
ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ
ಗ್ಯಾರಂಟಿ ಯೋಜನೆಗಳಿಂದ ತಾಯಂದಿರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ- ಶಿವರಾಜ ಎಸ್. ತಂಗಡಗಿ
District Level Guarantee Workshop and Guarantee Festival

ಕೊಪ್ಪಳ ಫೆಬ್ರುವರಿ 17 (ಕರ್ನಾಟಕ ವಾರ್ತೆ): ಪಂಚ ಗ್ಯಾರಂಟಿ ಯೋಜನೆಗಳಿಂದ ನಮ್ಮ ತಾಯಂದಿರೂ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳ ನಗರದ ಮಧುಶ್ರೀ ಗಾರ್ಡನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಹಣ ಉಳಿತಾಯ ಮಾಡಿ ಮಹಿಳೆಯರು ಕಿರಾಣಿ, ಅಂಗಡಿ, ವ್ಯಾಪಾರ, ಹಸುಗಳ ಸಾಕಣೆ ಜೊತೆಗೆ ತಮ್ಮ ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಅವರಿಗೆ ಅನುಕೂಲವಾಗಿದೆ. ದೇಶದ ಯಾವ ರಾಜ್ಯದಲ್ಲಿಯು ಉಚಿತ ಯೋಜನೆಗಳಿಲ್ಲ ಅದು ಕರ್ನಾಟಕ ರಾಜ್ಯದಲ್ಲಿ ಮಾತ್ರ ಇದೆ. ಅಭಿವೃದ್ಧಿ ಎಂದರೆ ರಸ್ತೆ, ಕೆರೆ ಕಟ್ಟೆಗಳು ಅಭಿವೃದ್ಧಿಯಾದರೆ ಸಾಲದು. ಪ್ರತಿಯೊಬ್ಬರು ಅಭಿವೃದ್ಧಿಯಾಗಬೇಕು ಎನ್ನುವ ಕಾರಣಕ್ಕಾಗಿ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಜನರಿಗೆ ಸರಿಯಾಗಿ ತಲುಪಿದೆಯಾ ಇಲ್ಲ ಎನ್ನುವುದನ್ನು ತಿಳಿಯಲು ಹೆಚ್.ಎಂ. ರೇವಣ್ಣ ಮತ್ತು ಮೆಹರೋಜ ಖಾನ್ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಫಲಾನುಭವಿಗಳಿಂದ ಮಾಹಿತಿ ಪಡೆದುಕೊಳ್ಳತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಮಾತನಾಡಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ 1 ಲಕ್ಷ 12 ಸಾವಿರ ಕೋಟಿ ರೂ. ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ 670 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆ ನಮ್ಮ ಸರ್ಕಾರದ 20 ಅಂಶಗಳ ಕಾರ್ಯಕ್ರಮವೆ ಆಗಿದೆ. ಉಳುವವನೆ ಭೂಮಿಯ ಒಡೆಯ ಭೂಮಿ ಇಲ್ಲದವರಿಗೆ ಭೂಮಿ ನೀಡುವ ಕೆಲಸವನ್ನು ಇಂದಿರಾಗಾಂಧಿ ಮತ್ತು ಡಿ. ದೇವರಾಜ ಅರಸು ಅವರು ಮಾಡಿದ್ದರು. ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗಿನಿಂದ ಜನಪರ ಕಾರ್ಯಕ್ರಮಗಳನ್ನು ಮಾಡಿದೆ ಎಂದರು.
ಬಂಗಾರೆಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 10 ಹೆಚ್.ಪಿ ಕರೆಂಟ್ ರೈತರಿಗೆ ಉಚಿತವಾಗಿ ನೀಡಿದರು. ವೀರಪ್ಪ ಮೋಯ್ಲಿ ಅವರು ತಮ್ಮ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಸಿಇಟಿ ಜಾರಿ ಮಾಡಿದರು. ಇದರಿಂದ ಜಗತ್ತಿನಾದ್ಯಂತ ನಮ್ಮ ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಬಿಸಿ ಊಟ ಜಾರಿಗೆ ತರುವುದರ ಜೊತೆಗೆ ಬೆಂಗಳೂರನ್ನು ಐಟಿಬಿಟಿ ನಗರವನ್ನಾಗಿ ಮಾಡಿದರು. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರು ನೀಡಿದ 165 ಭರವಸೆಗಳನ್ನು ಕೊಟ್ಟ ಮಾತಿನಂತೆ ಜಾರಿಗೆ ತರುವುದರ ಜೊತೆಗೆ ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಇಂದು ಒಳ್ಳೆಯ ಅತ್ಯುತ್ತಮ ಕಾರ್ಯಕ್ರಮ ಕೊಪ್ಪಳದಲ್ಲಿ ಆಯೋಜನೆ ಮಾಡಲಾಗಿದೆ. ರಾಜ್ಯದ 31 ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುವವರಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನಗಳ ಜೊತೆಗೆ ಹತ್ತು ಸಮಾಧಾನಕರ ಬಹುಮಾನ ಕೊಡುವ ಕೆಲಸ ಮಾಡುತ್ತಿದ್ದೆವೆ. ಇದರ ಉದ್ದೇಶ ಫಲಾನುಭವಿಗಳ ಮತ್ತು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಣೆ ಜೊತೆಗೆ ಈ ಯೋಜನೆಗಳ ಹೆಚ್ಚು ಪ್ರಚಾರ ನೀಡುವ ಮೂಲಕ ಜನರಿಗೆ ಯೋಜನೆಗಳನ್ನು ತಲುಪಿಸುವುದಾಗಿದೆ ಎಂದು ಹೇಳಿದರು.
ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿ ಜೊತೆಗೆ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಮತ್ತು ಶಕ್ತಿಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದಾಗಿ ಜನರು ಆರ್ಥಿಕವಾಗಿ ಸದೃಢರಾಗಿ ನೆಮ್ಮದಿಯಿಂದ ಬಧುಕುವಂತಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ವಿಶೇಷವಾಗಿ ಕಡು ಬಡವರು, ಕೃಷಿ ಕೂಲಿ ಕಾರ್ಮಿಕರಿಗೆ ಶಕ್ತಿ ತುಂಬುವ ಕೆಲಸವಾಗಿದೆ. ಉಚಿತ ಬಸ್ ಪ್ರಮಾಣದಿಂದ ಮಹಿಳೆಯರು ಧಾರ್ಮಿಕ ಸ್ಥಳಗಳು ಮತ್ತು ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಅವರು ಮಾತನಾಡಿ, ರಾಜ್ಯ ಸರ್ಕಾರವು ಜನರ ಆಶಯದಂತೆ ಹಾಗೂ ಸಂವಿದಾನದ ಆಶಯದಂತೆ ಸೇವೆಯನ್ನು ಮಾಡುತ್ತಿದೆ. ಮಹಿಳೆಯರಿಗೆ, ಯುವಕರಿಗೆ ಶಕ್ತಿಯನ್ನು ಕೊಡಬೇಕು ಮತ್ತು ಅವರ ಸಬಲೀಕರಣ ಆಗಬೇಕು ಎಂಬ ಏಕೈಕ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿರುವಂತಹ ಪ್ರತಿ ಬಡವರಿಗೆ ಮಹಿಳೆಯರಿಗೆ ಯುವಕರಿಗೆ ಅನುಕೂಲವಾಗುವಂತೆ ಈ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ಅನುಷ್ಠಾನಿಸಲಾಗುತ್ತಿದೆ. ನಮ್ಮ ರಾಜ್ಯವು ಭಾರತ ದೇಶದಲ್ಲಿ ಮಹಿಳಾ ಸಬಲೀಕರಣದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದರಲ್ಲಿ ನಮ್ಮ ರಾಜ್ಯದ ಮಹಿಳೆಯರ ಉದ್ಯಮ ಶೀಲತೆ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈ ಹಿಂದೆ ನಿರುದ್ಯೋಗ ಸಮಸ್ಯೆ 4.6 ಇತ್ತು, ಈಗ 2.5ಕ್ಕೆ ಇಳಿಕೆಯಾಗಿದ್ದು, ನಮಗೆಲ್ಲ ಸಂತೋಷದ ವಿಚಾರ. ಇದು ಕೇವಲ ಗ್ಯಾರಂಟಿ ಯೋಜನೆಗಳ ಪ್ರತಿಫಲದಿಂದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಗ್ಯಾರಂಟಿ ಸಮಿತಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳವು ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಜಾಗೃತ ಕರ್ನಾಟಕದ ಸಂಚಾಲಕರಾದ ಬಿ.ಸಿ.ಬಸವರಾಜ ಅವರು ಪಂಚ ಗ್ಯಾರಂಟಿ ಯೋಜನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗ್ಯಾರಂಟಿಗಳು ಜಾರಿ ಅಸಾಧ್ಯವೆಂದು ಹೇಳಲಾಗುತ್ತಿತ್ತು ಮತ್ತು ಇದರಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ರಾಜ್ಯ ಸರ್ಕಾರವು ಐದಕ್ಕೆ ಐದೂ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದಾಗಿ ನಮ್ಮ ರಾಜ್ಯ ದಿವಾಳಿಯಾಗಿಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಹೊಸ ಯೋಜನೆಗಳು ಜಾರಿಯಾಗುತ್ತಲಿವೆ. ಸರ್ಕಾರಿ ನೌಕರರಿಗೆ ಸಂಬಳ ನಿಂತಿಲ್ಲ; ಹೆಚ್ಚಾಗಿದೆ. ನೌಕರರು, ಅತಿಥಿ ಶಿಕ್ಷಕರಿಗೆ ವೇತನ ಹೆಚ್ಚಳ, ಪೌರಕಾರ್ಮಿಕರ ಖಾಯಂ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರವು ಸಮರ್ಪಕವಾಗಿ ಜಾರಿಗೆ ತರುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ತಲಾ ಆದಾಯ ಹೆಚ್ಚಾಗಿದೆ. ಇಡೀ ದೇಶದಲ್ಲೇ ನಮ್ಮ ರಾಜ್ಯದ ತಲಾದಾಯ ಪ್ರಮಾಣವು ಅತ್ಯಂತ ಹೆಚ್ಚಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಜಿಎಸ್ಟಿ ಬೆಳವಣಿಗೆ ದರ ಕರ್ನಾಟಕದ್ದು. ರೀಟೇಲ್, ಎಫ್ಎಂಸಿಜಿ ಮಾರಾಟವೂ ಸಹ ಹೆಚ್ಚಾಗಿದೆ. ದೇಶದ ಒಟ್ಟು ಜಿಎಸ್ಟಿಗೆ ನಮ್ಮ ರಾಜ್ಯದ ಕೊಡುಗೆಯ ಪ್ರಮಾಣವೂ ಹೆಚ್ಚಾಗಿದೆ. ಈ ಪಂಚ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಪೂರಕವಾಗಿವೆ ಎಂದರು.
ಕಿಂಗ್ಸ್ ಕಾಲೇಜ್ ಲಂಡನ್ – ಅಧ್ಯಯನ ವರದಿ ಪ್ರಕಾರ ಶಕ್ತಿ ಯೋಜನೆಯಡಿ 600 ಕೋಟಿಗೂ ಅಧಿಕ ಉಚಿತ ಬಸ್ ಟಿಕೆಟ್ ವಿತರಣೆಯಾಗಿದೆ. ಪ್ರತಿದಿನ ಸರಾಸರಿ 1.95 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದು, ಶೇ. 49ರಷ್ಟು ಜನ ಉದ್ಯೋಗಕ್ಕೆ ಬಳಸಿದ್ದಾರೆ. ಹೊಸದಾಗಿ ಉದ್ಯೋಗಕ್ಕೆ ಹೋಗಲು ಸಹ ಶಕ್ತಿ ಯೋಜನೆ ಪ್ರೇರಣೆಯಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 1.28 ಕೋಟಿ ಮಹಿಳೆಯರಿಗೆ ಸಹಾಯಧನ ಸಿಗುತ್ತಿದ್ದು, ಶೇ. 90ರಷ್ಟು ಮಹಿಳೆಯರು ತಾವೇ ಈ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿದೆ. ಅನ್ನ ಭಾಗ್ಯ ಯೋಜನೆಯು ರಾಜ್ಯದ 1.03 ಕೋಟಿ ಕುಟುಂಬಕ್ಕೆ ಸಿಕ್ಕಿದ್ದು, ರಾಜ್ಯದಲ್ಲಿ ಹಸಿವು ಇಲ್ಲ ಮತ್ತು ಪೌಷ್ಟಿಕಾಂಶ ಹೆಚ್ಚಳವಾಗಿದೆ. ಗೃಹ ಜ್ಯೋತಿ ಯೋಜನೆಯಡಿ 1.63 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆತಿದ್ದು, ವಿದ್ಯುತ್ ಬಿಲ್ ಪಾವತಿಗಾಗಿ ಖರ್ಚಾಗುತ್ತಿದ್ದ ಹಣ ಜನರ ಬೇರೆ ಕೆಲಸಗಳಿಗೆ ಬಳಕೆಯಾಗುತ್ತಿದೆ. ಯುವನಿಧಿ ಯೋಜನೆಯಡಿ ಸುಮಾರು 1.74 ಲಕ್ಷ ನಿರುದ್ಯೋಗಿ ಯುವಕ-ಯುವತಿಯರು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಪಿಪಿಟಿ ಪ್ರದರ್ಶನದ ಮೂಲಕ ವಿವರವಾಗಿ ಮಾಹಿತಿ ನೀಡಿದರು.
*ಪೋಸ್ಟರ್ ಬಿಡುಗಡೆ:* ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಂಜೀವಿನಿ ಯೋಜನೆಯಡಿ ಸಿದ್ಧಪಡಿಸಲಾದ ಲಿಂಗತ್ವ ಸಮಾನತೆಯನ್ನು ಸಾರುವ ಪೋಸ್ಟರ್ ಬಿಡುಗಡೆ ಮಾಡಲಾಯಿತು.
*ಸನ್ಮಾನ:* ಪಂಚ ಗ್ಯಾರಂಟಿ ಯೋಜನೆಗಳಡಿ ಲಾಭ ಪಡೆದು ಕೊಪ್ಪಳ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಲಾ ಐದು ಫಲಾನುಭವಿಗಳಿಗೆ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು.
*ಗಮನ ಸೆಳೆದ ವಸ್ತು ಪ್ರದರ್ಶನ ಮತ್ತು ಮಾರಟ ಮಳಿಗೆಗಳು:* ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮ ಪ್ರಯುಕ್ತ ಮಧುಶ್ರೀ ಗಾರ್ಡನ್ ಆವರಣದಲ್ಲಿ ಆಯೋಜಿಸಲಾಗಿದ್ದ ಶಕ್ತಿ, ಗೃಹಜೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮಾಹಿತಿಯನ್ನೊಳಗೊಂಡ ಪ್ರದರ್ಶನ ಮಳಿಗೆಗಳು ಹಾಗೂ ಸಂಜೀವಿನಿ ಮತ್ತು ಎನ್.ಆರ್.ಎಲ್.ಎಂ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳ ವಸ್ತು ಪ್ರದರ್ಶನ ಮತ್ತು ಮಾರಟ ಮಳಿಗೆಗಳು ಎಲ್ಲರ ಗಮನ ಸೆಳೆದವು.
ಕಾರ್ಯಾಗಾರದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಬಿ. ಖಾದ್ರಿ, ಮಂಜುನಾಥ ಜಿ. ಗೊಂಡಬಾಳ, ಅಮರೇಶಪ್ಪ ಶರಣಪ್ಪ, ಖಾಸಿಂಸಾಬ್ ಮರ್ಧಾಸಾಬ್ ಹಾಗೂ ನಾಗರಾಜ ಅರಳಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರೆ ಪದಾಧಿಕಾರಿಗಳು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.
****




