Breaking News

ಗುರುಶಿಷ್ಯಪರಂಪರೆಯಲ್ಲಿಗುರುಕಳೆಯಮಹತ್ವ

In the tradition of gurus, the importance of the guru is reflected in the divinity of the devotees.

ಜಾಹೀರಾತು

ಗುರುಕಳೆಯಿಲ್ಲದೆ ವಾದಿಪೆನೆ ಸಿಂಹ ಶರಣನೊಂದಿಗೆ?
ಗುರುಕಳೆ ಬಸವನೆಂಬ ಗಜದಲ್ಲಿ ಸೇರಿದ ಕಾರಣ
ಲಿಂಗದೇವನ ಶರಣನೆಂಬ ಸಿಂಹದೊಂದಿಗೆ ವಾದದ ಭರವು ಕೇಳಾ.
-ಗುರು ಬಸವಣ್ಣನರು

ಭಾರತ ದೇಶದ ಪ್ರಾಗೈತಿಹಾಸಿಕ ಕಾಲದಿಂದಲೂ ಇಲ್ಲಿ ಗುರು ಶಿಷ್ಯ ಪರಂಪರೆ ಅತ್ಯಂತ ಪವಿತ್ರ ಮತ್ತು ಪ್ರಬಲವಾಗಿದೆ. ಈ ಗುರು ಶಿಷ್ಯ ಪರಂಪರೆ ಪ್ರಬಲವಾಗಿರುವುದರಿಂದಲೇ, ಭಕ್ತಿಯೋಗ, ಜ್ಞಾನ ಯೋಗ, ಸಂಗೀತ, ನಾಟ್ಯ, ಆಯುರ್ವೇದ, ಯೋಗ ಮುಂತಾದ ಅನೇಕ ಕಲೆಗಳು ಶತ ಶತಮಾನಗಳಿಂದ ಈ ದೇಶದಲ್ಲಿ ಜೀವಂತವಾಗಿವೆ.

ಸ್ವಯಂ ಸಾಧಕರಾದ ಆದಿಗುರುಗುಳು ತಾವು ಕಲಿತ ಮತ್ತು ಸಾಧಿಸಿದ ವಿದ್ಯೆಯನ್ನು ತಮ್ಮ ಅಹಂ ತೃಪ್ತಿಗಾಗಿ ಬಳಸದೇ ಲೋಕ ಕಲ್ಯಾಣಕ್ಕಾಗಿ ಬಳಸುತ್ತ ಬಂದಿದ್ದಾರೆ.

ಒಬ್ಬ ಗುರು ತನ್ನ ನಂತರದ ದಿನಗಳಲ್ಲಿ ತನ್ನ ವಿಚಾರ, ತನ್ನ ಧರ್ಮ, ತನ್ನ ವಿದ್ಯೆ ಮತ್ತು ತಾನು ನಡೆದು ಬಂದ ಪರಂಪರೆಯನ್ನು ಮುಂದುರೆಸಿಕೊಂಡು ಹೋಗುವಂತಹ ಒಬ್ಬ ವ್ಯಕ್ತಿಯನ್ನು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡು, ತನ್ನೆಲ್ಲ ಲೌಕಿಕ ಮತ್ತು ಪಾರಲೌಕಿಕ ಸಂಪತ್ತನ್ನು ಆ ಶಿಷ್ಯನಿಗೆ ಧಾರೆಯೆರೆಯುತ್ತಾರೆ. ತನ್ನ ಗುರು ನಡೆದ ಪಥದಲ್ಲಿ ಆ ಶಿಷ್ಯ ನಡೆದು ಆ ಗುರುವಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತ ಆ ಪರಂಪರೆಯ ಅನುಯಾಯಿಗಳನ್ನು ವೃದ್ಧಿಗೊಳಿಸುತ್ತ ಹೋಗುತ್ತಾನೆ. ಇದಕ್ಕಾಗಿ ಆ ಶಿಷ್ಯ ಎಂತಹ ತ್ಯಾಗಕ್ಕಾದರೂ ಸಿದ್ಧನಾಗಿರುತ್ತಾನೆ. ಇಂತಹ ಅನೇಕ ಘಟನೆಗಳನ್ನು ನಾವು ಇತಿಹಾಸದಲ್ಲಿ ನೋಡಬಹುದು.

ಗುರುವಿನಿಂದ ಮಾರ್ಗ ದರ್ಶನ ಪಡೆದ ಶಿಷ್ಯ ತಾನೂ ಗುರುವೇ ಆಗುತ್ತಾನೆ. ಆ ಗುರುವಿನಲ್ಲಿರುವ ಗುರು ಕಳೆಯನ್ನು ತನ್ನ ಅಂತರ್ಬಾಹ್ಯಗಳಲ್ಲಿ ಅಳವಡಿಸಿಕೊಂಡು, ತನ್ನ ಆಸೆ ಆಕಾಂಕ್ಷೆಗಳನ್ನೆಲ್ಲ ಗುರುವಿನ ಆಕಾಂಕ್ಷೆಗಳನ್ನಾಗಿ ಪರಿವರ್ತಿಸಿಕೊಂಡು ಗುರುವಿನ ಸಂಕಲ್ಪಗಳನ್ನು ಈಡೇರಿಸಲು ಶಿಷ್ಯ ತನ್ನ ಪ್ರಾಣವನ್ನಾದರೂ ಕೊಟ್ಟು ಆ ಪಥದಲ್ಲಿ ನಡೆಯುತ್ತಾನೆ. ತನ್ನ ವೈಯಕ್ತಿಕ ಕೀರ್ತಿ ಪ್ರತಿಷ್ಠೆಗಳಿಗೆ ಬೆಲೆಕೊಡದೆ, ಗುರುವಿನ ವಿಚಾರಗಳ ಮೆರೆಸುವಿಕೆಯಲ್ಲಿ ತನ್ನ ಹಿತವನ್ನು ಕಾಣುವ ಶಿಷ್ಯ ಆ ಗುರು ಕಳೆಯನ್ನು ಹೊಂದುತ್ತಾನೆ. ಅಂತಹ ಶಿಷ್ಯ ಗುರು ಶಿಷ್ಯ ಪರಂಪರೆಯ ಶ್ರೇಷ್ಠ ಶಿಷ್ಯ ಮತ್ತು ಮುಂದಿನ ಶ್ರೇಷ್ಠ ಗುರು.

ಇತಿಹಾಸದಲ್ಲಿ ಅನೇಕ ಶಿಷ್ಯರು ತನಗೆ ವಿದ್ಯೆ ನೀಡಿದ ಅನುಗ್ರಹ ನೀಡಿದ ಗುರುವನ್ನೇ ಮರೆತು ತಾನು ಶ್ರೇಷ್ಠ ಎಂದು ಬೀಗಿದ ಘಟನೆಗಳೂ ಇವೆ. ಗುರು ಜೀವಂತವಾಗಿದ್ದಾಗ ಅವರೊಡನೆ ಸ್ಫರ್ಧೆಗಿಳಿದು, ಆ ಗುರುವಿನ ಪರಂಪರೆಯನ್ನು ಹಳಿದು ತಾನು ಬೇರೊಂದು ಪರಂಪರೆಯನ್ನು ಹುಟ್ಟು ಹಾಕಿರುವ ಘಟನೆಗಳೂ ಇತಿಹಾಸದಲ್ಲಿ ಇವೆ. ಆದರೆ ಅಂತಹ ಪರಂಪರೆಗಳು ಅವರ ಕಾಲಕಷ್ಟೇ ಜೀವಂತವಾಗಿದ್ದು ಅವುಗಳನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ. ಇನ್ನೂ ಗುರುವು ಲಿಂಗೈಕ್ಯರಾದ ನಂತರ ಗುರುಗಳನ್ನು ಹಳಿದು ಅವರು ಮಾಡಿದ್ದು ತಪ್ಪು ನಾನು ಮಾಡಿದ್ದು ಸರಿ ಎಂದು ಬೀಗುವ ಶಿಷ್ಯರು ಅವರು ಅತ್ಯಂತ ಅಧಮರೂ ದುಷ್ಟರೂ ಆಗಿದ್ದಾರೆ. ಇಂತಹ ಶಿಷ್ಯ ಗುರು ಶಿಷ್ಯ ಪರಂಪರೆಗೆ ಬಹುದೊಡ್ಡ ಕಳಂಕ. ಗುರು ಮಾಡಿದ್ದು ತಪ್ಪು ಎಂದು ಹೇಳುವ ಶಿಷ್ಯ ಒಂದು ಬಹುದೊಡ್ದ ಮತ್ತು ಶ್ರೇಷ್ಠ ತತ್ವ ಸಿದ್ಧಾಂತಕ್ಕೆ ಬಹುದೊಡ್ಡ ಹೊಡೆತ.

ಯಾವಾಗ ಯಾವಾಗ ಇತಿಹಾಸದಲ್ಲಿ ಗುರುವಿಗೆ ಉಲ್ಟಾ ಹೊಡೆದ ಶಿಷ್ಯರು, ಗುರುವಿಗೆ ತಿರುಗಿಬಿದ್ದ ಶಿಷ್ಯರು, ಹುಟ್ಟಿದ್ದಾರೋ ಅಂತಹ ಗುರುವಿನ ಅನೇಕ ವಿದ್ಯೆ ಮತ್ತು ಪರಂಪರೆಗಳು ಜಗತ್ತಿನಿಂದ ನಶಿಶಿಹೋಗಿವೆ. ಕಾರಣ ಗುರುವಿಗೆ ತಿರುಗೆ ತಿರುಗಿಬಿದ್ದ ಶಿಷ್ಯನಲ್ಲಿ, ಗುರುವಿನ ಆಶಯಕ್ಕೆ ವಿರುದ್ಧವಾಗಿ ನಡೆಯುವ ಶಿಷ್ಯನಲ್ಲಿ ಗುರುಕಳೆ ನೆಲೆಸಲಿಕ್ಕೆ ಸಾಧ್ಯವೇ ಇಲ್ಲ

ಎನ್ನ ಗುರು ಪರಮಗುರು ನೀವೆ ಕಂಡಯ್ಯ,
Use

ಗುರು ಬಸವಣ್ಣನವರು ಸ್ವಯಂ ಸಾಧಕರಾಗಿ, ಲಿಂಗದೇವರನ್ನೇ ತಮ್ಮ ಗುರುವನ್ನಾಗಿ ಸ್ವೀಕರಿಸಿ ಆ ಲಿಂಗದೇವನ ಕಳೆಯನ್ನು ತಮ್ಮಲ್ಲಿ ಧರಿಸಿದ ಮಹಾನ್ ಪ್ರವಾದಿ ಅವರು. ಎನ್ನ ಗುರು ಪರಮ ಗುರುವೂ ಲಿಂಗದೇವರು. ಎನ್ನ ಅರಿವಿನಿಂದ ಹೊರಬರುವ ಜ್ಞಾನ ಜ್ಯೋತಿಯೂ ಲಿಂಗದೇವರದ್ದೇ. ಎನ್ನ ನಡೆ ನುಡಿ ಎಲ್ಲವೂ ಲಿಂಗದೇವನಿಂದಲೇ ನಿಯಂತ್ರಿಸಲ್ಪಟ್ಟಿರುವುದು ಎಂದು ಹೇಳುತ್ತಿದ್ದಾರೆ. ಈ ವಿಷಯ ಶರಣ ಸಿದ್ಧರಾಮಯ್ಯನವರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳುತ್ತಿದ್ದಾರೆ. ಏಕೆಂದರೆ ಸಿದ್ಧರಾಮೇಶ್ವರರು ಗುರುವು ನೀನೆ, ಲಿಂಗವೂ ನೀನೆ ಜಂಗಮವೂ ನೀನೆ, ಆದಿಯಾಧಾರದಿತ್ತತ್ತ ನೀನೆ ಎಂದು ಗುರು ಬಸವಣ್ಣನವರ ಗುರುಕಳೆಯನ್ನು ಅರಿತು ಹೊಗಳಿದವರು.

ಗುರುಕಳೆಯಿಲ್ಲದೆ ವಾದಿಪೆನೆ ಸಿಂಹ ಶರಣನೊಂದಿಗೆ?

ಗುರು ಬಸವಣ್ಣನವರು ತನ್ನ ಅನುಯಾಯಿಗಳನ್ನು ಅತ್ಯಂತ ಗೌರವದಿಂದ ಕಂಡವರು. ತಮ್ಮ ವಿರೋಧಿಗಳನ್ನೂ ಮತ್ತಷ್ಟು ಗೌರವದಿಂದ ಕಂಡ ಮಹಾಗುರು. ತಾನು ಗಜವಾದರೆ ಇದಿರಿಗಿರುವವರು ಸಿಂಹ ಎಂದು ಗೌರವಿಸಿದವರು. ಆನೆ ಮತ್ತು ಸಿಂಹಗಳ ಬಲ ಮತ್ತು ಸಾಮರ್ಥ್ಯದಲ್ಲಿ ಒಂದು ಹೆಚ್ಚು ಒಂದು ಕಡಿಮೆ ಎಂದು ಹೇಳಲಿಕ್ಕಾಗದು. ಒಂದಕ್ಕಿಂತ ಒಂದು ಹೆಚ್ಚು ಎಂದು ಹೇಳಬಹುದಷ್ಟೇ. ನನ್ನಲ್ಲಿ ಗುರು ಕಳೆಯಿಲ್ಲದಿದ್ದರೆ ಸಿಂಹದಂತಹ ಬಲಶಾಲಿ ಶರಣರೊಡನೆ ವಾದ ಮಾಡಲಿಕ್ಕೆ ಸಾಧ್ಯವೇ? ಇಲ್ಲ.
ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಅಪಾರವಾದ ಗುರುಕಳೆಯನ್ನು ಹೊಂದಿದ್ದರು. ಯಾರೇ ಬರಲಿ ಯಾವುದೇ ವಿಷಯ ಚರ್ಚಿಸಲಿ ವಾದ ಮಾಡಲಿ, ತಮ್ಮ ಗುರುಕಳೆಯಿಂದ ಅದನ್ನು ಸಮರ್ಪಕವಾಗಿ ಉತ್ತರಿಸಿ ಎಂತಹದ್ದೇ ಸನ್ನೀವೇಶವನ್ನು ನಿಭಾಯಿಸುತ್ತಿದ್ದರು.

ಗುರು ಕಳೆಯಿಲ್ಲದವರು ಶರಣರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೇ ಇಲ್ಲ. ಗುರು ಕಳೆಯಿಲ್ಲದವರು ಪೀಠಾಧಿಕಾರಿಯಾದರೆ, ಅವರೊಂದಿಗೆ ಶರಣರು ಮಾತನಾಡಲು ಬಂದರೆ ಅವರು ಹಿಂಬಾಗಿಲಿನಿಂದ ಓಡಿಹೋಗುತ್ತಾರೆ. ಫೋನ್ ಬಂದ್ ಮಾಡಿಟ್ಟುಕೊಳ್ಳುತ್ತಾರೆ. ಮಾತಾಡಲು ಹೆಚ್ಚಿನ ಒತ್ತಡ ತಂದರೆ ಪೋಲಿಸರಿಗೆ ಕೊಡಬೇಕಾದುದನ್ನು ಕೊಟ್ಟು ಶರಣರಿಗೆ ಕೊಡಬಾರದನ್ನು ಕೊಡುತ್ತಾರೆ. ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶರಣರು ವಾದ ಮಾಡುತ್ತಾರೆ ಎಂದು ಪೋಲಿಸ್ ಕಾವಲಿಡುತ್ತಾರೆ. ವಾದ(ಚರ್ಚೆ)ಮಾಡುವವರನ್ನು ಹೊಡೆದು ಹೊರಗಟ್ಟುತ್ತಾರೆ. ಗುರುಕಳೆಯಿಲ್ಲದ ಇಂತಹ ವೇಷಧಾರಿ ಗುರುವಿನ ಸನ್ನಿಧಿ ಅದೇತಕ್ಕೆ ಬಾತೆಯಯ್ಯಾ?

*ಗುರುಕಳೆ ಬಸವನೆಂಬ ಗಜದಲ್ಲಿ ಸೇರಿದ ಕಾರಣ *ಲಿಂಗದೇವನ ಶರಣನೆಂಬ ಸಿಂಹದೊಂದಿಗೆ ವಾದದ ಭರವು ಕೇಳಾ.*

ಮೇಲಿನ ವಚನದಲ್ಲಿ ಲಿಂಗದೇವನ ಗುರು ಕಳೆ ನನ್ನಲ್ಲಿ (ಗುರು ಬಸವಣ್ಣನವರಲ್ಲಿ) ಸೇರಿರುವುದರಿಂದಲೇ ಲಿಂಗದೇವನ ಪ್ರತಿಬಿಂಬವಾದ ಶರಣರೊಡನೆ ವಾದ ಮಾಡಲು ಸಾಧ್ಯವಿದೆ. ವಾದ ಮಾಡಲು ಎಂದರೆ, ಲಿಂಗದೇವನೇ ಆಧಾರವಾಗಿರುವ, ಲಿಂಗದೇವನೇ ಮೂಲಸ್ತಂಭವಾಗಿರುವ ಧರ್ಮವನ್ನು ಎದುರಿಗೆ ಇರುವವರ ಎಲ್ಲ ಪ್ರಶ್ನೆಗಳು ಅನುಮಾನಗಳನ್ನು ಪರಿಹರಿಸಿ; ಬೋಧಿಸಲಿಕ್ಕೆ ಸಾಧ್ಯವಾಯಿತು. ತಮ್ಮ ಪ್ರತಿವಾದಿಗಳಿಗೂ ಮನ ಪರಿವರ್ತನೆ ಮಾಡಲು ಸಾಧ್ಯವಾಯಿತು. ನಿಂದಕರೂ ಸಾಧಕರಾಗುವಂತೆ ಮಾಡಲು ಸಾಧ್ಯವಾಯಿತು ಎಂದು ಗುರು ಬಸವಣ್ಣನವರು ಹೇಳುತ್ತಿದ್ದಾರೆ.

ಗುರು ಬಸವಣ್ಣನವರು ಲಿಂಗದೇವನ ಗುರುಕಳೆಯನ್ನು ಧರಿಸಿ, ಲಿಂಗಾಯತ ಧರ್ಮವನ್ನು ಕೊಟ್ಟು, ಅನುಭಾವ ಮಂಟಪ ಮತ್ತು ಮಹಾಮನೆಯನ್ನು ಕಟ್ಟಿ, ಮೂವತ್ತಾರು ವರ್ಷಗಳ ಕಾಲ ಅದನ್ನು ನಡೆಸಿ, ಕಲ್ಯಾಣವನ್ನು ಬಿಟ್ಟುಹೋಗುವ ಪ್ರಸಂಗ ಬಂದಾಗ ಗುರು ಚೆನ್ನ ಬಸವಣ್ಣನವರು ತಾನು ಮಾಡಿದ ಈ ಧರ್ಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವರೆಂಬ ಸಂಪೂರ್ಣ ಭರವಸೆಯಿಂದ

ಕರೆದು ಆಶೀರ್ವದಿಸಿ, ಹರಸಿ ಒಪ್ಪಿಸಿ ಬಸವ
ವರಚೆನ್ನಬಸವ ಶರಣರಿಗೆ ಕಂಟಕವು
ಹುರಿಯಾಳು ಕಾಯೋ ಹೊಸಮತವ

ಎಂದು ಗುರು ಬಸವಣ್ಣನವರು ತಮ್ಮ ಧರ್ಮ ಪೀಠದ ಸಂಪೂರ್ಣ ಜವಾಬ್ದಾರಿಯನ್ನು ಗುರು ಚೆನ್ನಬಸವಣ್ಣನವರಿಗೆ ವಹಿಸಿ ತಮ್ಮ ಮನಸ್ಸನ್ನು ನಿರ್ಮಳವನ್ನಾಗಿ ಮಾಡಿಕೊಂಡು ಲಿಂಗದೇವನಲ್ಲಿ ಲೀನವಾದರು.

ಅದರಂತೆ ಗುರು ಚೆನ್ನಬಸವಣ್ಣನವರು, ತಮ್ಮ ಪ್ರಾಣ ಪಣಕ್ಕಿಟ್ಟು ವಚನ ಸಾಹಿತ್ಯ ರಕ್ಷಿಸಿದರು. ಗುರು ಬಸವಣ್ಣನವರು ಮಾಡಿದ ಮಹಾಮನೆಯ ಕಾರ್ಯಗಳನ್ನು ಉಳವಿಯಲ್ಲಿ ಮಾಡಿದರು ತತ್ವ ಮಂಟಪವನ್ನು ಮೆರಿಸಿದರು. ತಮ್ಮ ಪ್ರಾಣಾರ್ಪಣೆ ಮಾಡಿ ಲಿಂಗಾಯತ ಧರ್ಮ ಮತ್ತು ಇದರ ಪರಂಪರೆಯನ್ನು ಉಳಿಸಿಕೊಟ್ಟರು.

ತಾವು ಗುರು ಬಸವಣ್ಣನವರ ಗುರುಕಳೆಯನ್ನು ಧರಿಸಿ ಈ ಎಲ್ಲಾ ಕಾರ್ಯಗಳನ್ನು ಮಾಡಿ ಗುರುವಿನ ಮಾರ್ಗದಲ್ಲಿ ನಡೆದರು. ನಮಗೆ ಆದರ್ಶಪ್ರಾಯರಾದರು.

*ಇದನ್ನು ಬಿಟ್ಟು, ಗುರು ಬಸವಣ್ಣನವರು ಮಾಡಿದ್ದು ತಪ್ಪು, ಕೆಳಜಾತಿಯವರಿಗೆ ಧರ್ಮ ದೀಕ್ಷೆ ಕೊಟ್ಟಿರುವುದು ಈ ನೆಲದ ಕಾನೂನಿನ ಪ್ರಕಾರ ತಪ್ಪು, ಸಹಪಂಕ್ತಿ ಭೋಜನ, ಭಿನ್ನ ಜಾತಿಯ ಸಮಧರ್ಮೀಯರ ವಿವಾಹ ಈ ನೆಲದ ಕಾನೂನಿ ಪ್ರಕಾರ ಅಪರಾಧ, ಅದಕ್ಕಾಗಿ ನಾವು ಇನ್ನು ಮುಂದೆ ಇಂತಹ ಕಾರ್ಯಗಳನ್ನು ಮಾಡುವುದಿಲ್ಲ. ಕೆಳಜಾತಿಯವರಿಗೆ ಲಿಂಗದೀಕ್ಷೆ ನೀಡುವುದಿಲ್ಲ ಅಂತರ್ವಣೀಯ ವಿವಾಹಗಳನ್ನು ಮಾಡುವುದಿಲ್ಲ, ಮಹಿಳೆಯರಿಗೆ ಸಮಾನ ಸ್ಥಾನ ನೀಡುವುದಿಲ್ಲ ಅವರನ್ನು ಶೂದ್ರರನ್ನಾಗಿಯೇ ಕಾಣುತ್ತೇವೆ ಎಂದು ಬಹು ಸಂಖ್ಯಾತರನ್ನು ಮೆಚ್ಚಿಸಲು ಒಂದು ಸುದ್ದಿ ಮಾಡಿದ್ದರೆ, ಇಂದು ಗುರು ಬಸವಣ್ಣನವರ ಹೆಸರು ಇರುತ್ತಿರಲಿಲ್ಲ ಬದಲಿಗೆ ಗುರು ಚೆನ್ನಬಸವಣ್ಣನವರ ಹೆಸರೇ ಇರುತ್ತಿತ್ತು. ಆದರೆ ಅವರು ಧರಿಸಿರುವ ಗುರು ಕಳೆ ಹೀಗೆ ಮಾಡಲು ಬಿಡಲಿಲ್ಲ. ಗುರು ಬಸವಣ್ಣನವರ ಮೆರವಣಿಗೆಯೇ ನನ್ನ ಮೆರವಣಿಗೆ ಅವರಾನಂದವೇ ನನ್ನಾನಂದ ಎಂದು ಭಾವಿಸಿ ಗುರುವಿನ ಮಣಿಹವನ್ನು ಪೂರೈಸಿದ ಮಹಾನ್ ಚೇತನ ಗುರು ಚೆನ್ನಬಸವಣ್ಣನವರು.
ಅವರಿಗೆ ಅನೇಕ ಆಮಿಷ ಬಂದಿರಬಹುದು, ನಿಮಗೆ ಮಹಾನ್ ಗುರುವನ್ನಾಗಿ ಮಾಡುತ್ತೇವೆ ಶೂನ್ಯ ಪೀಠದಲ್ಲಿ ತಾವು ಬಹುಕಾಲದವರೆಗೆ ಮೆರೆಸುತ್ತೇವೆ. ನೀವು ಎಲ್ಲರಿಗೂ, ಗುರು ಬಸವಣ್ಣನವರ ವಿರೋಧಿಗಳಿಗೂ ಗುರುವಾಗಿ ಮೆರೆಯಬಹುದು. ಬಹುಕಾಲದವರೆಗೆ ಪ್ರಧಾನಿಯಾಗಿ ಮೆರೆಯಬಹುದು. ಗುರು ಬಸವಣ್ಣನವರು ತಪ್ಪು ಮಾಡಿದ್ದಾರೆ ಎಂದು ಒಂದೇ ಒಂದು ಮಾತು ಹೇಳಿ ಎಂದು ವೈದಿಕರು ಆಮಿಷ ಒಡ್ಡಿದಂತೆ ತೋರುತ್ತದೆ. ಅದಕ್ಕೆ ಗುರು ಚೆನ್ನಬಸವಣ್ಣನವರು ಕೊಟ್ಟ ಉತ್ತರ ಹೀಗಿದೆ:

ಅರವತ್ತುನಾಲ್ಕು ಶೀಲದಲ್ಲಿ ನಡೆದು ತೋರಿದನೆನಗೆ ಬಸವಣ್ಣ ನೋಡಯ್ಯಾ.
ಆ ನಡೆಯನು ಹಿಡಿದು ಬಿಡದೆ ನಡೆವೆನು, ಲಿಂಗ ಜಂಗಮ ಸಾಕ್ಷಿಯಾಗಿ.
ಈ ನಡೆಯನು ಹಿಡಿದು ನಡೆವೆನು, ಪ್ರಸಾದ ಸಾಕ್ಷಿಯಾಗಿ.
ದೃಢದಿಂದ ಹಿಡಿದು ಬಿಡದೆ ಕಡೆಮುಟ್ಟಿ ಸಲಿಸುವೆ,
ಕೂಡಲಚೆನ್ನಸಂಗಮದೇವಾ.

ಎಂದು ಗುರು ಚೆನ್ನಬಸವಣ್ಣನರು ಪ್ರತಿಜ್ಞೆ ಮಾಡಿದರು ಇದರಿಂದ, ಗುರು ಚೆನ್ನಬಸವಣ್ಣನವರೂ ಗುರು ಬಸವಣ್ಣನವರಂತೆ ಪ್ರಧಾನಿಯ ಪಟ್ಟವನ್ನು ಕಳೆದುಕೊಳ್ಳಬೇಕಾಯಿತು. ಕಲ್ಯಾಣವನ್ನು ತೊರೆಯಬೇಕಾಯಿತು ಪ್ರಾಣಾರ್ಪಣೆಯನ್ನೂ ಮಾಡಬೇಕಾಯಿತು.

ಇದರಿಂದ ದೊರೆತ ಫಲವೇನೆಂದರೆ ನೈಜವಾದ ಲಿಂಗಾಯತ ಧರ್ಮ. ಗುರು ಬಸವಣ್ಣನರ ಹೃದಯಾಂತರಾಳದಿಂದ ಹೊಮ್ಮಿದ ನಿಜ ಲಿಂಗಾಯತ ಧರ್ಮ. ಇದು ಗುರು ಕಳೆಯ ಮಹಿಮೆ.

ಗುರು ಚೆನ್ನಬಸವಣ್ಣನರು ಗುರು ಬಸವಣ್ಣನವರು ಜೀವಂತವಾಗಿದ್ದಾಗಲೂ ಒಂದೇ ಭಾವನೆ ಮತ್ತು ಗುರು ಬಸವಣ್ಣನವರು ಲಿಂಗೈಕ್ಯರಾದಮೇಲೂ ಒಂದೇ ಭಾವನೆಯನ್ನು ಹೊಂದಿದ್ದರು. ಅದೇ ಗುರು ಭಕ್ತಿಯನ್ನು ಹೊಂದಿದರು ಆದ್ದರಿಂದಲೇ ಅವರು ಗುರು ಬಸವಣ್ಣನವರ ನಂತರ ಲಿಂಗಾಯತ ಧರ್ಮದಲ್ಲಿ ಎರಡನೇ ಸ್ಥಾನವನ್ನು ಪಡೆದರು.

ಹೀಗೆ ಗುರು ಬಸವಣ್ಣನವರು ಆದಿಯಾಗಿ ನೀಡಿದ ಗುರು ಚೆನ್ನಬಸವಣ್ಣನವರ ಬಳಿವಿಡಿದು, ಷಡ್ಗಣಾಧೀಷರ ಬಳುವಳಿಯಾಗಿ ಅಸಂಖ್ಯಾತ ಶರಣರ ಬಳಿಬಳಿವಿಡಿದು ಬಂದ ಲಿಂಗಾಯತ ಧರ್ಮ ಕಾಲಕಾಲಕ್ಕೆ ಗುರುಕಳೆಯಿಲ್ಲದ, ಗುರುವಿನಾಜ್ಞೆಗೆ ವಿರುದ್ಧವಾಗಿ ನಡೆದ ಕೆಲವು ವೇಷಧಾರಿಗಳಿಂದ ಲಿಂಗಾಯತ ಧರ್ಮ ಮಾಸಿದೆ ಕಳೆಗುಂದಿದೆ, ಕಲುಷಿತವಾಗಿದೆ. ಅದನ್ನು ನವೀಕರಿಸಲು, ಶುದ್ಧೀಕರಿಸಲು, ಪುನರುತ್ಥಾನಗೈಯಲು ಗುರುಕಳೆಧರಿಸಿದ ಗುರುಗಳು ಮತ್ತೆ ಬಂದರು. ಅವರೇ ನಮ್ಮ ಪರಮ ಪೂಜ್ಯ ಲಿಂಗಾನಂದ ಗುರುದೇವರು. ಲಿಂಗಾನಂದ ಅಪ್ಪಾಜಿಯವರೂ ಗುರುಕಳೆ ಧರಿಸದೇ ಕೇವಲ ಕಾವಿ ಧರಿಸಿದ್ದರೆ ಅವರಿಂದ ಇಂತಹ ಮಹಾನ್ ಕಾರ್ಯ ಆಗುತ್ತಿರಲಿಲ್ಲ ಕಾವಿಗಿಂತ ಮೇಲು ಅವರು ಧರಿಸಿದ ಗುರುಕಳೆ.
ತನ್ನ ಧರ್ಮ ಪ್ರಚಾರದ ಮಣಿಹ ಮುಂದು ವರೆಸಿಕೊಂಡು ಹೋಗುವರೆಂಬ ಸಂಪೂರ್ಣ ನಂಬಿಕೆಯಿಂದ ಗುರು ಲಿಂಗಾನಂದರು ಪರಮ ಪೂಜ್ಯ ಮಾತೆ ಮಹಾದೇವಿಯವರನ್ನು ತಮ್ಮ ಆಶೋತ್ತರಗಳನ್ನು ಈಡೇರಿಸುವ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡರು. ಪರಮ ಪೂಜ್ಯ ಮಾತೆ ಮಹಾದೇವಿಯವರು ಗುರು ಚೆನ್ನಬಸವಣ್ಣನವರಂತೆ, ಗುರು ಲಿಂಗಾನಂದರಂತೆ ಅದೇ ಗುರುಕಳೆಯನ್ನು ಧರಿಸಿ ಗುರು ಬಸವಣ್ಣನವರ ಮಹಿಮೆಯನ್ನು, ಲಿಂಗಾಯತ ಧರ್ಮವನ್ನು ಬಹುಮುಖವಾಗಿ ವೈವಿಧ್ಯಮಯವಾಗಿ ಬೆಳೆಸಿದರು. ಇವುಗಳನ್ನು ಮತ್ತಷ್ಟು ಬೆಳೆಸಲು ಶರಣಮೇಳ ಕಲ್ಯಾಣ ಪರ್ವಗಳಂತಹ ಬೃಹತ್ ಕಾರ್ಯಕ್ರಮಗಳನ್ನು ಹಾಕಿಕೊಂಡು, ಎಲ್ಲರನ್ನೂ ಕರೆದು ತಮ್ಮ ಆಶ್ರಮ, ತಮ್ಮನ್ನು ತೊರೆದು ಹೋದವರನ್ನೂ ಕರೆದು, ತಮ್ಮನ್ನು ನಿಂದಿಸುವವರನ್ನೂ ಕರೆದು ಒಂದು ಗೂಡಿಸಿಕೊಂಡು ಧರ್ಮ ಪ್ರಚಾರವನ್ನು ಮಾಡುತ್ತ ಬಂದರು.

ತಮ್ಮ ಅಗಾಧವಾದ ಅನುಭಾವ, ಜ್ಞಾನ, ಪಾಂಡಿತ್ಯ ದಿಂದ, ಅಂತರಾತ್ಮದಿಂದುದಯಿಸಿದ ಸಂಶೋಧನೆಗಳನ್ನು ತೆರೆದಿಡುತ್ತ ಲಿಂಗಾಯತ ಧರ್ಮಕ್ಕೆ ಬೇಕಾದ ಎಲ್ಲಾ ಆಯಾಮಗಳನ್ನು ನೀಡುತ್ತ. ಲಿಂಗಾಯತ ಧರ್ಮದ ದೇವರು ಲಿಂಗದೇವರು ಗುರು ಬಸವಣ್ಣನವರು ದೇವರನ್ನು ಲಿಂಗದೇವರೆಂದು ಕರೆದರು. ಕೂಡಲ ಸಂಗಮದೇವ ಎಂದರೆ ಲಿಂಗದೇವ ಎಂದು ಗುರು ಬಸವಣ್ಣನವರು ಜೀವಂತವಾಗಿದ್ದಾಗ ಹೇಳುತ್ತಿದ್ದರು, ಅವರೀಗ ನೇರವಾಗಿ ಹೇಳಲು ಸಾಧ್ಯವಿಲ್ಲದಿರುವುದರಿಂದ ಅವರ ವಚನಗಳನ್ನು ಓದುವವರು ಗುರು ಬಸವಣ್ಣನವರ ವ್ಯಕ್ತಿತ್ವ, ಅವರ ಜ್ಞಾನ, ಅವರ ಹಂಬಲಗಳನ್ನು ಜನ ಅಪಾರ್ಥ ಮಾಡಿಕೊಳ್ಳಬಾರದೆಂದು ಗುರು ಬಸವಣ್ಣನವರ ವಚನಾಂಕಿತವಾಗಿಯೇ ಲಿಂಗದೇವ ಬಳಸಿದರೆ ಗುರು ಬಸವಣ್ಣನವರ ವಚನಗಳಿಗೆ ತೋರಣ ಕಟ್ಟಿದಂತಾಗುತ್ತದೆ ಎಂದು ಮಾತೆ ಮಹಾದೇವಿಯವರು ಗುರು ಬಸವಣ್ಣನವರ ವಚನಾಂಕಿತವಾಗಿ ʼಕೂಡಲ ಸಂಗಮದೇವʼ ಬದಲಿಗೆ ಲಿಂಗದೇವ ಎಂದು ಬಳಸೋಣ ಎಂದು ಅಸಂಖ್ಯಾತ ಶರಣರಿಗೆ ಮನವರಿಕೆ ಮಾಡಿ ಅದನ್ನು ಇಪ್ಪಪತ್ತು ಮೂರು ವರ್ಷಗಳ ವರೆಗೆ ಬಳಸಿದರು ಜನಮನದಲ್ಲಿ ವಿರೋಧಿಗಳ ಎದೆಯಲ್ಲೂ ಲಿಂಗದೇವ ವಚನಾಂಕಿತವನ್ನು ನೆಲೆಗೊಳಿಸಿದರು.

ತಾವು ಲಿಂಗದೇವನಲ್ಲಿ ಲೀನವಾಗುವ ದಿನಗಳು ಹತ್ತಿರ ಬರುವಾಗ, ತಮ್ಮ ಈ ಪರಂಪರೆಯನ್ನು ತಮ್ಮ ಈ ವಿಚಾರ ಧಾರೆಗಳನ್ನು ಮುಂದುವರೆಸುವ ವ್ಯಕ್ಕಿಯನ್ನು ಆಯ್ಕೆ ಮಾಡುವ ಪ್ರಸಂಗ ಬಂದಾಗ ಅವರು ವಿಚಾರ ಮಾಡಿದ್ದು ಹೀಗೆ “ನಾನು ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಿದ್ದೇನೆ ನನ್ನ ಆಶಯಗಳನ್ನು ಅರ್ಥ ಮಾಡಿಕೊಂಡ ಅಸಂಖ್ಯಾತರನ್ನು ನಿರ್ಮಿಸಿದ್ದೇನೆ ಗುರು ಕಳೆಯನ್ನು ಧರಿಸಿದ ಅನೇಕ ಮರಿಗಜಗಳನ್ನು ನಿರ್ಮಿಸಿದ್ದೇನೆ. ಭೌತಿಕವಾದ ಪೀಠದ ಅಧಿಕಾರಿ ಯಾರಾದರೇನು ಗುರುಕಳೆಗೆ ಅಸಂಖ್ಯಾತರು ಅಧಿಕಾರಿಗಳಿದ್ದಾರೆ. ಬೌದ್ಧಿಕ ಪೀಠಕ್ಕೆ ಅನೇಕರು ಅಧಿಕಾರಿಗಳಿದ್ದಾರೆ ಜ್ಞಾನ ಪರಂಪರೆಗೆ ಲಿಂಗದೇವನನ್ನು ಆರಾಧಿಸವ ಅನೇಕ ಜ್ಞಾನವಾರಸುದಾರರಿದ್ದಾರೆ” ಎಂದು ಸಾಂಪ್ರದಾಯಿಕವಾಗಿ ಒಬ್ಬರನ್ನು ಪೀಠಾಧಿಕಾರಿಯಾಗಿ ಘೋಷಿಸಿ, ಅಸಂಖ್ಯಾತರು ನನ್ನ ಜ್ಞಾನವಾರಸುದಾರರಿದ್ದಾರೆ ಪೀಠಾಧಿಕಾರಿ ತಪ್ಪು ಮಾಡಿದರೆ ಜ್ಞಾನಾಧಿಕಾರಿಗಳು ತಿದ್ದುತ್ತಾರೆ ಎನ್ನುವ ಅಪಾರವಾದ ನಂಬಿಕೆ ಮಾತಾಜಿಯವರದ್ಧಾಗಿತ್ತು.

ಅದರಂತೆ ಜ್ಞಾನದ ವಾರಸುದಾರರು ಪರಮಪೂಜ್ಯ ಮಾತಾಜಿಯವರ ಆಶಯಗಳನ್ನು ಅಂತಂಗದಲ್ಲಿ ಅಳವಡಿಸಿಕೊಂಡು, ಭೌತಿಕವಾದ ಪೀಠ ಬಿಡುತ್ತೇವೆಯೇ ಹೊರತು ಬೌದ್ಧಿಕವಾದ ಪೀಠ ಬಿಡಲ್ಲ ಎಂದು ಅವರು ಸಂಶೋದಿಸಿದ “ಲಿಂಗದೇವʼ ವಚನಾಂಕಿತವನ್ನು ಹೃದಯಂಗತ, ಆತ್ಮಗತವನ್ನಾಗಿ ಮಾಡಿಕೊಂಡ, ಆತ್ಮಾನುಸಂಧಾನದಲ್ಲಿ ಅಳವಡಿಸಿಕೊಂಡ ಅಸಂಖ್ಯಾತ ಶರಣರು ವಚನಗಳಲ್ಲಿ ಲಿಂಗದೇವನನ್ನು ಹಾಡಿ ಕೊಂಡಾಡಿ ಆನಂದಿಸುತ್ತಿದ್ದಾರೆ.

ಮಾತಾಜಿಯವರ ಗುರು ಕಳೆಯನ್ನು ಧರಿಸಿದ ಪೂಜ್ಯರಾದ ಚೆನ್ನಬಸವಾನಂದ ಸ್ವಾಮೀಜಿಯವರು ಮತ್ತು ಪೂಜ್ಯರಾದ ಸತ್ಯಾದೇವಿ ಮಾತೆಯವರು ಮಾತಾಜಿಯವರ ಜ್ಞಾನ ಪೀಠಕ್ಕೆ ಉತ್ತರಾಧಿಕಾರಿಗಳಾಗಿ ಗುರು ಬಸವಣ್ಣನವರಾದಿಯಾಗಿ, ಗುರು ಚೆನ್ನಬಸವಣ್ಣನವರ ಮತ್ತು ಅನೇಕ ಶರಣರ ಪ್ರಾಣಾರ್ಪಣೆಯಿಂದಗಾಗಿ ಅಸಂಖ್ಯಾತ ಶರಣರ ತ್ಯಾಗ ಬಲಿದಾನಗಳ ಬಳಿವಿಡಿದು ಬಂದ ಲಿಂಗಾಯತ ಧರ್ಮವನ್ನು ಕಲುಷಿತ ಮಾಡದೆ ನೈಜ ರೂಪದಲ್ಲಿ ಆಚರಿಸುತ್ತ, ಕಳೆದ ಮೂರು ವರ್ಷಗಳಿಂದ ಸ್ವಾಭಿಮಾನಿ ಕಲ್ಯಾಣಪರ್ವ, ಸ್ವಾಭಿಮಾನಿ ಶರಣಮೇಳಗಳನ್ನು ಮಾಡುತ್ತ ಪರಮ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಮತ್ತು ಪರಮ ಪೂಜ್ಯ ಮಾತೆ ಮಹಾದೇವಿಯವರ ಗುರುಕಳೆಯನ್ನು ಬಿತ್ತುತ್ತ, ಗುರುದ್ರೋಹಿಯಾಗದೆ, ತತ್ವನಿಷ್ಠೆ, ಗುರು ನಿಷ್ಠೆ, ಧರ್ಮನಿಷ್ಠೆ, ಲಿಂಗದೇವ ನಿಷ್ಠೆಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ನನಗೆ ಜ್ಞಾನದ ವಾರಸುದಾರತ್ವೇ ಸಾಕೆಂದು ಈ ಮಹಾನ್ ಗುರು ಶಿಷ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಬನ್ನಿ ಶರಣರೇ ಇಂತಹ ಗುರುಕಳೆಯ ಸ್ವಾಭಿಮಾನಿ ಶರಣಮೇಳದಲ್ಲಿ ಭಾಗಿಯಾಗಿ ಗುರುಕಳೆಯನ್ನು ಹೊಂದಿ ಗುರು ಬಸವಣ್ಣನವರಾದಿಯಾಗಿ ಅಂಸಂಖ್ಯಾತ ಶರಣರ ಬಳಿವಿಡಿದು, ಪೂಜ್ಯ ಶ್ರೀ ಲಿಂಗಾನಂದ ಅಪ್ಪಾಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿ ಮಾತಾಜಿಯವರಿಂದ ಬಳುವಳಿಯಾಗಿ ಬಂದ ಗುರುಕಳೆಯನ್ನು ಕಳೆದುಕೊಳ್ಳದೇ ಅದನ್ನು ಅಳಡಿಸಿಕೊಂಡು ಭಾವ ಪುಳಕಿತಗೊಂಡು ಅನುಸಂಧಾನಿಸೋಣ, ಮುಂದಿನ ಪೀಳಿಗೆಗೂ ಬಳುವಳಿಯಾಗಿ ನೀಡೋಣ ಎಂದು ಆಶಿಸುತ್ತ ತಮ್ಮೆಲ್ಲರನ್ನು ಸ್ವಾಭಿಮಾನಿ ಶರಣಮೇಳಕ್ಕೆ ಆತ್ಮೀಯತೆಯತೆಯಿಂದ ಬರಮಾಡಿಕೊಳ್ಳಲು ಕಾತುರರಾಗಿದ್ದೇವೆ.

ಗುರು ಬಸವಣ್ಣನವರ, ಗುರು ಚೆನ್ನಬಸವಣ್ಣನವರ , ಷಡ್ಗಣಾಧೀಶರು, ಗುರುಲಿಂಗಾನಂದ ಸ್ವಾಮೀಜಿಯವರ ಮತ್ತು ಗುರು ಮಾತೆ ಮಹಾದೇವಿ ಮಾತಾಜಿಯವರ ನಡೆಯನು ಹಿಡಿದು ಬಿಡದೆ ನಡೆಯೋಣ, ಲಿಂಗ ಜಂಗಮ ಸಾಕ್ಷಿಯಾಗಿ.ಅವರ ನಡೆಯನು ಹಿಡಿದು ನಡೆಯೋಣ, ಪ್ರಸಾದ ಸಾಕ್ಷಿಯಾಗಿ.
ದೃಢದಿಂದ ಹಿಡಿದು ಬಿಡದೆ ಕಡೆಮುಟ್ಟಿ ಸಲಿಸೋಣ ಬನ್ನಿ

ಶರಣು ಶರಣಾರ್ಥಿ

ಸಚ್ಚಿದಾನಂದ ಪ್ರಭು ಚಟ್ನಳ್ಳಿ

About Mallikarjun

Check Also

ದೆಹಲಿಗಣರಾಜ್ಯೋತ್ಸವ ಸ್ತಬ್ಧಚಿತ್ರ:ನೆರೆದಜನಸ್ತೋಮದಮನಸೂರೆಗೊಂಡಸ್ತಬ್ಧಚಿತ್ರಪೂರ್ವಾಭ್ಯಾಸದಲ್ಲಿಅತ್ಯಾಕರ್ಷಕವಾಗಿಮೂಡಿಬಂದ ಸ್ತಬ್ಧಚಿತ್ರ : ರಾಜ್ಯದ ಸ್ತಬ್ಧಚಿತ್ರಕ್ಕೆಪ್ರಶಸ್ತಿಲಭಿಸುವವಿಶ್ವಾಸಆಯುಕ್ತ ಹೇಮಂತ ನಿಂಬಾಳ್ಕರ್

Delhi Republic Day Stills: Enthusiastic stills from the crowd Exciting stills at rehearsals: Confident of …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.