
Basaveshwara Uchhaya, which was pulled by women
ಮಹಿಳೆಯರೇ ಎಳೆದ ಬಸವೇಶ್ವರ ಉಚ್ಛಾಯ


ಗಂಗಾವತಿ :ಕಾರಟಗಿ ತಾಲೂಕಿನ ಸಿದ್ದಾಪುರ- ಕೊಟ್ನೆಕಲ್ ಸೀಮಾದ ಎಸ್. ಬಿ. ರಡ್ಡಿ ಕ್ಯಾಂಪ್ ಬಳಿಯ ಬಸವ ನಗರದಲ್ಲಿ ಬಸವ ಜಯಂತಿ ನಿಮಿತ್ಯ ಶ್ರೀ ಆದಿ ಬಸವೇಶ್ವರ ದೇವಾಲಯದ ಉಚ್ಛಾಯವು ಇಂದು ಜರುಗಿತು. ಕೇವಲ ಮಹಿಳೆಯರೇ ಭಕ್ತಿ ಭಾವದಿಂದ ಉಚ್ಛಾಯವನ್ನು ಎಳೆದು ಸಂಭ್ರಮಿಸಿದರು. ದೇವಾಲಯದ ಅಧ್ಯಕ್ಷ ರೇವಣಸಿದ್ದಪ್ಪ ಕೋಲ್ಕಾರ ಮಾತನಾಡಿ 12 ನೇ ಶತಮಾನದ ಮಹಾನ್ ದಾರ್ಶನಿಕ ಬಸವಣ್ಣನವರ ಭವ್ಯ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಪ್ರತಿವರ್ಷ ಬಸವ ಜಯಂತಿಯಂದು ಭಗವಾನ್ ಬಸವೇಶ್ವರರ ಉಚ್ಛಾಯವನ್ನು ನೆರವೇರಿಸಲಾಗುತ್ತದೆ. ಬಸವಣ್ಣನವರು 12 ನೇ ಶತಮಾನದಲ್ಲಿ ಮಹಿಳೆಯರಿಗೆ ಲಿಂಗಧಾರಣೆ ಮಾಡಿ ಮಹಿಳಾ ಸಮಾನತೆಯನ್ನು ಘೋಷಿಸಿದರು. ಅವರ ತತ್ವದಂತೆ ದೇವಾಲಯ ಸಮಿತಿಯು ಬಸವ ಉಚ್ಛಾಯವನ್ನು ಮಹಿಳೆಯರಿಂದಲೇ ಎಳೆಸುವ ನಿರ್ಧಾರ ಮಾಡಿದ್ದು ,ಅದರನ್ವಯ ಪ್ರತಿವರ್ಷ ಬಸವಜಯಂತಿಯಂದು ಬಸವ ಉಚ್ಛಾಯವನ್ನು ಮಹಿಳೆಯರಿಂದಲೇ ಎಳೆಸಲಾಗುತ್ತದೆ. ಇದು ಮಹಿಳಾಲೋಕ ಬಸವಣ್ಣನಿಗೆ ಸಲ್ಲಿಸುವ ಒಂದು ಸಣ್ಣ ಕೃತಜ್ಞತೆಯ ಪರಿ ಎಂದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಚಂಪಾವತಿ, ಶಾರದಾ, ವೀಣಾ ಪಲ್ಲೆದ, ಲಕ್ಷ್ಮಿದೇವಿ, ಶೋಭಾ, ಪದ್ಮಾವತಿ, ಅನ್ನಪೂರ್ಣ ಮುಂತಾದ ಮಹಿಳಾ ಭಕ್ತರಿದ್ದರು. ದೇವಾಲಯ ಸಮಿತಿಯ ಬಸವರಾಜಪ್ಪ, ನಾಗರಾಜ್ ಬಝಾರ, ಚಂದ್ರಶೇಖರ,ಮುರುಡಬಸಪ್ಪ, ಸೋಮಶೇಖರ್ ಮುಂತಾದವರಿದ್ದರು.
