ಸಂವಿಧಾನದ ಜಾಗೃತಿಗಾಗಿ ಸಂಕಲ್ಪ ವಿದ್ಯಾರ್ಥಿನಿಯರ ಬೃಹತ್ ಜಾಥಾ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
ಜಾಹೀರಾತು
The tradition of adorning children with flower garlands during the Gauri Purnima festival.

ಸಂವಿಧಾನದ ಜಾಗೃತಿಗಾಗಿ ಸಂಕಲ್ಪ ವಿದ್ಯಾರ್ಥಿನಿಯರ ಬೃಹತ್ ಜಾಥಾ

ಜಾಹೀರಾತು

ಗಂಗಾವತಿಯಲ್ಲಿ ಸಂವಿಧಾನ ದಿನಾಚರಣೆ ಸಂಭ್ರಮ; ಹಕ್ಕು ಮತ್ತು ಕರ್ತವ್ಯಗಳ ಅರಿವು ಮೂಡಿಸಿದ ವಿದ್ಯಾರ್ಥಿನಿಯರು

ಗಂಗಾವತಿ, ನ. 26: ಸಂವಿಧಾನದ ಆಶಯಗಳು, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗಂಗಾವತಿಯಲ್ಲಿ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಬೃಹತ್ ಜಾಗೃತಿ ಜಾಥಾ ನಡೆಯಿತು.
ಸಂಕಲ್ಪ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್‌ಎಸ್‌ಎಸ್‌ ಎ ಮತ್ತು ಬಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಜಾಥಾದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ಪಾಟೀಲ್ ಹಾಗೂ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರೋಶಿನಿ ಪಾಟೀಲ್ ಅವರು ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರು, ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆಯೂ ಪ್ರತಿಯೊಬ್ಬ ನಾಗರಿಕರು ಅರಿವು ಹೊಂದಿರಬೇಕು. ವಿಶೇಷವಾಗಿ ಮಹಿಳೆಯರು ಸಂವಿಧಾನದ ಆಶಯಗಳು ಹಾಗೂ ಕಾನೂನುಬದ್ಧ ಹಕ್ಕುಗಳನ್ನು ತಿಳಿದುಕೊಂಡಾಗ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ನಾಗರಾಜ್ ಗುತ್ತೇದಾರ್ ಮಾತನಾಡಿ, ಸಂವಿಧಾನ ಕೇವಲ ಪುಸ್ತಕವಲ್ಲ, ಅದು ಭಾರತೀಯರ ಬದುಕಿಗೆ ದಾರಿದೀಪವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಸಂವಿಧಾನವನ್ನು ಓದಿ, ಅದರ ಮೌಲ್ಯಗಳನ್ನು ಅರಿತು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಮಂಜುಸ್ವಾಮಿ ಮಾತನಾಡಿ, ಮಹಿಳೆಯರಿಗೆ ಸಂವಿಧಾನ ನೀಡಿರುವ ಸಮಾನ ಹಕ್ಕುಗಳ ಬಗ್ಗೆ ಅರಿವು ಮೂಡಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಸಂವಿಧಾನದ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಮಹಿಳಾ ಮಹಾವಿದ್ಯಾಲಯದ ನಿರ್ದೇಶಕ ಡಾ. ಅಮಿತ್‌ಕುಮಾರ್ ರೆಡ್ಡಿ ಮಾತನಾಡಿ, ಸಂವಿಧಾನದ ಆಶಯಗಳು ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿವೆ. ವಿದ್ಯಾರ್ಥಿನಿಯರು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜವಾಬ್ದಾರಿಯುತ ಹಾಗೂ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.
ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಕೇಸರಹಟ್ಟಿ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಬಸವರಾಜ ಶಿರಿಗೇರಿ ಮಾತನಾಡಿ, ಮನುಷ್ಯನ ಬದುಕಿಗೆ ಮೂಲಭೂತ ಅವಶ್ಯಕತೆಗಳು ಎಷ್ಟು ಮುಖ್ಯವೋ, ಸಮಾಜದ ಬೆಳವಣಿಗೆ ಹಾಗೂ ಸುಸಂಸ್ಕೃತ ಬದುಕಿಗೆ ಸಂವಿಧಾನವೂ ಅಷ್ಟೇ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಿ, ಕಾನೂನಿನ ಚೌಕಟ್ಟಿನಲ್ಲಿ ಬದುಕನ್ನು ರೂಪಿಸಿಕೊಳ್ಳುವ ಮೂಲಕ ದೇಶವನ್ನು ವಿಶ್ವದಲ್ಲೇ ಮಾದರಿ ರಾಷ್ಟ್ರವನ್ನಾಗಿ ಮಾಡಲು ಕೈಜೋಡಿಸಬೇಕು ಎಂದು ತಿಳಿಸಿದರು.
ಸಂವಿಧಾನದ ಆಶಯ ಸಾರಿದ ಜಾಥಾ
ಜಾಥಾದ ಸಂದರ್ಭದಲ್ಲಿ ನಗರದ ವಿವಿಧ ವೃತ್ತಗಳಲ್ಲಿರುವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಮಾಜಿಕ ಸಮನ್ವಯತೆಯ ಸಂದೇಶ ಸಾರಲಾಯಿತು.
ಜಾಥಾದಲ್ಲಿ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಸಾಲೇಹ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಛದ್ಮವೇಷ, ವಿಜಯಲಕ್ಷ್ಮಿ ಅವರು ಕನ್ನಡಾಂಬೆಯ ಛದ್ಮವೇಷ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಮಾನಸ ಅವರು ಭಾರತಾಂಬೆಯ ಛದ್ಮವೇಷ ಧರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ವಿದ್ಯಾರ್ಥಿನಿಯರು ಸಂವಿಧಾನದ ಪೀಠಿಕೆ, ಸಮಾನತೆ, ಸ್ವಾತಂತ್ರ್ಯ ಹಾಗೂ ನ್ಯಾಯದ ಆಶಯಗಳನ್ನು ಸಾರುವ ಫಲಕಗಳನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಸಂವಿಧಾನದ ಮಹತ್ವವನ್ನು ಸಾರುವ ಘೋಷಣೆಗಳ ಮೂಲಕ ನಾಗರಿಕರಲ್ಲಿ ಹಕ್ಕು ಮತ್ತು ಕರ್ತವ್ಯಗಳ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಜಾಥಾದಲ್ಲಿ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳಾದ ಶಿವಶರಣಪ್ಪ, ರಮೇಶ್, ಆಶಾ, ನಾಗರಾಜ ಎಚ್., ಬಸನಗೌಡ, ವಿಶ್ವನಾಥ, ಅಶೋಕ ಎಚ್.ಎಂ., ಬಸವರಾಜ ವೈ., ಸುರೇಶ್ ಬಿ., ರಾಹುಲ್, ಶಂಕರ್, ಮೇಘ, ಶರಣಮ್ಮ, ಸುಜಾತ, ಮುಸ್ಕಾನ್ ಎಸ್., ಮುಸ್ಕಾನ್ ಯು. ಸೇರಿದಂತೆ ಪದವಿ ಹಾಗೂ ಪದವಿಪೂರ್ವ ವಿಭಾಗದ ಅಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸಂವಿಧಾನದ ಮೌಲ್ಯಗಳನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ನಿಷ್ಠೆಯಿಂದ ಪಾಲಿಸಬೇಕು ಎಂಬ ಸಂದೇಶದೊಂದಿಗೆ ಜಾಗೃತಿ ಜಾಥಾ ಯಶಸ್ವಿಯಾಗಿ ನೆರವೇರಿತು.

Total Views: 0
Share This Article
Leave a Comment