
Government should immediately respond to journalists’ issues: G.M. Rajashekhar urges
ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಲಿ: ಜಿ.ಎಂ. ರಾಜಶೇಖರ್ ಒತ್ತಾಯ
ಬೆಳಗಾವಿ: ರಾಜ್ಯದಾದ್ಯಂತ ಪತ್ರಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಅರ್ಹ ಪತ್ರಕರ್ತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ, ಅವರ ಬದುಕನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ.ಎಂ. ರಾಜಶೇಖರ್ ಒತ್ತಾಯಿಸಿದರು.
ಸೋಮವಾರ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪತ್ರಕರ್ತರ ಬದುಕನ್ನು ಸಹನೀಯಗೊಳಿಸುವ ಜವಾಬ್ದಾರಿ ಸರ್ಕಾರ, ಸಮಾಜ ಹಾಗೂ ಪತ್ರಕರ್ತರ ಸಂಘಟನೆಗಳ ಮೇಲಿದೆ. ಈ ನಿಟ್ಟಿನಲ್ಲಿ ನಗರ-ಗ್ರಾಮೀಣ ಎಂಬ ಭೇದವಿಲ್ಲದೆ ರಾಜ್ಯದ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳ ಪರಿಹಾರಕ್ಕೆ ಸಂಘ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪತ್ರಕರ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು, ಅವರ ಹಕ್ಕುಗಳು ಹಾಗೂ ವೃತ್ತಿಪರ ಹೊಣೆಗಾರಿಕೆಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ಸಂಘವು ಅಧಿಕೃತವಾಗಿ ನೋಂದಣಿಯಾಗಿದ್ದು, ಸಚಿವರು ಹಾಗೂ ವಿವಿಧ ಗಣ್ಯರ ಸಮ್ಮುಖದಲ್ಲಿ ರಾಜ್ಯಮಟ್ಟದಲ್ಲಿ ಉದ್ಘಾಟನೆಗೊಂಡಿದೆ. ಪ್ರಸ್ತುತ ರಾಜ್ಯದ 28 ಜಿಲ್ಲೆಗಳಲ್ಲಿ ಸುಮಾರು 3,000 ಸದಸ್ಯರನ್ನು ಹೊಂದುವ ಮೂಲಕ ಸಂಘಟನೆ ಬಲವಾಗಿ ಬೆಳೆಯುತ್ತಿದೆ ಎಂದರು.
ಸರ್ಕಾರದ ಪತ್ರಕರ್ತರ ಸೌಲಭ್ಯಗಳಿಗೆ ಸಂಬಂಧಿಸಿದ ನಿಯಮಗಳು ಕಠಿಣವಾಗಿರುವುದರಿಂದ ಅನೇಕ ಅರ್ಹ ಪತ್ರಕರ್ತರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ. ಪತ್ರಕರ್ತರಿಗೆ ಸರಳ ನಿಯಮಗಳ ಮೂಲಕ ಸರ್ಕಾರಿ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.
ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯ ಭದ್ರತೆಗಾಗಿ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದು, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಸಂಘದ ಪ್ರಮುಖ ಆದ್ಯತೆಯಾಗಿದೆ. ಕ್ರಿಯಾಶೀಲ ವರದಿಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಿಂದ ಒಬ್ಬ ಪತ್ರಕರ್ತರನ್ನು ಆಯ್ಕೆ ಮಾಡಿ ತಲಾ ₹10 ಸಾವಿರ ನಗದು ಬಹುಮಾನ ನೀಡಿ ರಾಜ್ಯಮಟ್ಟದಲ್ಲಿ ಗೌರವಿಸುವ ಯೋಜನೆಯನ್ನೂ ರೂಪಿಸಲಾಗಿದೆ.
ನಿವೇಶನ ಹಾಗೂ ವಸತಿ ರಹಿತ ಪತ್ರಕರ್ತರಿಗೆ ಸರ್ಕಾರಿ ವಸತಿ ಯೋಜನೆಗಳಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು. ಪತ್ರಕರ್ತರ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ನೆರವಾಗಲು ಕ್ಷೇಮ ನಿಧಿ ಸ್ಥಾಪನೆ, ತುರ್ತು ಸಂದರ್ಭಗಳಲ್ಲಿ ರಕ್ತದಾನಕ್ಕೆ ಅನುಕೂಲವಾಗುವಂತೆ ರಕ್ತ ನಿಧಿ ವ್ಯವಸ್ಥೆ ರೂಪಿಸುವ ಉದ್ದೇಶವಿದೆ.
ಇದರೊಂದಿಗೆ ಪತ್ರಕರ್ತರ ಜ್ಞಾನವೃದ್ಧಿಗಾಗಿ ಅಧ್ಯಯನ ಪ್ರವಾಸ, ತರಬೇತಿ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು. ಪತ್ರಕರ್ತರಲ್ಲಿ ಸಾಮಾಜಿಕ ಕಾಳಜಿ ಬೆಳೆಸುವ ಉದ್ದೇಶದಿಂದ ನೇತ್ರದಾನ ನೋಂದಣಿ ಅಭಿಯಾನ ಮತ್ತು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಆಯಾ ಪ್ರದೇಶದ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೂ ಸಂಘಟನೆ ಮುಂದಾಗಲಿದೆ ಎಂದು ತಿಳಿಸಿದರು.
ಪತ್ರಕರ್ತರ ವೃತ್ತಿ ಗೌರವ, ಸಾಮಾಜಿಕ ಭದ್ರತೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಪ್ರಯತ್ನ ಅಗತ್ಯವಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರು ಸಂಘದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಕಾರ್ಯದರ್ಶಿ ಎಂ.ಸಿ. ಮಂಜುನಾಥ್, ತಾಲೂಕಾಧ್ಯಕ್ಷ ವೀರನಗೌಡ ಶೀಲವಂತರ, ಗೌರವಾಧ್ಯಕ್ಷ ಉಮೇಶ ಹಿರೇಮಠ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಸವರಾಜ ತುಬಾಕಿ, ರೈತ ಘಟಕದ ಆಯಿಷಾ ಶೇಖ್, ರಾಜ್ಯ ನಗರ ಉಪಾಧ್ಯಕ್ಷ ಕುಮಾರ ಬೊರಕ್ಕನವರ, ಗ್ರಾಮೀಣ ಉಪಾಧ್ಯಕ್ಷ ಸೋಮಲಿಂಗಪ್ಪ ಭೋವಿ, ಫಿರೋಜ್ ಖಾದ್ರಿ, ಬಸವರಾಜ ಶಿರಸಂಗಿ, ಈರಣ್ಣ ಹೂಲ್ಲೂರ, ಮಹಾಂತೇಶ ಹಿರೇಮಠ ಸೇರಿದಂತೆ ಹಲವು ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.


