Shivlingeshwar fair of Punyakshetra Tubachi
ಪುಣ್ಯಕ್ಷೇತ್ರ ತುಬಚಿಯ ಶಿವಲಿಂಗೇಶ್ವರ ಜಾತ್ರ

ಸಾವಳಗಿ: ಐತಿಹಾಸಿಕ ಹಿನ್ನೆಲೆ ಮತ್ತು ಪವಾಡ ಶಿವಲಿಂಗೇಶ್ವರ ಮಹಾಸ್ವಾಮಿಗಳು ನಡೆದಾಡುವ ದೇವರೆಂದೇ ಪ್ರಸಿದ್ಧರು. ಶತಮಾನಗಳ ಹಿಂದೆ ಈ ಭಾಗದಲ್ಲಿ ಸಂಚರಿಸುತ್ತಿದ್ದಾಗ, ಅವರು ತೋರಿದ ಪವಾಡಗಳು ಮತ್ತು ನೀಡಿದ ಸಮಾನತೆಯ ಸಂದೇಶವು ಎಲ್ಲ ವರ್ಗದ ಜನರನ್ನು ಆಕರ್ಷಿಸಿತು.
ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಮಡಿಲಲ್ಲಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಗ್ರಾಮ ತುಬಚಿ, ಇಲ್ಲಿರುವ ಶ್ರೀ ಶಿವಲಿಂಗೇಶ್ವರ ಮಠವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ; ಇದು ಹಿಂದೂ ಮತ್ತು ಮುಸ್ಲಿಂ ಬಾಂಧವ್ಯದ ಬೆಸುಗೆಯಾಗಿರುವ ಅಪರೂಪದ ಪುಣ್ಯಕ್ಷೇತ್ರ. ಜಾತಿ-ಮತಗಳ ಬೇಲಿ ಮೀರಿ ನಿಂತಿರುವ ಈ ಮಠದ ಇತಿಹಾಸ ಮತ್ತು ಪರಂಪರೆ ನಾಡಿಗೆ ಮಾದರಿಯಾಗಿದೆ.

ಪೀಠಾಧಿಕಾರ ಮತ್ತು ಪರಂಪರೆ: ಡಾ. ಅಲ್ಲಮಪ್ರಭು ಪೂಜಾರರು ಬೆಳಗಾವಿಯ ಐತಿಹಾಸಿಕ ರುದ್ರಾಕ್ಷಿ ಮಠದ ಪೀಠಾಧಿಕಾರವನ್ನು ವಹಿಸಿಕೊಂಡ ನಂತರ, ಮಠದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿದ್ದಾರೆ. ಇವರು ಕೇವಲ ಒಂದು ಮಠಕ್ಕೆ ಸೀಮಿತವಾಗದೆ,ತುಬಚಿ ಶ್ರೀ ಶಿವಲಿಂಗೇಶ್ವರ ಮಠದ ಜವಾಬ್ದಾರಿಯನ್ನೂ ಅಷ್ಟೇ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಎರಡು ಮಠಗಳ ನಡುವೆ ಸಮನ್ವಯ ಸಾಧಿಸಿ, ಎರಡು ಕಡೆ ಸಮಾನವಾಗಿ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು:
ಕ್ಷೇತ್ರದ ಸಂಪ್ರದಾಯದಂತೆ ಬೆಳಗ್ಗೆ ಶಿವಲಿಂಗೇಶ್ವರ ಕರ್ತೃ ಗದ್ದೆಗೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಮತ್ತು ಪುಷ್ಪಾರ್ಚನೆಗಳನ್ನು ಮಾಡಲಾಯಿತು. ವಿಶೇಷವಾಗಿ ಅಲಂಕರಿಸಲ್ಪಟ್ಟ ಗದ್ದೆಗೆಯು ಭಕ್ತರ ಕಣ್ಮನ ಸೆಳೆಯುತ್ತಿತ್ತು.

ಭಕ್ತರ ಸಾಗರ: ಈ ಪವಿತ್ರ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದರು. ಮುತ್ತೈದೆಯರು ಉಡಿತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ, ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಗಳಿಂದ ಭಜನೆ ಮತ್ತು ಕೀರ್ತನೆಗಳು ಮೊಳಗಿದವು.
ಪ್ರಸಾದ ವಿನಿಯೋಗ:
ಮಧ್ಯಾಹ್ನ ಮಹಾಪೂಜೆಯ ನಂತರ ಬಂದಂತಹ ಎಲ್ಲಾ ಭಕ್ತರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಚಿದಾನಂದ ಕಿತ್ತೂರು.
ಕಂದಾಯ ಇಲಾಖೆ.
