
S. Sangamesh calls on youth to contest elections from Panchayat to Corporation

ಪಂಚಾಯತ್ ನಿಂದ ಪಾಲಿಕೆವರೆಗೆ ಚುನಾವಣೆಯಲ್ಲಿ ಯುವಕರು ಸ್ಪರ್ಧಿಸುವಂತೆ ಎಸ್. ಸಂಗಮೇಶ್ ಕರೆ

ಬೆಂಗಳೂರು,ಏ.27: ರಾಜ್ಯದ ಯುವಕರು “ಗ್ರಾಮ ಪಂಚಾಯತ್‌ನಿಂದ ಮಹಾನಗರ ಪಾಲಿಕೆವರೆಗೆ ಎಲ್ಲಾ ಚುನಾವಣೆಗಳಿಗೆ ಸ್ಪರ್ಧಿಸಲು ಸಜ್ಜಾಗಬೇಕು ಎಂದು ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ .ಎಸ್. ಸಂಗಮೇಶ್ ಕರೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಲ್ಲೆಡೆ ಯುವ ಧ್ವನಿ ಕೇಳಿಸಬೇಕು. ಈ ಬಾರಿ ಯುವ ಜನಾಂಗ ಸ್ಪರ್ಧಿಸಬೇಕು, ಗೆಲ್ಲಬೇಕು, ಆಡಳಿತ ನಡೆಸಬೇಕು. ರಾಜ್ಯ ಮತ್ತು ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವ ಶಕ್ತಿಯ ಪಾತ್ರ ನಿರ್ಣಾಯಕ ಎಂದು ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕಾನ್ಸಿರಾಂ ಅವರು ತೋರಿಸಿದ ದಾರಿಯಲ್ಲಿ ಸಾಗಬೇಕು. ರಾಜಕೀಯವೇ ಸಾಮಾಜಿಕ ನ್ಯಾಯ ಸಾಧಿಸಲು ಅತ್ಯಂತ ಪರಿಣಾಮಕಾರಿ ಸಾಧನವೆಂದು ಯುವ ಸಮೂಹ ಅರ್ಥಮಾಡಿಕೊಳ್ಳಬೇಕು. ಯುವ ಜನಾಂಗ ಪ್ರೇಕ್ಷಕರಾಗಿರುವ ಕಾಲ ಮುಗಿದಿದೆ. ನಿರ್ಧಾರ ತೆಗೆದುಕೊಳ್ಳುವ ನಾಯಕರಾಗುವ ಕಾಲ ಬಂದಿದೆ,” ಎಂದು ತಿಳಿಸಿದ್ದಾರೆ.
ಕಳೆದ 6 ತಿಂಗಳಿಂದ ದೆಹಲಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರ ಜೊತೆ ಚರ್ಚಿಸಿದ್ದೇನೆ. ಸಂಘಟನೆ ಇಲ್ಲದಿದ್ದರೆ ಸ್ಥಾನವಿಲ್ಲ. ಮತಬಲ ಇಲ್ಲದಿದ್ದರೆ ಮಾತಿಗೂ ಬೆಲೆ ಇಲ್ಲ. ನಿಮ್ಮ ವಿಶ್ವಾಸದ ಹೆಜ್ಜೆ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಧೈರ್ಯದಿಂದ ಮುಂದೆ ಬನ್ನಿ. ನೀವು ಯಾವ ದಾರಿಯನ್ನು ಆಯ್ಕೆ ಮಾಡಿಕೊಂಡರೂ, ನಿಮ್ಮ ಹಿಂದೆ ಸಂಘಟನೆ ಸದಾ ಇರುತ್ತದೆ ಎಂದಿದ್ದಾರೆ.
ಅನೇಕ ಮಂದಿ ಬಿಜೆಪಿ ಹಾಗೂ ಕಾಂಗ್ರೆಸ್ ಕುರಿತು ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ನಿಮ್ಮ ಮೌಲ್ಯಗಳಿಗೆ ಹೊಂದುವ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳಿ. ಜೆಡಿಎಸ್, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಸೇರಿದಂತೆ ವಿವಿಧ ಪರ್ಯಾಯ ರಾಜಕೀಯ ವೇದಿಕೆಗಳಲ್ಲಿ ತಮ್ಮ ಆದರ್ಶಗಳಿಗೆ ಹತ್ತಿರವಾದ ವೇದಿಕೆಯಲ್ಲಿ ಸೇರಿ ಸಂಘಟಿತ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದ್ದಾರೆ.
