Breaking News

ಅಂಬೇಡ್ಕರ್ ಬಗ್ಗೆ ಅಮಿತ್ ಶಾ ವ್ಯಸನದ ಹೇಳಿಕೆ ಖಂಡನೀಯ – -ಟೂಡಾ ಶಶಿಧರ್

Amit Shah’s addiction statement about Ambedkar is condemnable – -Tooda Shashidhar

ಜಾಹೀರಾತು

ತಿಪಟೂರು : ಬಹುಸಂಸ್ಕೃತಿಯ ನಮ್ಮ ದೇಶದ ಸಂವಿಧಾನ ಜನಜೀವನ ವಿಧಾನದ ರಕ್ಷಣೆ ಮತ್ತು ಅದರ ಬೆಳವಣಿಗೆ ಆಧಾರದಲ್ಲಿ ರೂಪಿತಗೊಂಡಿದೆ ಎಂದು ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷ ಸಿ.ಬಿ.ಶಶಿಧರ್ (ಟೂಡಾ) ತಿಳಿಸಿದ್ದಾರೆ.

ಕಾಲದ ಅಗತ್ಯಾನುಸಾರ ಕೆಲ ಪ್ರಗತಿ ಪರ ಮತ್ತು ಜೀವಪರ ಹೊಸತು ಅಂಶಗಳನ್ನು ತನ್ನೊಳಕ್ಕೆ ಸೇರಿಸಿಕೊಳ್ಳುವ ಶಕ್ತಿ ಕೂಡ ಅದಕ್ಕಿದೆ. ಹೀಗಾಗಿ ಹಲವು ಪ್ರಮುಖ ಸಂದರ್ಭದಲ್ಲಿ ಕಾಲದ ಅಗತ್ಯಾನುಸಾರ ತಿದ್ದುಪಡಿ ಕೂಡ ಸಾಧ್ಯವಾಗಿದೆ.

ಎಲ್ಲದಕ್ಕೂ ಮುಖ್ಯವಾಗಿ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ವಿಚಾರ ಸ್ವಾತಂತ್ರ್ಯ ಸಂವಿಧಾನದ ಮೂಲ ಧರ್ಮ. ಹೀಗಾಗಿ ಸಂವಿಧಾನ ನಮ್ಮ ದೇಶದ ರಾಜಧರ್ಮವೇ ಆಗಿದೆ.

ಇದರ ಮೇಲೆ ದುರಾಕ್ರಮಣದ ನೀತಿಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡುವ ಮಾತುಗಳ ಹುನ್ನಾರದ ಹಿಂದಿರುವ ಮೂಲ ಪ್ರೇರಣಾ ಶಕ್ತಿ ನಿರಂಕುಶ ಪ್ರಭುತ್ವದ ಪ್ರತಿಷ್ಠಾನ ಮಾಡುವ ಸಂಕಲ್ಪ ತೊಟ್ಟ ಸಂಘ ಪರಿವಾರದ್ದು. ಅದರ ರಾಜಕೀಯ ಘಟಕ ಭಾಜಪ ಇದನ್ನು ಕಾರ್ಯರೂಪಕ್ಕೆ ತರಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಸಂವಿಧಾನ ಕರಡು ಸಮಿತಿ ಅಧ್ಯಕ್ಷ, ಸಂವಿಧಾನ ಶಿಲ್ಪಿ ಎಂದೇ ಹೆಸರಾದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಕೇಂದ್ರವಾಗಿ ಇಟ್ಟುಕೊಂಡು ಅವರ ಅವಮಾನಿಸುವ ಕೆಲಸ ನಡೆಯುತ್ತಿದೆ ಎಂದು ಇದೆ ವೇಳೆ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದು,
ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಂವಿಧಾನದ 75ನೇ ವರ್ಷಾಚರಣೆ ಪ್ರಯುಕ್ತ ನಡೆದ ಚರ್ಚೆಯ ದಿಕ್ಕು ತಪ್ಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸದನದಲ್ಲಿ ಆಡಿದ “ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್… ಎನ್ನುತ್ತಿರುವುದು ಇತ್ತೀಚೆಗೆ ಇದೊಂದು ವ್ಯಸನದಂತಾಗಿದೆ” ಎನ್ನುವರ್ಥದ ಮಾತು ಅತ್ಯಂತ ಖಂಡನೀಯ.

ಇಂಥ ಅನರ್ಥದ ಮತ್ತು ದೇಶವನ್ನು ಆಂತರಿಕ ಗಂಡಾಂತರಕ್ಕೆ ಈಡುಮಾಡುವ, ಸಾಮಾಜಿಕ ಮೌಲ್ಯಗಳನ್ನು ನಾಶಪಡಿಸುವ ದೇಶವಿರೋಧಿಯಾದ ಅಪಾಯಕಾರಿ ಮಾತುಗಳನ್ನು ಆಡಿದ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಕೇಂದ್ರ ಸಂಪುಟದಿಂದ ಕೈಬಿಡಬೇಕು. ಇಲ್ಲವೇ ಷಾ ಅವರೇ ರಾಜೀನಾಮೆ ನೀಡಬೇಕು ಎಂದು ಈ ಮೂಲಕ ಆಗ್ರಹಿಸಿದ್ದಾರೆ.

ಬೆಲೆ ಏರಿಕೆ, ಜಿಎಸ್ ಟಿ, ಜಾತಿ ಜನಗಣತಿ ಮತ್ತಿತರ ಜನಸಾಮಾನ್ಯರ ಪರ ಸಮಗ್ರ ಕಾಳಜಿಗಳನ್ನು ಸದನದಲ್ಲಿ ನಿರಂತರವಾಗಿ ಕಾಂಗ್ರೆಸ್ ಪಕ್ಷದ ನಾಯಕರು, ಸಂಸದರು ಎತ್ತುತ್ತಿರುವುದರಿಂದ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಜನರ ದೃಷ್ಟಿಯಲ್ಲಿ ಕೇಂದ್ರದ ನೈತಿಕತೆ ಕುಸಿಯತೊಡಗಿದೆ.
ಇವೆಲ್ಲದರಿಂದ ಬಚಾವಾಗಲು ಜನರ ಚಿತ್ತ ಚದುರಿಸುವ ಪ್ರಯತ್ನಗಳನ್ನು ಭಾಜಪ ಮಾಡುತ್ತಿದೆ ಎಂದು ಇದೆ ವೇಳೆ ಅವರು ಆರೋಪಿಸಿದರು.

ಕರ್ನಾಟಕದಲ್ಲಿ ಕೂಡ ಈ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಆದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಡಬಾರದ ಸ್ತ್ರೀ ನಿಂದನಾ ಪದಗಳನ್ನು ಬಳಸಿ ಅನಗತ್ಯ ವಿವಾದ ಸೃಷ್ಟಿಸಿದ ಭಾಜಪ ಎಂಎಲ್ಸಿ ಸಿ ಟಿ ರವಿ ಅವರ ನಡೆ ಅಕ್ಷಮ್ಯವಾಗಿದೆ.

ಸ್ತ್ರೀ ಗೌರವ, ಸಮಾನತೆ ಮತ್ತು ಸದಾಚಾರ, ಸನ್ನಡೆಯ ಬಸವಾದಿ ಶರಣ ಪರಂಪರೆಯನ್ನು ಪ್ರಜ್ಞಾಪೂರ್ವಕವಾಗಿ ಅವಮಾನಿಸುವ, ಅದಕ್ಕೆ ಚ್ಯುತಿ ತರುವ ನಡೆ ಇದಾಗಿದೆ. ಶರಣ ಪರಂಪರೆಯ ಅಕ್ಕ ಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆ ಸಂಕವ್ವೆ, ಆಧುನಿಕ ಯುಗದ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮತ್ತು ಚಾಂದ್ ಬೀಬಿ ಅವರಂಥ ಮಹಾ ವೀರವನಿತೆಯರ ನೆಲದಲ್ಲಿ ನಿಂತು ಮಹಿಳೆಯರ ಮಾನ, ಸಮ್ಮಾನಗಳ ಜನಸಂಸ್ಕೃತಿಗೆ ಅವಹೇಳನ ಮಾಡುವ ದುಷ್ಟ ಸಂಕಲ್ಪ ಇದಾಗಿದೆ. ಬಸವೇಶರ ಸಂಸ್ಕೃತಿ ಮತ್ತು ಲಿಂಗಾಯತ ನಂಬಿಕೆಗಳ ಮೇಲೆ ನಡೆದ ಹಲ್ಲೆ ಇದಾಗಿದೆ.

ಬಸವೇಶರ ಸಮಾನತೆ, ಸಕಲ ಜೀವಾತ್ಮರಿಗೆ ಲೇಸ ಬಯಸುವ ಆಶಯಗಳನ್ನು ಸಂವಿಧಾನದ ಆಶಯಗಳಿಗೆ ಉಸಿರಾಗಿಸಿದ ಅಂಬೇಡ್ಕರ್ ಆಧುನಿಕ ನಿಜ ಶರಣ. ಶರಣ ಸಂಸ್ಕೃತಿ ಎತ್ತಿಹಿಡಿಯುವ ಕೆಲಸವನ್ನು ಆಧುನಿಕ ಕಾಲದಲ್ಲಿ ಮಾಡಿದ ಅಂಬೇಡ್ಕರ್ ನಮ್ಮವರು. ನಮ್ಮ ಹಿರೀಕರು. ಅವರಿಗೆ ಮಾಡುವ ಅವಮಾನ ಶರಣ ಸಂಸ್ಕೃತಿಯ ಅವಮಾನ, ಸಹಬಾಳ್ವೆಯ ಸಾಮರಸ್ಯ ಜನಸಂಸ್ಕೃತಿಯ ಅವಮಾನ ಎನ್ನುವುದು ನನ್ನ ಭಾವನೆ ಎಂದು ಇದೆ ವೇಳೆ ತಿಳಿಸಿದ್ದಾರೆ.

About Mallikarjun

Check Also

ಡಾಕ್ಟರ್ ಕ್ಯಾಂಪ್‌ನ ರವಿ ಅವರಿಗೆ ಡಾಕ್ಟರೇಟ್ ಪದವಿ

Ravi from Doctor Camp receives his doctorate degree ಗಂಗಾವತಿ, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.