ಶೋಷಣೆ ಮುಕ್ತ ಸಮಾಜ ಮಹಿಳಾ ವಿಮುಕ್ತಿಗೆ ದಾರಿ – ಸೀಮಾ ಜಿ. ಎಸ್, ರಾಜ್ಯ ಉಪಾಧ್ಯಕ್ಷರು , AIMSS

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

ಶೋಷಣೆ ಮುಕ್ತ ಸಮಾಜ ಮಹಿಳಾ ವಿಮುಕ್ತಿಗೆ ದಾರಿ – ಸೀಮಾ ಜಿ. ಎಸ್, ರಾಜ್ಯ ಉಪಾಧ್ಯಕ್ಷರು , AIMSS

An exploitation-free society is the path to women's liberation – Seema G. S., State Vice-President, AIMSS

AIMSS ನಿಂದ ಜಿಲ್ಲಾ ಮಟ್ಟದ ಮಹಿಳಾ ಶಿಬಿರ

ಕೊಪ್ಪಳ:. ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಶಿಬಿರವನ್ನು ಎಐಎಂಎಸ್ಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಉದ್ದೇಶಿಸಿ ಎಐಎಂಎಸ್ಎಸ್ ನ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಸೀಮಾ ಜಿ. ಎಸ್. ಅವರು ಮಾತನಾಡುತ್ತ ” ಒಂದು ಸಮಾಜವು ಮುಂದುವರೆದಿದೆಯೋ ಇಲ್ಲವೋ ಎನ್ನುವುದನ್ನು ಅದು ಮಹಿಳೆಯ ಬಗ್ಗೆ ತಳೆಯುವ ಧೋರಣೆಯಿಂದ ತೀರ್ಮಾನಿಸಬಹುದು. ಇಂದಿನ ನಮ್ಮ ಸಮಾಜವನ್ನು ‘ನಾಗರಿಕ’ ಎಂದು ಕರೆಯಲು ಸಾಧ್ಯವೇ? ಇತ್ತೀಚಿನ ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಕನ್ನಡದ ಬಂಟ್ಟಾಳದಲ್ಲಿ ನಡೆದ ಘಟನೆಗಳು ಈ ಪ್ರಶ್ನೆಯನ್ನು ಮತ್ತೆ ಮತ್ತೆ ನಮ್ಮ ಮುಂದೆ ತರುತ್ತಿವೆ. ಸ್ತ್ರೀ ಭ್ರೂಣ ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಮರ್ಯಾದೆಗೇಡು ಹತ್ಯೆ, ಬಾಲ ಗರ್ಭಿಣಿ ಸಮಸ್ಯೆ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ – ದೌರ್ಜನ್ಯ, ಸೈಬರ್ ಸ್ಟಾಕಿಂಗ್, ಆಸಿಡ್ ದಾಳಿ, ಡಿಜಿಟಲ್ ದಾಳಿಗಳು….ಹೀಗೆ ಹಲವಾರು ಸಮಸ್ಯೆಗಳು ಹೆಣ್ಣು ಮಕ್ಕಳನ್ನು ಪ್ರತಿ ಕ್ಷಣವೂ ಬಾಧಿಸುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಸಹ ಆಳ್ವಿಕರು ನಮ್ಮ ದೇಶ ವೇಗವಾಗಿ ಮುನ್ನಡೆಯುತ್ತಿದೆ ಎಂದು ವರ್ಣರಂಜಿತ ಚಿತ್ರಣವನ್ನು ಮುಂದಿಡುತ್ತಿದ್ದಾರೆ. ಇದು ಯಾವ ಮುನ್ನಡೆ? ಯಾವ ದಿಕ್ಕು?

ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಹಳೆಯ ಮೌಲ್ಯಗಳ ವಿರುದ್ಧ ರಾಜಿ ರಹಿತ ಹೋರಾಟ ನಡೆದು ಉನ್ನತ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ ಮೌಲ್ಯಗಳ ಪ್ರವಾಹ ಮುನ್ನೆಲೆಗೆ ಬರಬೇಕಿತ್ತು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಮೇಲುಗೈ ಪಡೆದಿದ್ದ ರಾಜಿಪರ ಪಂಥ ಈ ಮಹತ್ತರ ಕಾರ್ಯವನ್ನು ಕೈಗೆತ್ತಿಕೊಳ್ಳಲಿಲ್ಲ. ಹೀಗಾಗಿಯೇ ಜಾತಿ-ಲಿಂಗ-ಧರ್ಮ ಆಧಾರಿತ ಅಸಮಾನತೆ, ಪುರುಷಪ್ರಧಾನ ಧೋರಣೆ ಸಮಾಜದ ಮಾನಸಿಕತೆಯಲ್ಲಿ ಉಳಿದುಬಿಟ್ಟವು. ಇದರ ಜೊತೆಗೆ ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಅವ್ಯಾಹತವಾಗಿ ಹರಿದಾಡುತ್ತಿರುವ ಅಶ್ಲೀಲತೆ, ಸುಲಭವಾಗಿ ಕೈಗೆಟುಕುವ ಮದ್ಯ-ಮಾದಕ ವಸ್ತುಗಳು ಎಲ್ಲರ ಮೇಲೂ ಕೆಟ್ಟ ಪ್ರಭಾವ ಬೀರುತ್ತಿವೆ. ಇದರ ಪರಿಣಾಮವೇ ಇಂದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು.

ಇಂತಹ ಅಮಾನವೀಯ ವ್ಯವಸ್ಥೆಯ ವಿರುದ್ಧ ಹೋರಾಡಲು ನಾವೆಲ್ಲ ಸಜ್ಜಾಗಬೇಕಾಗಿದೆ. ಎಲ್ಲಾ ಮಹಿಳೆಯರನ್ನು ಜಾಗೃತರನ್ನಾಗಿಸಿ ಸಂಘಟಿಸಬೇಕಾಗಿದೆ. ಮಹಿಳೆಯರಿಗೆ ನೈಜ ಘನತೆ, ಗೌರವ ಖಾತ್ರಿಪಡಿಸುವ ಹೊಸ ಸಮಾಜದತ್ತ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ವಿಮುಕ್ತಿಗಾಗಿ ಶೋಷಣಾ ರಹಿತ ನವ ಸಮಾಜವನ್ನು ಸ್ಥಾಪಿಸಲು ಮುಂದಾಗೋಣ” ಎಂದು ಕರೆ ನೀಡಿದರು.

ಎಐಎಂಎಸ್ಎಸ್ ನ ಜಿಲ್ಲಾ ಕಾರ್ಯದರ್ಶಿಗಳಾದ ಶಾರದಾ ಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷರಾದ ಮಂಜುಳಾ ಮಜ್ಜಿಗಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ವಿಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಂದ ಬಂದ ಪ್ರಶ್ನೆಗಳಿಂದ ಉತ್ತಮ ಗುಣಮಟ್ಟದ ಸಂವಾದ ನಡೆಯಿತು. ನಂತರ ಕಿರು ಚಲನಚಿತ್ರ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಬಿರದಲ್ಲಿ ಹಳ್ಳಿ, ಬಡಾವಣೆ, ಕಾಲೇಜುಗಳಿಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Total Views: 0
Share This Article