ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿಪ್ರದಾನ ಸಮಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಡಾ. ಸುರೇಶ ಬಿ. ಇಟ್ನಾಳ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

Make necessary preparations for Government Employees' Day and the Best Service Award ceremony: Dr. Suresh B. Itnal

ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ
ಪ್ರದಾನ ಸಮಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಡಾ. ಸುರೇಶ ಬಿ. ಇಟ್ನಾಳ

ಜಾಹೀರಾತು


ಕೊಪ್ಪಳ ಏಪ್ರಿಲ್ 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲಾಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏಪ್ರಿಲ್ 21ರಂದು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಪ್ರತಿ ವರ್ಷದಂತೆ ಈ ವರ್ಷವು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ಇದೇ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ತಿಂಗಳ ಮೊದಲನೇ ವಾರದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮವನ್ನು ಶಿಷ್ಟಾಚಾರ ಪಾಲನೆಯೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಈ ಕಾರ್ಯಕ್ರಮದ ಅಂಗವಾಗಿ ನೌಕರರಿಗೆ ಆರೋಗ್ಯ ತಪಾಸಣೆ ಮತ್ತು ಯೋಗ ಶಿಬಿರವನ್ನು ಹಮ್ಮಿಕೊಳ್ಳಬೇಕು ಮತ್ತು ಇದರ ಜೊತೆಗೆ ರಕ್ತದಾನ ಶಿಬಿರವನ್ನು ಸಹ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
 ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಾಗೂ ಸಾಧನೆಗೈದ ನೌಕರರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಬೇಕಾಗಿದ್ದು, ಇದಕ್ಕಾಗಿ ಸೂಕ್ತ ಮತ್ತು ಅರ್ಹ ನೌಕರರನ್ನು ಗುರುತಿಸಿ, ಇಲಾಖೆಯ ಗುರಿ ಸಾಧನೆಯಲ್ಲಿ ವೃದ್ಧಿ, ನಾಯಕತ್ವ ಗುಣ ಮತ್ತು ಸಮಯಪ್ರಜ್ಞೆ, ಸೇವಾ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ, ಸರ್ಕಾರದ ಹಣದ ಉಳಿತಾಯ ಮತ್ತು ಸಾರ್ವಜನಿಕ ಸ್ನೇಹಿ ಸೇವೆಗಳಂತಹ ಮಾದರಿ ಕಾರ್ಯಗಳನ್ನು ಮಾಡಿದ ಸಾಧಕರನ್ನು ಆಯ್ಕೆ ಮಾಡಬೇಕು ಎಂದರು.
 ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಈ ಬಾರಿ ಸ್ವಚ್ಛ ಮತ್ತು ಸುಂದರವಾಗಿರುವ ಕಚೇರಿಗಳಿಗೆ ಸಹ ಪ್ರಶಸ್ತಿ ನೀಡಲಾಗುವುದು. ಸಮಾರಂಭದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಖಾದಿ ಬಟ್ಟೆಯನ್ನು ಧರಿಸಿಕೊಂಡು ಬರಬೇಕು. ಈ ಬಗ್ಗೆ ಅಧಿಕಾರಿಗಳು ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಸರ್ಕಾರಿ ನೌಕರರು ಆಗಮಿಸುವಂತೆ ಕ್ರಮವಹಿಸಿ. ಕಾರ್ಯಕ್ರಮ ಆಯೋಜನೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
 ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಮಾತನಾಡಿ, ರಾಜ್ಯ ಸರ್ಕಾರದ ಅಧಿಕಾರಿ, ಕರ್ನಾಟಕ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಹರಾಗಲು ಸರ್ಕಾರಿ ನೌಕರರು ಪರೀಕ್ಷಾರ್ಥ ಅವಧಿ ಸೇರಿ ಕನಿಷ್ಠ 3 ವರ್ಷಗಳ ಸೇವೆ ಪೂರೈಸಿರಬೇಕು. ನೌಕರರು ಅತ್ಯುತ್ತಮ ಕಾರ್ಯಕ್ಷಮತೆ, ನವೀನ ಆಲೋಚನೆ, ಭ್ರಷ್ಟಾಚಾರ ಮುಕ್ತ ಸೇವೆ, ಸಾರ್ವಜನಿಕ ಸ್ನೇಹಿ ನಡವಳಿಕೆ ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅಸಾಧಾರಣ ಕಾರ್ಯನಿರ್ವಹಣೆ ಮಾಡಿರಬೇಕು. ಅರ್ಜಿ ಸಲ್ಲಿಸುವವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ಪ್ರಕರಣಗಳು ಇರಬಾರದು. ಈಗಾಗಲೇ ಈ ಪ್ರಶಸ್ತಿ ಪಡೆದವರು ಮರು-ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದರು.
 ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರು ಆಗಿರುವ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಜುಮ್ಮನ್ನವರ್ ಅವರು ಮಾತನಾಡಿ, ಸರ್ಕಾರಿ ನೌಕರರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಕ.ರಾ.ಸ ನೌಕರರ ಸಂಘವು ಉದ್ದೇಶಿಸಿದೆ. ನೌಕರರು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲಾಡಳಿತ ಭನದಲ್ಲಿರುವುದರಿಂದ ಸರ್ಕಾರಿ ನೌಕರರ ದಿನಾಚರಣೆ ಕಾರ್ಯವನ್ನು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಬೇಕು. ಜಿಲ್ಲಾ ಮಟ್ಟದ ಕಾರ್ಯಕ್ರಮ ಇದಾಗಿರುವುದರಿಂದ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ನೌಕರ ಮಿತ್ರರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಸರ್ಕಾರಿ ನೌಕರರ ಸಹಕಾರ ಅಗತ್ಯವಾಗಿದೆ ಎಂದರು.
 ಸಭೆಯಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಹೇಮಂತ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಡಿ.ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕರಾದ ಮಂಜುನಾಥ ಗುಂಡೂರು, ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅಜ್ಜಪ್ಪ ಸೋಗಲದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಟಿ.ಲಿಂಗರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಗದೀಶ, ಪಶು ಇಲಾಖೆ ಉಪನಿರ್ದೇಶಕರಾದ ಡಾ. ಪಿ.ಎಂ ಮಲ್ಲಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ ಜಾಬಗೌಡರ್, ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಗಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Total Views: 0
Share This Article