Breaking News

ಪೂಜ್ಯ ಶ್ರೀ ಮಾತೆ ಮಹಾದೇವಿಮಾತಾಜಿಯವರಸಂಸ್ಮರಣೆಯಲ್ಲಿ,(ಕರಿಗಳುಮತ್ತುಕುರಿಗಳು)

In memory of Pujya Shree Mathe Mahadevi Mataji…. (bucks and sheep)

ಜಾಹೀರಾತು


ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು-
ತೆರನನರಿಯದೆ ತನಿರಸದ-
ಹೊರಗಣ ಎಲೆಯನೆ ಮೆಲಿದವು !
ನಿಮ್ಮನರಿವ ಮದಕರಿಯಲ್ಲದೆ
ಕುರಿ ಬಲ್ಲುದೆ ಲಿಂಗದೇವಾ


ಗುರು ಬಸವಣ್ಣನವರು 12ನೇ ಶತಮಾನದಲ್ಲಿ ಹೊಸ ಧರ್ಮವನ್ನು ಕೊಟ್ಟಾಗ ಅನೇಕರು ಈ ಧರ್ಮದೆಡೆಗೆ ಆಕರ್ಷಿತರಾಗಿ ಅನೇಕರು ಈ ಧರ್ಮವನ್ನು ಸ್ವೀಕರಿಸಿದರು. ಕೆಲವೇ ಕೆಲವರು ಈ ತತ್ವದ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡರು. ವಿಚಾರವೆಂಬ ಹೂವು ಅವರಲ್ಲಿ ಆಚಾರವೆಂಬ ಕಾಯಿಯಾಗಿತ್ತು. ನಿಷ್ಪತ್ತಿಯೆಂಬ (ಧರ್ಮದ ಆತ್ಯಂತಿಕ ಆಚರಣೆ) ಹಣ್ಣೂ ಆಯಿತು.


ಅನೇಕರು ಈ ಧರ್ಮದ ಆಳವಾದ ತತ್ವಗಳನ್ನು ಅಳವಡಿಸಿಕೊಳ್ಳುವಲ್ಲಿ ಅಸಮರ್ಥರಾದರು. ಅವರು ಭಾಗಶಃ (Partially) ತತ್ವಗಳನ್ನು ಅಳವಡಿಸಿಕೊಂಡರೇ ಹೊರತು ಸಂಪೂರ್ಣವಾದ ತತ್ವವನ್ನು ಅಳವಡಿಸಿಕೊಳ್ಳಲಿಲ್ಲ. ಲಿಂಗವಂತ ಧರ್ಮವು ಬಿಡಿಬಿಡಿಯಾದ ತತ್ವಗಳಿಂದ ಕೂಡಿರದೆ ಇದೊಂದು ತತ್ವ ಸಮುಚ್ಛಯವಾಗಿದೆ. ಒಂದು ವಿಚಾರ ಮಾತ್ತು ಆಚಾರ ಮತ್ತೊಂದು ವಿಚಾರ ಆಚಾರದೊಂದಿಗೆ ಬೆಸೆದುಕೊಂಡಿರುತ್ತದೆ. ಎಲ್ಲಾ ತತ್ವಗಳನ್ನು ಅಳವಡಿಸಿಕೊಂಡು ಆಚರಿಸಿದರೆ ಮಾತ್ರ ಅವರು ಪರಿಪೂರ್ಣ ಲಿಂಗವಂತರು ಇಲ್ಲದಿದ್ದರೆ ಕಲಬೆರೆಕೆ ಲಿಂಗಾಯತರು. ಕಲಬೆರಕೆ ಲಿಂಗಾಯತರಿಂದ ಲಿಂಗಾಯತ ಧರ್ಮಕ್ಕೆ ಆದ ಹಾನಿ ಮತ್ತೊಬ್ಬರಿಂದಾಗಿಲ್ಲ. ಉದಾಹರಣೆಗೆ ಹೇಳುವುದಾದರೆ ಅಷ್ಟಾವರಣಗಳು ಲಿಂಗವಂತ ಧರ್ಮದ ಮೊದಲ ಆಚರಣೆಗಳು. ಕುರಿಗಳು ಕಬ್ಬಿನ ತೋಟವ ಹೊಕ್ಕು ಕೇವಲ ಎಲೆಗಳನ್ನು ಮೆಲಿದಂತೆ ಕೆಲವರು ಅಷ್ಟಾವರಣಗಳಲ್ಲಿ ಕೇವಲ, ವಿಭೂತಿ ರುದ್ರಾಕ್ಷಿಗಳನ್ನು ಧರಿಸಿಕೊಳ್ಳುತ್ತಾರೆ ಇಷ್ಟಲಿಂಗ ಧರಿಸಿರುವುದಿಲ್ಲ. ಇಷ್ಟಲಿಂಗ ಧರಿಸಿದರೂ ನಿಷ್ಠೆಯಿಂದ ಪೂಜಿ ಕರುಣೋದಕ ಕರುಣ ಪ್ರಸಾದ ದಿನ ನಿತ್ಯವೂ ಸ್ವೀಕರಿಸುವುದಿಲ್ಲ. ಕೆಲವರು ಕೇವಲ ಜಂಗಮಾರ್ಚನೆ ಮಾತ್ರ ಮಾಡುತ್ತಾರೆ. ಕೇವಲ ಕಾವಿ ಬಣ್ಣದ ಬಟ್ಟೆ ನೋಡಿ ಅವರಿಗೆ ಉಪಚಾರ ಮಾಡುತ್ತಾರೆ ಅವರಿಂದ ಜ್ಞಾನ ಪಡೆಯುವ ಹಂಬಲವಿರುವುದಿಲ್ಲ.
ಅಷ್ಟಾವರಣಗಳ ನಂತರ ವ್ಯಕ್ತಿ ಅಳವಡಿಸಿಕೊಳ್ಳಬೇಕಾದ ತತ್ವಗಳೆಂದರೆ ಷಡಾಚಾರಗಳು ಮತ್ತು ಷಟಸ್ಥಲಗಳು.
ಷಡಾಚಾರಗಳು: ಬಸವಾಚಾರ, ಲಿಂಗಾಚಾರ, ಸದಾಚಾರ, ಶಿವಾಚಾರ, ಭೃತ್ಯಾಚಾರ ಮತ್ತು ಗಣಾಚಾರಗಳು.

ಇವುಗಳಲ್ಲಿ ಅನೇಕರು ಕೆಲವೇ ಕೆಲವು ಆಚಾರಗಳನ್ನು ಅಳವಡಿಸಿಕೊಂಡು ಇನ್ನುಳಿದವುಗಳನ್ನು ಕಡೆಗಣಿಸುತ್ತಾರೆ.
ಗುರು ಬಸವಣ್ಣನವರೇ ಆದಿ ಗುರು, ಲಿಂಗಾಯತ ಧರ್ಮ ಸಂಸ್ಥಾಪಕರೆಂದು ನಂಬಿ ಅವರ ಆದೇಶದಂತೆ ಜೀವಿಸುತ್ತ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ‘ಬಸವಾಚಾರ.’
“ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ! ಲಿಂಗದೇವನಲ್ಲದಿಲ್ಲೆಂದಿತ್ತು ವೇದ.” ಎನ್ನುವ ಗುರು ಬಸವಣ್ಣನವರ ವಚನದಂತೆ ದೇವರು ಒಬ್ಬನೇ ಮತ್ತು ಸರ್ವೋನ್ನತ ಶಕ್ತಿ ಎಂದು ನಂಬಿ, ಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗವೇ ದೇವರ ಸಾಕಾರ ರೂಪವೆಂದು ಪೂಜಿಸಿ ಅನ್ಯದೈವಕ್ಕೆರಗದಿಹುದೇ ‘ಲಿಂಗಾಚಾರ.’
ಕಾಯಕವೇ ಕೈಲಾಸ, ದಾಸೋಹವೇ ದೇವಧಾಮ ಎನ್ನುವ ಗುರು ಬಸವಣ್ಣನವರ ಸಂದೇಶವನ್ನು ನಂಬಿ; ಸತ್ಯ ಶುದ್ಧ ಕಾಯಕದಿಂದ ಜೀವನೋಪಾಯಕ್ಕಾಗಿ ಧನವನ್ನು ಸಂಪಾದಿಸಿ ಒಕ್ಕು(ಬಳಸಿ), ಮಿಕ್ಕ ಧನವನ್ನು ಸಮಾಜದ ಏಳಿಗೆಗಾಗಿ ಮತ್ತು ದಾಸೋಹಕ್ಕಾಗಿ ವಿನಿಯೋಗಿಸುವುದೇ ‘ಸದಾಚಾರ.’

ಮೊದಲು ಲಿಂಗವಂತರಾದವರು ನಂತರ ಲಿಂಗವಂತರಾದವರ ಜೊತೆ ಹೇಗೆ ನಡೆದುಕೊಳ್ಳಬೇಕೆನ್ನುವುದನ್ನು ಶಿವಾಚಾರ ತತ್ವ ಹೇಳುತ್ತದೆ.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಲಿಂಗದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ. ಎನ್ನುವ ಗುರು ಬಸವಣ್ಣನವರ ಸಂದೇಶವನ್ನು ಪಾಲಿಸುತ್ತ, ಇಷ್ಟಲಿಂಗ ದೀಕ್ಷೆ ಹೊಂದಿದವರನ್ನು ಸ್ವಧರ್ಮೀಯರೆಂದು ನಂಬಿ ಅವರನ್ನು ಧರ್ಮ ಬಂಧುಗಳೆಂದು ಪರಿಗಣಿಸಿ, ಅವರ ಮನೆಯಲ್ಲಿ ಉಣ್ಣುವ ಊಡುವ(ಉಣ್ಣಿಸುವ); ಕೊಡುವ ಕೊಳ್ಳುವ ವೈವಾಹಿಕ ಸಂಬಂಧಗಳನ್ನು ಮಾಡಿ ಪರಧರ್ಮೀಯರನ್ನು ಸ್ನೇಹಿತರಂತೆ ಕಾಣುವುದೇ ‘ಶಿವಾಚಾರ.’
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ; ಎನ್ನುವ ಗುರುಬಸವಣ್ಣನವರ ವಾಣಿಯನ್ನು ಪಾಲಿಸುತ್ತ, ವ್ಯಕ್ತಿಗಿಂತಲೂ ಸಮಷ್ಟಿ ಶ್ರೇಷ್ಠ ಎಂದು ಪರಿಗಣಿಸಿ, ಸಮಾಜದ ಹಿತಾಸಕ್ತಿಯನ್ನು ಕಾಪಾಡಲು ಸೇವೆ ಸಲ್ಲಿಸುವುದೇ ‘ಭೃತ್ಯಾಚಾರ.’
̇
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಲಿಂಗದೇವಾ, ಮರಣವೆ ಮಹಾನವಮಿ. ಎನ್ನುವ ಗುರು ಬಸವಣ್ಣನವರ ವಾಣಿಯಂತೆ ಅನ್ಯರಿಂದ ಧರ್ಮಕ್ಕೆ ಕುಂದು ಬಂದಾಗ ಅವರೊಡನೆ ಹೋರಾಡಿ ಧರ್ಮ ರಕ್ಷಣೆ ಮಾಡುವುದೇ ‘ಗಣಾಚಾರ.’ ಆದರೆ ಅನೇಕರು ಧರ್ಮಕ್ಕೆ ಕುಂದು ತರುವವರ ಜೊತೆ ಹೊಂದಿಕೊಂಡು ತನ್ನ ಧರ್ಮಕ್ಕೆ ಅನ್ಯಾಯ ಮಾಡುತ್ತಾರೆ. ಅನಿಷ್ಠಗಳು ಅಂತರಂಗದಲ್ಲೇ ಇರಲಿ ಬಹಿರಂಗದಲ್ಲೇ ಇರಲಿ ಅವುಗಳೊಡನೆ ಹೋರಾಡುವುದೇ ಗಣಾಚಾರ. ಈ ರೀತಿಯಾದ ಷಡಾಚಾರಗಳನ್ನು ಅಳವಡಿಸಿಕೊಂಡವರೆಲ್ಲಾ ಲಿಂಗಾಯತ ಧರ್ಮದ ಅನುಯಾಯಿಗಳು.
ಕುರಿಗಳು ಕಬ್ಬಿನ ಎಲೆ ತಿಂದು ತೃಪ್ತಿ ಹೊಂದಿ ಕಬ್ಬಿನ ಸ್ವಾದವನ್ನು ಅನುಭವಿಸದೇ ಹೋದಂತೆ ಅನೇಕರು, ಲಿಂಗವಂತ ಧರ್ಮದ ಮೇಲ್ನೋಟದ ಆಚರಣೆಗಳನ್ನಷ್ಟೆ ಅಳವಡಿಸಿಕೊಂಡು ಕಬ್ಬಿನ ಸ್ವಾದದಂತಿರುವ, ಏಕ ದೇವೋಪಾಸನೆ, ಇಷ್ಟಲಿಂಗಯೋಗ, ಷಡಾಚಾರದ ಎಲ್ಲಾ ತತ್ವಗಳನ್ನು ಅಳವಡಿಸಿಕೊಳ್ಲೂವುದಿಲ್ಲ. ಲಿಂಗಾಯತ ಧರ್ಮದ ಎಲ್ಲಾ ತತ್ವಗಳನ್ನು ಅಳವಡಿಸಿಕೊಳ್ಳುವವರು ಕರಿಗಳು ಕೆಲವೇ ಕೆಲವೇ ತತ್ವಗಳನ್ನು ಅಳವಡಿಸಿಕೊಂಡು ತಾನೂ ಲಿಂಗಾಯತ ಎಂದು ಬೀಗುವವರು ಕುರಿಗಳು.
ಗುರು ಬಸವಣ್ಣನವರು ಭಾಗಶಃ (ಅರ್ಧಂಬರ್ಧ) ಧರ್ಮವನ್ನು ಅಳವಡಿಸಿಕೊಂಡ ಕುರಿಗಳನ್ನು ಕಂಡು ಮೇಲಿನ ವಚನವನ್ನು ಹೇಳಿದ್ದಾರೆ.
ಈ ಮೇಲಿನ ವಚನವನ್ನು ಪೂಜ್ಯ ಶ್ರೀ ಲಿಂಗೈಕ್ಯ ಮಾತೆ ಮಾಹಾದೇವಿಯವರ ಜೀವನಕ್ಕೆ ಹೋಲಿಸಿ ನೋಡಿದಾಗ ಅವರ ವಿಚಾರಗಳನ್ನು ಅವರ ಹೃದಯಾತಂರಾಳವನ್ನು ಅರಿತವರು ಕೆಲವರೇ ಕೆಲವರು. ಅವರು ಗುರು ಬಸವಣ್ಣನವರ ತತ್ವಗಳ ಪಸರಿಸುತ್ತ ಬಸವ ಧರ್ಮದ ಪುನರುತ್ಥಾನದಲ್ಲಿ ತೊಡಗಿದಾಗ ಅವರೆಡೆಗೆ ಆಕರ್ಷಿತರಾಗಿ ಅನೇಕರು ಬಂದರು.
ಅದರಲ್ಲಿ ಕೆಲವರು ಅವರು ನೀಡಿದ ಪ್ರವಚನವನ್ನು ಸವಿದರು, ಕೆಲವರು ಅವರು ಕೊಟ್ಟ ಕಾವಿ ಬಟ್ಟೆ ಮೆಲಿದರು, ಕೆಲವರು ಅವರು ಕೊಟ್ಟ ಮಠ ಪೀಠಗಳನ್ನು ಮೆಲಿದರು. ಕೆಲವರು ಅವರ ಸಂಪರ್ಕಕ್ಕೆ ಬಂದು ಕೀರ್ತಿಯ ಎಲೆಗಳನ್ನು ಮೆಲಿದರು. ಅಧ್ಯಕ್ಷ ಪದವಿಯನ್ನು ಮೆಲಿದರು, ಕೆಲವರು ಅಧ್ಯಕ್ಷ ಪದವಿಯನ್ನು ಮೆಲಿದು ಬಾಯಿ ಕೊಯ್ಸಿಕೊಂಡು ಕಬ್ಬಿನ ತೋಟ ಸರಿಯಿಲ್ಲವೆದಂದು ಅದನ್ನು ನಾಶ ಮಾಡಿ ಕಳ್ಳಿಯ ಗಿಡಗಳನ್ನು ಬೆಳೆಸಲು ಪ್ರತಯತ್ನಿಸಿದರು. ಇವರೆಲ್ಲರು ಕುರಿಗಳಂತೆ ಹೊರಗಣ ಎಲೆಗಳನ್ನು ಮೆಲಿದವರೇ ವಿನಃ ಕರಿಗಳಾಗಲು ಸಾಧ್ಯವೇ?
ಕೆಲವೇ ಕೆಲವರು ಮಾತಾಜಿಯವರ ಹೃದಯಾಂತರಾಳವನ್ನು ಅರಿತುಕೊಂಡು, ಅವರು ಯಾವ ಧ್ಯೇಯ ಉದ್ದೇಶಗಳಿಗಾಗಿ ಬದುಕಿದರೋ ಅವುಗಳಿಗಾಗಿ ತಾವೂ ಬದುಕುತ್ತಿದ್ದಾರೆ, ಅವರೇ ಕರಿಗಳು. ಮಾತಾಜಿಯವರು ಸಂಶೋದಿಸಿದ ಲಿಂಗದೇವನೆಂಬ ಕಬ್ಬನ್ನು ಮೆಲಿದವರು, ಮೆಲಿದು ಆಸ್ವಾದಿಸಿದವರು ಕೆಲವೇ ಕೆಲವರು ಅವರೇ ಕರಿಗಳು. ಉಳಿದವರೆಲ್ಲ ಕುರಿಗಳು..!
ಅಂದು ಗುರು ಬಸವಣ್ಣನವರು ಲಿಂಗಾಯತ ಧರ್ಮವೆಂಬ ಸಿಹಿ ಕಬ್ಬನ್ನು ಕೊಟ್ಟರು. ಪೂರ್ವದಲ್ಲಿ ಬೇರೆ ಬೇರೆ ಜಾತಿಯವರಿದ್ದು ಲಿಂಗವಂತರಾದ ಇಬ್ಬರು ಸ್ವಧರ್ಮೀಯರಲ್ಲಿ ಮಾಡಿದ ವಿವಾಹವನ್ನು ಮುಂದು ಮಾಡಿ ಅದನ್ನು ಮೆಲಿಯಲಿಕ್ಕಾಗದೆ ಕೆಲವರು ಬೀದಿಯಲ್ಲಿ ನಿಂತು ಗುರು ಬಸವಣ್ಣವರು ಅಪಚಾರ ಮಾಡಿದ್ದಾರೆ ಎಂದು ಬೊಬ್ಬಿರಿದರು. ಗುರು ಬಸವಣ್ಣನವರು ಕಲ್ಯಾಣ ಬಿಟ್ಟು ಹೋಗಲು ಕಾರಣರಾದರು.
ಅದೇ ರೀತಿ ಇಂದು ಮಾತಾಜಿಯವರು ಲಿಂಗವಂತ ಧರ್ಮದ ಪುನರುತ್ಥಾನ ಕೈಗೊಂಡಾಗ, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ತಾತ್ವಿಕವಾಗಿ ಅಡ್ಡಗಾಲಾಗಿ ನಿಂತಿದ್ದು “ಕೂಡಲಸಂಗಮದೇವ” ವಚನಾಂಕಿತ ಮತ್ತು ಓಂ ನಮಃ ಶಿವಾಯ ಮಂತ್ರ. ನೀವು ಶಿವನ ಆರಾಧಕರು ಆದ್ದರಿಂದ ಲಿಂಗಾಯತರು ಹಿಂದೂಗಳು ಎಂದು ಎನ್ನುವ ಹಣೆಪಟ್ಟಿ ನೀಡಿದ್ದರಿಂದಲೇ ಮಾತಾಜಿಯವರು ಕೂಡಲ ಸಂಗಮದೇವ ವನ್ನು ಲಿಂಗದೇವ ಎಂದು ಮಾಡಿದ್ದಾರೆ ಓಂ ನಮಃ ಶಿವಾಯ ಶಿವ ಮಂತ್ರದ ಬದಲು ಓಂ ಲಿಂಗಾಯನಮಃ ಎನ್ನುವ ದೇವ ಮಂತ್ರವನ್ನು ನಮಗೆ ನೀಡಿದ್ದಾರೆ. ಇಂದಿಲ್ಲ ನಾಳೆ ಲಿಂಗದೇವ ಮತ್ತು ಓಂ ಲಿಂಗಾಯನಮಃ ಈ ಎರಡು ವಿಚಾರಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ.
ಈ ಎರಡು ತತ್ವಗಳನ್ನು ಮೆಲಿಯಲಿಕ್ಕೆ ಆಗದೇ ಇರುವ ಕುರಿಗಳು ಬೀದಿಯಲ್ಲಿ ನಿಂತು ಲಿಂಗದೇವ ತಪ್ಪು ಎಂದು ಸಾರಿ ಮಾತಾಜಿಯವರು ಲಿಂಗೈಕ್ಯರಾದಮೇಲೂ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು.
ಮಾತಾಜಿಯವರು ಯಾರನ್ನೂ ನಿಂದಿಸಿ ಅಥವಾ ಯಾರನ್ನೋ ಸಣ್ಣವರನ್ನಾಗಿ ಮಾಡಿ ತಾವು ದೊಡ್ಡವರಾಗಲಿಲ್ಲ. ಆದರೆ ಕೆಲವರು ಮಾತಾಜಿಯವರನ್ನೇ ನಿಂದಿಸಿ ತಾವು ದೊಡ್ಡವರಾಗಲು ಪ್ರಯತ್ನಿಸಿದ್ದಾರೆ. ತಾವು ಮಾಡುವ ತಪ್ಪನ್ನು ಮುಚ್ಚಿಕೊಳ್ಳಲು ಮಾತಾಜಿಯವರ ಹೆಸರಿನಲ್ಲಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಮಾತಾಜಿಯವರ ಅಭಿಮಾನಿಗಳಿಗೆ ವಂಚನೆ ಮಾಡುತ್ತಿದಾರೆ.
ಕೆಲವು ಕಾವಿಧಾರಿಗಳಿಗೆ ಯಾವ ಕಾಯಕವೂ ಇರುವುದಿಲ್ಲ ಅವರ ತಲೆ ಸದಾ ಕಾಲ ಭಕ್ತರಿಂದ ಹೇಗೆ ಹಣ ಪಡೆಯಬೇಕು ಎನ್ನುವುದನ್ನೇ ಯೋಚಿಸುತ್ತಿರುತ್ತದೆ ಅದೇ ರೀತಿ ಯೋಜನೆಗಳನ್ನೂ ರೂಪಿಸುತ್ತದೆ. ಭಕ್ತರು ಇಂಥವರ ಬಗ್ಗೆ ಎಚ್ಚರದಿಂದಿರಬೇಕು.
ಜಂಗಮನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ ಅಘವಣಿಯೆಂತೋ ಶಿವಾ ಶಿವಾ!!!
ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು.
ಗುರುವಿನ ಗುರು ಜಂಗಮ ಇಂತೆಂದುದು ಲಿಂಗದೇವನ ವಚನ.
ತನ್ನ ಗುರುವನ್ನೇ ಒಂದು ಕಡೆ ನಿಂದಿಸಿ ತಾನು ದೊಡ್ಡವರಾಗುವುದು ಮತ್ತೊಂದು ಅವರನ್ನು ಸ್ತುತಿ ಮಾಡಿ ದೊಡ್ಡವರಾಗುವುದು. ನಿಂದಿಸುವ ಪೂಜಿಸುವ ಪಾತಕವನ್ನು ಕೇಳಲಾಗದು ಎಂದು ಗುರು ಬಸವಣ್ಣನವರು ಹೇಳಿದ್ದಾರೆ. ತನ್ನ ಗುರುವನ್ನೇ ಗೌರವಿಸದವರು ಇತರರನ್ನೂ ಹೇಗೆ ಗೌರವಿಸಿಯಾರು?
*ಧರ್ಮ ಪ್ರಚಾರ ಹೇಗೆ ಮಾಡಬೇಕು? ಮಠಗಳನ್ನು ಹೇಗೆ ನೋಡಿಕೊಳ್ಳಬೇಕು? ಭಕ್ತರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು, ಜಂಗಮನೆಂದರೆ ಹೇಗಿರಬೇಕು, ಭಕ್ತ ಮತ್ತು ಜಂಗಮನ ಸಂಬಂಧ ಹೇಗಿರಬೇಕು, ಜಂಗಮ ಮತ್ತು ಜಂಗಮನ ಸಂಬಂಧ ಹೇಗಿರಬೇಕು? ಭಕ್ತರು ಕಾಣಿಕೆ ನೀಡಿದ ಹಣವನ್ನು ಯಾವ ರೀತಿ ಉಪಯೋಗಿಸಿಬೇಕು? ಎನ್ನುವುದನ್ನು ಮಾತಾಜಿ ಸ್ವತಃ ಆಚರಿಸಿ ತೋರಿದರೂ ಅವರ ಒಡನಾಡಿಗಳಾಗಿದ್ದ ಅನೇಕರು ಮಾತಾಜಿಯವರ ಅಂತರಂಗದ ಆಶಯದಂತೆ ನಡೆದುಕೊಳ್ಳದೆ ಕೇವಲ ಕುರಿಯು ಕಬ್ಬಿನ ಎಲೆ ಮೆಲಿದಂತೆ ಕೆಲವೇ ಕೆಲವು ಆಚಾರಗಳಾದ, ಕಾವಿಧರಿಸುವಿಕೆ, ಪಾದಪೂಜೆ ಮಾಡಿಸಿಕೊಳ್ಳುವಿಕೆ ಇಂತಹವುಗಳನ್ನು ಮಾಡಿ ಮಾತಾಜಿಯವರ ಅಂತರಂಗದಲ್ಲಿದ್ದ ಕಬ್ಬಿನ ಸವಿಯನ್ನು ಸವಿಯದೇ ಕುರಿಗಳಾಗಿಯೇ ಉಳಿದರು ಕರಿಗಳಾಗಲಿಲ್ಲ!!
ಪೂಜ್ಯ ಶ್ರೀ ಮಾತೆ ಮಹಾದೇವಿಯವರನ್ನು ಅವರ ವ್ಯಕ್ತಿತ್ವವನ್ನು, ಅವರ ಸಾಧನೆ ಮತ್ತು ಸಂಶೋಧನೆಗಳನ್ನು ಅರಿಯುವುದು ಕರಿಗಳಿಂದ ಸಾಧ್ಯವೇ ವಿನಃ ಕುರಿಗಳಿಂದಲ್ಲ…


ಆನೆಯೂ ಆ ದಾರಿಯಲ್ಲಿ ಹೋಯಿತ್ತೆಂದಡೆ,
ಆಡೂ ಆ ದಾರಿಯಲ್ಲಿ ಹೋಯಿತ್ತೆನ್ನಬಹುದೆ
ಸಂಗನ ಶರಣರಿಗೆ ಆನು ಸರಿಯೆಂದು ಗಳಹಬಹುದೆ
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ
ಹೇಳಾ, ಲಿಂಗದೇವಾ?


ಆನೆ ನಡೆದ ದಾರಿಯಲ್ಲಿ ರಸ್ತೆಯೇ ನಿರ್ಮಾಣವಾಗುತ್ತದೆ. ತನಗೆ ಅಡ್ಡ ಬಂದ ಗಿಡ ಗಂಟೆ ಮುಳ್ಳು ಕಲ್ಲುಗಳನ್ನು ಕಿತ್ತೆಸೆದು ಆನೆ ತನ್ನ ಪಥ ನಿರ್ಮಿಸಿಕೊಳ್ಳುತ್ತದೆ. ಬಸವ ಧರ್ಮದ ಮಾರ್ಗದಲ್ಲಿ ಹುಲ್ಲು, ಮುಳ್ಳಿನ ಗಿಡ ಗಂಟಿ, ಪೊದೆಗಳು ಬೆಳೆದುಕೊಂಡ ಸಂರ್ಭದಲ್ಲಿ ಪರಮ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಮತ್ತು ಪರಮ ಪೂಜ್ಯ ಮಾತೆ ಮಹಾದೇವಿ ಮಾತಾಜಿಯವರು ಆನೆಯಂತೆ ಮುನ್ನುಗ್ಗಿ ಸುಂದರವಾದ ಪಥವನ್ನು ನಿರ್ಮಿಸಿಕೊಟ್ಟಿದ್ದಾರೆ. ಆಡುಗಳು, ಕುರಿಗಳು ಆ ಆನೆಗಳು ನಡೆದ ಮಾರ್ಗದಲ್ಲಿ ನಡೆದರೂ ಸಾಕಿತ್ತು ಆನೆಯಷ್ಟು ಗೌರವ ಸಿಗುತ್ತಿತ್ತು.
ಆದರೆ ಕೆಲವು ಕುರಿಗಳು ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು. ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆಯ ಹೋಯಿತ್ತು ಎನ್ನುವಂತೆ ಕೀರ್ತಿಯ, ಮೆರವಣಿಗೆಯ, ಸರ್ವಾಧ್ಯಕ್ಷತೆಯ, ಬಿರುದು ಸನ್ಮಾನಗಳ, ಪ್ರಶಂಸೆ ಪ್ರ ಶಸ್ತಿಗಳ ತಳಿರು ಮೇಯಲು ಆನೆಗಳು ನಡೆದ ದಾರಿ ಬಿಟ್ಟು ಅಡ್ಡದಾರಿಯಲ್ಲಿ ನಡೆದಿವೆ. ಹರಕೆಯ ಕುರಿಯಾದಾಗ ಮಾತ್ರ ಅರಿವಿಗೆ ಗುರುವಿನ ಮಾರ್ಗದಲ್ಲೇ ನಡೆಯಬೇಕಿತ್ತು ತಳಿರು ಮೇಯಬಾರದಿತ್ತು ಎನ್ನುವ ಅರಿವು ಬರುತ್ತದೆ ಆದರೆ ಅಷ್ಟೊತ್ತಿಗೆ ತಪ್ಪಿಸಿಕೊಳ್ಳಲು ಸಮಯವಿರುವುದಿಲ್ಲ. ಕುರಿಗಳನ್ನು ವಧೆಯಿಂದ ಕಾಪಾಡುವ ಶಕ್ತಿಯಂತೂ ನಮ್ಮಲಿಲ್ಲ ಕುರಿಗಳ ಹಣೆಬರಹವೇ ಇಷ್ಟೇ ಎಂದು ನಾವು ಕನಿಕರ ಹೊಂದಬೇಕಷ್ಟೆ.
ಅಡ್ಡದಾರಿ ಹಿಡಿದಿರುವ ಕುರಿಯ ಹಿಂಡಿನಲ್ಲಿರುವುದಕ್ಕಿಂತ ಒಂಟಿ ಸಲಗವಾಗಿ ಮಾತಾಜಿಯವರ ಹೃನ್ಮನವನರಿವ ಮದಕರಿಯಾಗಿ ಬಾಳುವುದೇ ಲೇಸು..


-ಸಚ್ಚಿದಾನಂದ ಪ್ರಭು ಚಟ್ನಳ್ಳಿ

About Mallikarjun

Check Also

ಲಯನ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿಅಂತ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

National Democracy Day celebration in the premises of Lions Educational Institution ಗಂಗಾವತಿ: ವಿಕಲಚೇತನರ ಹಾಗೂ ಹಿರಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.