
Statement against the Constitution: Demand to register a sedition case against Kaneri Swami
ಸಂವಿಧಾನದ ವಿರುದ್ಧ ಹೇಳಿಕೆ: ಕನೇರಿ ಸ್ವಾಮಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಏಳು ದಿನಗಳಲ್ಲಿ ಬಹಿರಂಗ ಕ್ಷಮೆಯಾಚನೆಗೆ ಗಡುವು; ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ
ಬೀದರ್: ಭಾರತದ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳಿಕೆ ನೀಡಿರುವ ಕನೇರಿ ಕಾಡಸಿದ್ಧೇಶ್ವರ ಮಠದ ಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನುಸ್ಮೃತಿಯಲ್ಲಿ ಶೂದ್ರರು ಹಾಗೂ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿಲ್ಲ. ಜಾತೀಯತೆ ಮತ್ತು ಅಸಮಾನತೆಯನ್ನು ಪ್ರತಿಪಾದಿಸುವ ಇಂತಹ ಗ್ರಂಥದ ಅಂಶಗಳು ಭಾರತದ ಸಂವಿಧಾನದಲ್ಲಿವೆ ಎನ್ನುವುದು ಆಧಾರರಹಿತ ಹೇಳಿಕೆಯಾಗಿದೆ ಎಂದು ಆಕ್ಷೇಪಿಸಿದರು.
1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದ್ದರು. ಅಂಬೇಡ್ಕರ್ ಅವರೇ ವಿರೋಧಿಸಿದ್ದ ಗ್ರಂಥದ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ ಎಂದು ಹೇಳುವುದು ಎಷ್ಟು ಸಮಂಜಸ? ಕನೇರಿ ಸ್ವಾಮಿ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಹಿರಿಯ ದಲಿತ ಮುಖಂಡ ಶಂಕರರಾವ್ ದೊಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಮನುವಾದಿ ಸಿದ್ಧಾಂತಗಳಿಗೆ ಬೆಂಬಲವಾಗಿ ನಿಂತಿರುವ ಕನೇರಿ ಸ್ವಾಮಿ ಈ ಹಿಂದೆ ವಚನಗಳನ್ನು ತಿರುಚಿ ವ್ಯಾಖ್ಯಾನಿಸುವ ಕೆಲಸ ಮಾಡಿದ್ದಾರೆ. ಇದೀಗ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಜನರ ನಡುವೆ ದ್ವೇಷ ಬಿತ್ತುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದರು.
ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳುವ ಮೂಲಕ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳನ್ನು ಅವಹೇಳನ ಮಾಡುವುದರ ಜತೆಗೆ ಸಂವಿಧಾನದ ಘನತೆಗೆ ಧಕ್ಕೆ ತರುವ ಹೇಳಿಕೆಗಳನ್ನು ತಕ್ಷಣ ನಿಲ್ಲಿಸಬೇಕು. ರಾಜ್ಯ ಸರ್ಕಾರ ಕನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಚಿಂತಕ ಮಹೇಶ ಗೋರನಾಳಕರ್ ಮಾತನಾಡಿ, ಮನುಸ್ಮೃತಿಯಲ್ಲಿ ಮೌಢ್ಯ, ಜಾತೀಯತೆ ಮತ್ತು ಅಸಮಾನತೆಯ ಅಂಶಗಳಿದ್ದರೆ, ಭಾರತದ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಉದಾತ್ತ ಆಶಯಗಳನ್ನು ಹೊಂದಿದೆ. ಇಂತಹ ಶ್ರೇಷ್ಠ ಸಂವಿಧಾನದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕನೇರಿ ಸ್ವಾಮಿ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಶರಣರ ವಚನಗಳನ್ನು ತಿರುಚಿ, ಬಸವಣ್ಣನವರ ಅನುಯಾಯಿಗಳನ್ನು ಹೀಯಾಳಿಸಿರುವ ಕನೇರಿ ಸ್ವಾಮಿ ಇದೀಗ ಅಂಬೇಡ್ಕರ್ ಹಾಗೂ ಸಂವಿಧಾನದ ಅನುಯಾಯಿಗಳ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ದ್ವೇಷಭಾವನೆ ಮೂಡಿಸುವ ಹೇಳಿಕೆ ನೀಡಿರುವ ಅವರು ಏಳು ದಿನಗಳೊಳಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ದೇಶದ ಅಂಬೇಡ್ಕರ್ವಾದಿಗಳು ಹಾಗೂ ಸಂವಿಧಾನ ಪ್ರೇಮಿಗಳು ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸುವುದರ ಜತೆಗೆ ಘೇರಾವ್ ಹಾಕಲಿದ್ದಾರೆ ಎಂದು ಎಚ್ಚರಿಸಿದರು.
ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ್ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯನ್ನು ವಿರೋಧಿಸಿ ಈ ಹಿಂದೆ ಲಿಂಗಾಯತ ಮಠಾಧೀಶರು ಹಾಗೂ ಅನುಯಾಯಿಗಳನ್ನು ಅವಹೇಳನ ಮಾಡಿದ್ದ ಕನೇರಿ ಸ್ವಾಮಿ, ಇದೀಗ ಭಾರತದ ಸಂವಿಧಾನದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ ಎಂದರು.
ಸಂವಿಧಾನ ರಚನೆಗೂ ಮುನ್ನವೇ ಮನುಸ್ಮೃತಿಯನ್ನು ದಹಿಸಿದ್ದ ಬಾಬಾಸಾಹೇಬ ಅಂಬೇಡ್ಕರ್ ಅವರು, ಸಂವಿಧಾನದಲ್ಲಿ ಅದರ ಅಂಶಗಳನ್ನು ಸೇರಿಸಲು ಹೇಗೆ ಸಾಧ್ಯ? ಜನರಲ್ಲಿ ಭೇದಭಾವ ಮತ್ತು ದ್ವೇಷದ ಭಾವನೆಗಳನ್ನು ಪ್ರಚೋದಿಸುವ ಇಂತಹ ಹೇಳಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕನೇರಿ ಸ್ವಾಮಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಹಾಗೂ ಇಂತಹ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಚಿಂತಕರಾದ ರಾಜಕುಮಾರ ಪಾಟೀಲ್ ಹಾಗೂ ಪ್ರಕಾಶ ರಾವಣ ಉಪಸ್ಥಿತರಿದ್ದು, ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕನೇರಿ ಮಠದ ಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.



