ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: ತರಬೇತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Minority Welfare Department: Application submission period for training extended
ಕೊಪ್ಪಳ ಏಪ್ರಿಲ್ 01, (ಕರ್ನಾಟಕ ವಾರ್ತೆ): 2026-27ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳಿಗೆ ನೀಡಲಾಗುವ ಉಚಿತ ಪರೀಕ್ಷಾ ಪೂರ್ವ ತರಬೇತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 21 ರವರೆಗೆ ವಿಸ್ತರಿಸಲಾಗಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ರಾಜ್ಯಾದ್ಯಾಂತ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕ/ಬಾಲಕಿಯರ ಪದವಿ ಪೂರ್ವ ಕಾಲೇಜು/ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಕಾಲೇಜು/ಪದವಿ ಪೂರ್ವ ಕಾಲೇಜು ಸೇರಿದಂತೆ 126 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಕಾಲೇಜುಗಳಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ‘ಸೆಂಟರ್ ಆಫ್ ಎಕ್ಸಲೆನ್ಸ್’ ಪ್ರಾರಂಭಿಸಿದೆ.
ಅದರಂತೆ 2026-27 ನೇ ಸಾಲಿಗೆ ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರಗಳನ್ನು ವಸತಿಯುತ ಪಿ.ಯು.ಸಿ ಶಿಕ್ಷಣದೊಂದಿಗೆ NEET/JEE/K-CET/ICAR/ CUET /CLAT/ CA-Foundation ಪ್ರವೇಶ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ಕೋಚಿಂಗ್ ನೀಡಲು ಪ್ರವೇಶಾತಿಗಾಗಿ ಅರ್ಹ ಅಲ್ಪಸಂಖ್ಯಾತರಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ಶೇ.75 ಮತ್ತು ಎಸ್.ಸಿ, ಎಸ್.ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ.25 ಸ್ಥಾನಗಳ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ https://dom.karnataka.gov.in/ ವೆಬ್ಸೈಟ್ ಮುಖಾಂತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ 31 ಕ್ಕೆ ನಿಗದಿಪಡಿಸಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಏ.21 ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ ತತ್ಸಮಾನ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸಲು ಅರ್ಹರಿರುತ್ತಾರೆ.
ಸೆಂಟರ್ ಆಫ್ ಎಕ್ಸಲೆನ್ಸ್ ಗಳಲ್ಲಿ ಸಂಪೂರ್ಣ ಉಚಿತ ವಸತಿಯುತ ಪಿ.ಯು.ಸಿ ಶಿಕ್ಷಣದೊಂದಿಗೆ NEET/JEE/K-CET/ICAR/CA Foundation/CLAT/CUET ಪರೀಕ್ಷಾ ಪೂರ್ವ ಉಚಿತ ಆಫ್ಲೈನ್ ಕೋಚಿಂಗ್, ನುರಿತ ಉಪನ್ಯಾಸಕರು, ಪ್ರತ್ಯೇಕ ಬಾಲಕ/ಬಾಲಕಿಯರ ಕ್ಯಾಂಪಸ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ ಹಾಗೂ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕೊಪ್ಪಳ: 8088894549, ಕುಷ್ಟಗಿ : 8880482486 ಇಲ್ಲಿಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ರವಿ ಪೂಜಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
