Greetings on the birth anniversary of the brave warrior, the divine goddess of wisdom, the divine tarangini, the mother of the universe, Akka Mahadevi.

ತನುವಿನೊಳಗಿದ್ದು ತನುವ ಗೆದ್ದಳು, ಮನದೊಳಗಿದ್ದು ಮನವ ಗೆದ್ದಳು,
ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,
ಅಂಗಸುಖವ ತೊರೆದು ಭವವ ಗೆದ್ದಳು,
ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು
ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು.
-ಗುರು ಚನ್ನಬಸವಣ್ಣನವರು
ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೋಕಿನ ಉಡುತಡಿ ಎಂಬ ಗ್ರಾಮದಲ್ಲಿ ಶರಣ ಓಂಕಾರ ಮತ್ತು ಶರಣೆ ಲಿಂಗಮ್ಮ ದಂಪತಿಗಳ ಉದರದಲ್ಲಿ ದವನದ ಹುಣ್ಣಿಮೆಯಂದು ಉಗಮಗೊಂಡ ದಿವ್ಯ ತರಂಗಿಣಿ ಜಗನ್ಮಾತೆ ಅಕ್ಕಮಹಾದೇವಿಯವರು. ಅವರು ಬಸವಕಲ್ಯಾಣದ ಅನುಭಾವ ಮಂಟಪದ ಶರಣ ಸಮೂಹದೆಡೆಗೆ ಹರಿದು ಗುರು ಬಸವಣ್ಣನವರ ಭಕ್ತಿಯ ಶಕ್ತಿಯಾಗಿ ನಿಂದು ಶ್ರೀಶೈಲದ ಕದಳಿಯ ಬನದಲ್ಲಿ ಚೆನ್ನಮಲ್ಲಿಕಾಜುರ್ನದೇವರ ದೇವನೆಂಬ ಮಹಾಶರಧಿಯಲ್ಲಿ ಸಮಾಗಮಗೊಂಡರು. ಆದರೆ ಅವರು ತಾವು ನೀಡಿದ ವಚನಗಳ ಮೂಲಕ ಎಂದೆಂದಿಗೂ ನಮ್ಮಂಥ ಅಸಂಖ್ಯಾತ ಶರಣರ ಹೃನ್ಮನಗಳಲ್ಲಿ ವಾಸವಾಗಿರುತ್ತಾರೆ.
ಜಗನ್ಮಾತೆ ಅಕ್ಕಮಹಾದೇವಿಯವರು, ತಮ್ಮ ವಚನಗಳಲ್ಲಿ ಹಾಗು ತಮ್ಮ ಜೀವನದ ಶೈಲಿಯಲ್ಲಿ ಅನೇಕ ವಿಶೇಷವಾದ ತತ್ತ್ವಗಳನ್ನು ಕಲಿಸುತ್ತಾರೆ. ಪ್ರಮುಖವಾಗಿ ಇವರ ವಚನಗಳಲ್ಲಿ ಗಮನಿಸಬೇಕಾದ ಮೂರು ಅಂಶಗಳಿವೆ. 1. ಲಿಂಗದೇವನಲ್ಲಿ ಅನನ್ಯ ಶರಣಾಗತಿ. 2. ಗುರು ಬಸವ ಭಕ್ತಿ. 3. ಶರಣರ ಸಂಗ.
ಪರಮಾತ್ಮನನ್ನು ಹಠಯೋಗದಿಂದ, ನೀನೀಗ ಸಾಕ್ಷಾತ್ಕಾರವಾಗದಿದ್ದಡೆ ನಾನು ಪ್ರಾಣ ಕೊಡುತ್ತೇನೆ, ತಲೆ, ಒಡೆದುಕೊಂಡು ಸಾಯುತ್ತೇನೆ ಎನ್ನಲಿಲ್ಲ. ಭಕ್ತಿ ಮಾರ್ಗ ಮತ್ತು ಸಂಪೂರ್ಣ ಶರಣಾಗತಿಯಿಂದ ಒಲಿಸಿಕೊಳ್ಳಲು ಹೇಳುತ್ತಾರೆ.
ಅಯ್ಯಾ, ನೀ ಕೇಳಿದೊಡೆ ಕೇಳು, ಕೇಳದಿದರ್ಡೆ ಮಾಣು ಆನು ನಿನ್ನ ಹಾಡಿದ್ದಲ್ಲದೆ ಸೈರಿಸಲಾರೆನಯ್ಯಾ. ಅಯ್ಯಾ, ನೀ ನೋಡಿದೊಡೆ ನೋಡು ನೋಡದಿರ್ದಡೆ ಮಾಣು ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ. ಅಯ್ಯಾ, ನೀನು ಮೆಚ್ಚಿದಡೆ ಮೆಚ್ಚು, ಮೆಚ್ಚದಿರ್ದಡೆ ಮಾಣು ಆನು ನಿನ್ನನ್ನಪ್ಪಿದಲ್ಲದೆ ಸೈರಿಸಲಾರೆನಯ್ಯಾ. ಅಯ್ಯಾ, ನೀನು ಒಲಿದೊಡೆ ಒಲಿ, ಒಲಿಯದಿರ್ದಡೆ ಮಾಣು ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ. ಚೆನ್ನಮಲ್ಲಿಕಾರ್ಜುನದೇವರ ದೇವಯ್ಯಾ, ನಾ ನಿಮ್ಮ ಪೂಜಿಸಿ ಹರುಷದೊಳೋಲಾಡುವೆನಯ್ಯಾ.
ಬೆರೆಸುವಡೆ ಬೇಗ ತೋರಾ, ಹೊರ ಹಾಯ್ಕದಿರಯ್ಯಾ ನಿಮ್ಮಲ್ಲಿಗೆ ಸಲೆಸಂದ ತೊತ್ತಾನು; ಎನ್ನ ಹೊರ ಹಾಯ್ಕದಿರಯ್ಯಾ ಚೆನ್ನಮಲ್ಲಿಕಾಜುರ್ನದೇವರ ದೇವಯ್ಯಾ ನಿಮ್ಮ ನಂಬಿ ಬೆಂಬಳಿ ಬಂದೆನು, ಇಂಬುಗೊಳ್ಳಯ್ಯಾ ಬೇಗದಲಿ.
ಈ ವಚನಗಳಲ್ಲಿ ಅವರು ತಿಳಿಸಿರುವ ಶರಣಾಗತಿಯನ್ನು ನಾವು ಮತ್ತೆಲ್ಲಿಯೂ ಕಾಣುವುದಿಲ್ಲ.
“ಕೊಲ್ಲು ಕಾಯಿ ನಿಮ್ಮ ಧರ್ಮ” ಎನಗುಳ್ಳುದೊಂದು ಮನ, ಆ ಮನ ನಿಮ್ಮಲಿ ಸಿಲುಕಿದ ಬಳಿಕ ಎನಗೆ ಭಯವುಂಟೆ? ಎನ್ನುವ ಅಕ್ಕನ ಶರಣಾಗತಿಯನ್ನು ನಾವು ಅಳವಡಿಸಿಕೊಳ್ಳಬೇಕು. ಹಠಮಾರಿತನ, ಹಠಯೋಗದ ಮುಖಾಂತರ ದೇವನನ್ನು ಒಲಿಸಿಕೊಳ್ಳಲಿಲ್ಲ. ಭಕ್ತಿ ಮಾರ್ಗವನ್ನೇ ಅನುಸರಿಸಿ ಅದನ್ನೇ ನಮಗೂ ಬೋಧಿಸಿದ್ದಾರೆ.
ಆದಿ ಅನಾದಿಯೆನ್ನದೆ ಬಸವಣ್ಣ ಗಣಮೇಳಾಪವಾಗಿ ಬಂದು, ಅನಂತ ಯುಗಂಗಳಲ್ಲಿಯೂ, ಸಕಲ ಲೋಕದೊಳು ಚರಿಸುತ್ತಿಪ್ಪ ಸುಳುಹನರಿಯದೆ, ಸಕಲ ನಿಃಕಲರೆಲ್ಲರೂ ಭ್ರಮೆಗೊಂಡು ಬೀಳುತ್ತೇಳುತ್ತಲಿರ್ದರು ಇವರೆಲ್ಲರ ಮುಂದೆ ಆ ಗಣಂಗಳ ನಾನರಿದು ಬದುಕಿದೆ ಕಾಣ ಚೆನ್ನಮಲ್ಲಿಕಾಜುರ್ನದೇವರದೇವಾ.
ಶರಣರ ಸಮೂಹ ಇರುವಲ್ಲಿ ಗುರುಬಸವಣ್ಣನವರ ಚೈತನ್ಯ ಇರುತ್ತದೆ. ಗುರುಬಸವಣ್ಣನವರ ಅಸ್ತಿತ್ವಕ್ಕೆ ಆದಿ ಅನಾದಿಯ ಭೇದವೇ ಇಲ್ಲ ಅವರು ಶಾರೀರಿಕವಾಗಿ ಗೋಚರಿಸದಿದ್ದರೂ ತಾತ್ವಿಕವಾಗಿ ಎಂದೆಂದಿಗೂ ಶರಣರಿರುವ ಜಾಗದಲ್ಲಿ ಇರುತ್ತಾರೆ ಎನ್ನುತ್ತಾರೆ.
“ಕತ್ತಲಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನು, ಬಸವಣ್ಣನ ತೇಜದೊಳಗಲ್ಲದೆ ಆ ನಿನ್ನನೆಂತು ಕಾಂಬೆ ಹೇಳಾ”
ಎಂದು ಲಿಂಗದೇವನಿಗೆ ಕೇಳುವ ಅಕ್ಕನವರು, ಲಿಂಗದೇವನನ್ನು ಗುರುಬಸವಣ್ಣನವರಲ್ಲಿ ಕಾಣಬೇಕು ಎನ್ನುತ್ತಾರೆ. ಆದರೆ “ಚೆನ್ನ ಮಲ್ಲಿಕಾಜುರ್ನದೇವರ ದೇವನೆನಗೊಲಿದನಾಗಿ ನಾನು ಸಂಗನ ಬಸವಣ್ಣನ ಪಾದವ ಕಂಡು ನಮೋ ನಮೋ ಎನುತಿದರ್ನು”
ಎನ್ನುವ ಮಾತು ಎಷ್ಟೊಂದು ಆಶ್ಚರ್ಯವನ್ನುಂಟುಮಾಡುತ್ತದೆ. ಲಿಂಗದೇವನನ್ನು ಗುರು ಬಸವಣ್ಣನವರ ತೇಜದಲ್ಲಿಯೇ ಕಾಣಬೇಕು; ಗುರುಬಸವಣ್ಣನವರು ಲಿಂಗದೇವನ ಒಲುಮೆಯಾದರೆ ಮಾತ್ರ ಸಿಗುತ್ತಾರೆ ಎನ್ನುವ ಎರಡೂ ಮಾತುಗಳಲ್ಲಿ ಗುರುಬಸವ ಭಕ್ತಿ ಅತ್ಯಂತ ಎತ್ತರದಲ್ಲಿದೆ.
ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯ ಅಯ್ಯಾ ನಿಮ್ಮ ಶರಣರು ಇದ್ದ ಪುರವೆ ಕೈಲಾಸಪುರವಯ್ಯ ಅಯ್ಯಾ ನಿಮ್ಮ ಶರಣರು ನಿಂದುದೇ ನಿಜ ನಿವಾಸವಯ್ಯ ಚೆನ್ನಮಲ್ಲಿಕಾಜುರ್ನದೇವರ ದೇವಯ್ಯ ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರವೇ ಅವಿಮುಕ್ತ ಕ್ಷೇತ್ರವಾಗಿ, ಆನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿದೆರ್ನು.
ಶರಣರು ನೆಲೆಸಿದ ಸ್ಥಾನಗಳು ಪರಮ ಪವಿತ್ರ ಸ್ಥಾನಗಳಾಗುತ್ತವೆ, ಅವಿಮುಕ್ತ ಕ್ಷೇತ್ರಗಳಾಗುತ್ತವೆ. ಲಿಂಗಾಯತ ಧರ್ಮ ಉಳಿಯಲು ಬೆಳೆಯಲು ಇಂಥ ಕ್ಷೇತ್ರಗಳನ್ನು ಬೆಳೆಸಬೇಕು ಎಂದು ಹೇಳುವ ಅಕ್ಕನವರು ವಚನ ಧರ್ಮಕ್ಕೆ ಈ ವಚನದ ಮೂಲಕ ಬಹು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
ಇಷ್ಟಲಿಂಗ ದೀಕ್ಷೆಯನ್ನು ಯಾವ ವಯಸ್ಸಿಗೆ ತೆಗೆದುಕೊಳ್ಳಬೇಕು ಎನ್ನುವ ಅತ್ಯಂತ ಮಹತ್ವದ ಅಂಶವೊಂದು ಅಕ್ಕನವರ ವಚನದಲ್ಲಿ ಸಿಗುತ್ತದೆ.
ಉರಕ್ಕೆ ಜವ್ವನಗಳು ಬಾರದ ಮುನ್ನ, ಮನಕ್ಕೆ ನಾಚಿಕೆಗಳು ತೋರದ ಮುನ್ನ, ನಮ್ಮವರಂದೇ ಮದುವೆಯ ಮಾಡಿದರು. ಚೆನ್ನಮಲ್ಲಿಕಾಜುರ್ನದೇವರ ದೇವಂಗೆ, ಹೆಂಗೂಸೆಂಬ ಭಾವವ ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು.
ಈ ವಚನವನ್ನು ಗಮನಿಸಿದರೆ ದೀಕ್ಷೆಯನ್ನು 10-12 ವರ್ಷದ ಒಳಗಾಗಿ ಮಾಡಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ಯೌವ್ವನ ಎನ್ನುವಂಥದ್ದು ಬಾರದ ಮುನ್ನ ದೀಕ್ಷೆಯಾಗಬೇಕು. 12 ವರ್ಷದ ಒಳಗಿನ ಮಕ್ಕಳು, ಗಂಡು – ಹೆಣ್ಣು ಎಂಬ ಭೇದವಿಲ್ಲದೆ ಆಟ ಆಡುತ್ತಾರೆ. ಅಲ್ಲಿ ಮನಕ್ಕೆ ನಾಚಿಕೆ ಲಜ್ಜೆ ಎನ್ನುವಂಥದ್ದು ಇರುವುದಿಲ್ಲ. ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ಹುಡುಗರೊಂದಿಗೆ ಆಟವಾಡುತ್ತಿರುತ್ತಾರೆ, ಅಲ್ಲಿ ಯಾವುದೇ ಸಂಕೋಚ ಇರುವುದಿಲ್ಲ. ಆದರೆ ಅವರು ದೊಡ್ಡವರಾದ ತಕ್ಷಣ, ಹುಡುಗರಿಂದ ತಮ್ಮನ್ನು ತಾವು ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಲಜ್ಜೆ, ನಾಚಿಕೆಗಳು ಸಹಜವಾಗಿಯೇ ಬರುತ್ತವೆ. ಇದೆಲ್ಲಕ್ಕೂ ಮುನ್ನವೇ ಅಥರ್ತ್ ಹೆಣ್ಣು ಮಕ್ಕಳು ದೊಡ್ಡವರಾಗುವುದಕ್ಕೆ ಮುನ್ನವೆ ದೀಕ್ಷೆ ಮಾಡಿಸಬೇಕು. ಇನ್ನು ಗಂಡು ಮಕ್ಕಳಿಗೂ ಕೂಡ ಅಷ್ಟೇ ಅವರಿಗೆ ಸ್ವತಂತ್ರವಾಗಿ ಪೂಜೆ ಮಾಡುವ ಸಾಮಥ್ರ್ಯ ಇದ್ದರೆ, ಎಷ್ಟೇ ಚಿಕ್ಕ ವಯಸ್ಸಿನಲ್ಲಿಯೂ ಕೂಡ ದೀಕ್ಷೆ ಮಾಡಿಸಬಹುದು 12 ವರ್ಷಗಳ ಒಳಗಂತೂ ಕಡ್ಡಾಯವಾಗಿ ಮಾಡಿಸಲೇಬೇಕು.
“ಚೆನ್ನಮಲ್ಲಿಕಾರ್ಜುನದೇವರ ದೇವಯ್ಯಾ ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ ಲಿಂಗ ಸುಖಿಗಳ ಸಂಗದಲಿ ದಿನ ಕಳೆಯುವೆ”
ಎಂದು ಹೇಳುವ ಅಕ್ಕನವರು ಪ್ರತಿಯೊಬ್ಬರೂ ತಮ್ಮ ಆಯುಷ್ಯ ಇರುವವರೆಗೂ ಶರಣರ ಸಂಗದಲ್ಲಿಯೇ ಇರಬೇಕು ಎನ್ನುತ್ತಾರೆ.
ಆಯುಷ್ಯ ಹೋಗುತ್ತಿದೆ ಭವಿಷ್ಯ ತೊಲಗುತ್ತಿದೆ ಕೂಡಿರ್ದ ಸತಿ ಸುತರು ತಮತಮಗೆ ಹರಿದು ಹೋಗುತ್ತೈದಾರೆ ಬೇಡ ಬೇಡವೆಲೆ ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೆ ಚೆನ್ನಮಲ್ಲಿಕಾರ್ಜುನದೇವರ ದೇವನ ಶರಣರ ಸಂಗದಲ್ಲಿ ಹೂಣಿ ಹೊಕ್ಕು ಬದುಕು ಕಂಡಾ ಮನವೇ.
ಸಾಧಕನು ಯಾವುದೇ ಸಿದ್ಧಿಯನ್ನು ಪಡೆದಿರಲಿ, ಎಷ್ಟೇ ಔನ್ನತ್ಯಕ್ಕೇರಿರಲಿ, ಆದರೂ ಶರಣರ ಸಂಗವೇ ಈ ಜೀವನಕ್ಕೆ ಶೃಂಗಾರವೆನ್ನುತ್ತಾರೆ.
“ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ”
ಎಂದು ತಿಳಿಸಿ ನಮ್ಮನ್ನು ಸದಾ ಶರಣರ ಸಂಗದಲ್ಲಿರಬೇಕೆಂದು ಆಜ್ಞಾಪಿಸುತ್ತಾರೆ. 12ನೇ ಶತಮಾನದವರೆಗೆ ಸ್ತ್ರೀಯನ್ನು ಮಾಯೆ ಎಂದು ಕರೆದರು. ಆದರೆ ಶರಣರು, ಸ್ತ್ರೀ ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ ಎಂದರು. ಅಕ್ಕ ಇದಕ್ಕೂ ಮುಂದೆ ಹೋಗಿ, ದುರ್ಬಲ ಮನಸ್ಸಿನ ಪುರುಷನಿಗೆ ಸ್ತ್ರೀ ಮಾಯೆಯಾದರೆ, ದುರ್ಬಲ ಮನಸ್ಸಿನ ಸ್ತ್ರೀಗೆ ಪುರುಷನೂ ಮಾಯೆಯೇ ಎಂದು ಸಾರಿ ಲಿಂಗದೇವನೊಲಿದ ಶರಣರಿಗೆ ಯಾವ ಮಾಯೆಯೂ ಇಲ್ಲವೆನ್ನುತ್ತಾರೆ.
ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾಜುರ್ನದೇವರ ದೇವಯ್ಯ ನೀನೊಲಿದ ಶರಣಂಗೆ ಮಾಯೆಯಿಲ್ಲ ಮರಹಿಲ್ಲ ಅಭಿಮಾನವೂ ಇಲ್ಲ.
ಈ ರೀತಿ ಪುರುಷನೂ ಕೂಡ ಮಾಯೆಯಾಗಬಲ್ಲ ಎಂದು ಹೇಳಿದ ಪ್ರಪ್ರಥಮ ವ್ಯಕ್ತಿ ಜಗನ್ಮಾತೆ ಅಕ್ಕಮಹಾದೇವಿ ತಾಯಿಯವರು. ಲಿಂಗಾಯತ ಧರ್ಮೀಯರಿಗೆ ಇಂದು ಅತೀ ಅವಶ್ಯವಾಗಿ ಬೇಕಾಗಿರುವ ಸಂಗತಿಯೊಂದರ ಬಗ್ಗೆ ಅಕ್ಕ ಅಂದೇ ಹೇಳಿದ್ದಾರೆ.
“ನಾನು ಮಜ್ಜನಕ್ಕೆ ಮಾಡುವ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ ನಾನು ಮನೆಯೊಳಿಹುದಕ್ಕೆ ಮುನ್ನವೆ ಜಂಗಮಕ್ಕೆ ಗೃಹ ಕೊಡುವೆ”
ಈತನ ವಚನದಲ್ಲಿ ಜಂಗಮ ಎಂದರೆ ಸಮಾಜ. ಸಮಾಜಕ್ಕೆ ಗೃಹವ ಕೊಡುವೆ ಎಂದರೆ ಸಮಾಜದ ಬಂಧುಗಳು ಒಂದು ಕಡೆ ಸೇರಲು ಅನುಕೂಲವಾದಂಥ ಮನೆಯನ್ನು ಕಟ್ಟಿಸುತ್ತೇನೆ ಎನ್ನುತ್ತಾರೆ. ಇಂದು ಲಿಂಗಾಯತ ಧರ್ಮೀಯರೂ ಕೂಡ ತಮ್ಮ ಗೃಹ ಕಟ್ಟಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಜಂಗಮ ಗೃಹಗಳಾದ ಬಸವ ಮಂಟಪಗಳನ್ನು ಕಟ್ಟಿಸಬೇಕು. ಪ್ರತಿಯೊಂದು ಊರಿಗೂ ಬಸವ ಮಂಟಪಗಳಾಗಬೇಕು ಎನ್ನುವ ಸಂದೇಶ ಅಕ್ಕನವರ ವಚನದಲ್ಲಿದೆ.
ಧರ್ಮ ಪೀಠಗಳಲ್ಲಿ ಮಠಗಳಲ್ಲಿ ಹಣ ಹೆಚ್ಚಾದಷ್ಟು ಧರ್ಮದ ಪ್ರಚಾರ ಕಾರ್ಯ ಹೆಚ್ಚಾಗಬೇಕಿತ್ತು ಆದರೆ ದುರ್ದೈವ ಅವ್ಯವಹಾರಗಳು, ಅಕ್ರಮಗಳು, ಜಗಳಗಳು ಹೆಚ್ಚಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಊರುಗಳಲ್ಲಿ ಬಸವ ಮಂಟಪಗಳನ್ನು ಕಟ್ಟಿಕೊಳ್ಳಬೇಕು. ಬಸವ ಮಂಟಪ ಕಟ್ಟುವ ವರೆಗೆ ನಿಮ್ಮ ಕಾಣಿಕೆ ಮತ್ತೆಲ್ಲಿಯೂ ಹರಿದು ಹೋಗಬಾರದು. ಬಸವ ಮಂಟಪಗಳು ಸಂಪೂರ್ಣವಾಗಿ ಸ್ಥಳೀಯ ಟ್ರಸ್ಟಗಳಿಗೆ ಒಳಪಡಬೇಕು. ಅವುಗಳು ಸ್ಥಾನಿಕ ಸಂಸ್ಥೆಗಳಾಗಬೇಕೆ ಹೊರತು ಮಠ ಪೀಠ ಪ್ರತಿಷ್ಠಾನಗಳ ಸ್ವತ್ತಾಗಬಾರದು. ಮಠ ಪೀಠ ಪ್ರತಿಷ್ಠಾನಗಳ ಅಕ್ರಮಗಳಿಗೆ ತಮ್ಮ ಕಾಣಿಕೆ ವಿನಿಯೋಗಬಾರದು ಎಂದು ವಿನಂತಿಸಿಕೊಳ್ಳುತ್ತ ಮತ್ತೊಮ್ಮೆ ಜಗನ್ಮಾತೆ ಅಕ್ಕಮಹಾದೇವಿ ಮಾತೆಯ ಜಯಂತಿಯ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಶರಣು ಶರಣಾರ್ಥಿಗಳು
–ಸಚ್ಚಿದಾನಂದ ಚಟ್ನಳ್ಳಿ
೯೮೮೬೬೯೪೪೫೪