
ಅವರು ಬುಧವಾರದಂದು ತಳಕಲ್‌ನ ಸರ್ಕಾರಿ ಇಂಜಿನಿಯರಿAಗ್ ಕಾಲೇಜ್ ಆವರಣದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ವತಿಯಿಂದ ವಿಶ್ವವಿದ್ಯಾಲಯದ ಸಂಸ್ಥಾಪನಾ ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಿ.ಕೆ. ರವಿ ಅವರು ಕೊಪ್ಪಳ ವಿಶ್ವವಿದ್ಯಾಲಯದ ಕಡೆ ಜನರನ್ನು ಕೊಂಡೊಯ್ದರು. ನಮ್ಮ ಜಿಲ್ಲೆಯ ಮಕ್ಕಳು ಪದವಿ, ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸಕ್ಕೆ ಬೇರೆ ಊರುಗಳಿಗೆ, ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ಇತ್ತು. ಆದರೆ ನಮ್ಮ ಜಿಲ್ಲೆಯ ಹೆಮ್ಮೆ ನಮ್ಮ ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆ ನಂತರ ನಮ್ಮ ಜಿಲ್ಲೆಯ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ. ಕೊಪ್ಪಳ ವಿವಿಯ ಸ್ನಾತಕೋತ್ತರ ಕೇಂದ್ರಗಳನ್ನೂ ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿದ್ದು, ಸ್ಥಳೀಯವಾಗಿ ಶೈಕ್ಷಣಿಕ ಸೌಲಭ್ಯ ದೊರೆಯುವಂತಾಗಿದೆ. ಇದರ ಪ್ರಮುಖ ರೂವಾರಿ ಪ್ರೊ.ಬಿ.ಕೆ ರವಿಯವರು ಎಂದು ಅವರು ಹೇಳಿದರು.
ಸನ್ಮಾನಿತರಾಗಿ ಮಾತನಾಡಿದ ಸಂಸ್ಥಾಪನಾ ಕುಲಪತಿ ಪ್ರೊ ಬಿ.ಕೆ ರವಿ ಅವರು, ಯಾವುದೇ ಒಂದು ವಿಶ್ವವಿದ್ಯಾಲಯ ಸಂಸ್ಥಾಪನೆ ಮಾಡಿ ಮುನ್ನಡೆಸುವುದು ಸುಲಭದ ಮಾತಲ್ಲ. ಅದರ ಹಿಂದೆ ಕಾಣದ ಕೈಗಳ ಪರಿಶ್ರಮ ಕೂಡ ಇರುತ್ತದೆ. ಕೊಪ್ಪಳ ಜನತೆ ಮತ್ತು ಜನಪ್ರತಿನಿಧಿಗಳು ವಿಶ್ವವಿದ್ಯಾಲಯ ಸಂಸ್ಥಾಪಿಸುವಲ್ಲಿ ಹಲವು ರೀತಿಯಲ್ಲಿ ಕಾರಣೀಭೂತರಾಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡುವುದು, ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ವಿವಿಯ ಆದ್ಯತೆ. ಕೊಪ್ಪಳ ವಿವಿ ಕುಲಪತಿ ಆಗಿದ್ದ ಸಂದರ್ಭದಲ್ಲಿ ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು, ಬಹುತೇಕ ಜನ ನನಗೆ ಸಹಕರಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿವಿಯ ಪ್ರಭಾರಿ ಕುಲಪತಿಗಳಾದ ಪ್ರೊ.ಎಸ್.ಬಿ.ಡಾಣಿ ಅವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆ, ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಕೊಳ್ಳಬೇಕು. ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಓಂಕಾರ ಕಾಕಡೆ ಅವರು ಅಭಿನಂದನಾ ನುಡಿಗಳನ್ನಾಡಿದರು. ಕೊಪ್ಪಳ ವಿ.ವಿ.ಯ ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ರಮೇಶ ಕೆ. ಮತ್ತು ಹಣಕಾಸು ಅಧಿಕಾರಿಗಳಾದ ಅಮೀನಸಾಬ, ಡಾ.ಪ್ರವೀಣ್ ಪೊಲೀಸ್ ಪಾಟೀಲ್, ಕೆ.ಚಂದ್ರು, ಗಂಗಾವತಿ ಪಿ.ಜಿ ಸೆಂಟರ್ ನಿರ್ದೇಶಕರಾದ ಶಿವರಾಜ ಗುರಿಕಾರ್, ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ.ನಿಂಗಜ್ಜ, ಚಲನಚಿತ್ರ ಅಕಾಡೆಮಿಯ ಸದಸ್ಯರಾದ ಸಾವಿತ್ರಿ ಮುಜುಂದಾರ್, ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
