
Installation of the new idol of the Goddess Kariyamma in Kesarahatti.

ಮಾನವ ದೇವಮಾನವನಾಗಲು ಅಷ್ಟಾವರಣಗಳ ಅರಿವು ಅತ್ಯವಶ್ಯಕ: ಶರಣ ಬಸವನಗೌಡ ಪೊಲೀಸ್ ಪಾಟೀಲ್

ವನಜಭಾವಿಯಲ್ಲಿ 8ನೇ ವಾರದ ವಚನ ಪ್ರಾರ್ಥನೆ, 2ನೇ ಮಾಸಿಕ ಶಿವಾನುಭವ ಹಾಗೂ ಚೆನ್ನಬಸವಣ್ಣ ಜಯಂತಿ ಆಚರಣೆ
ಯಲಬುರ್ಗಾ: ತಾಲೂಕಿನ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ 8ನೇ ವಾರದ ವಚನ ಪ್ರಾರ್ಥನೆ, 2ನೇ ಮಾಸಿಕ ಶಿವಾನುಭವ ಹಾಗೂ ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಹೂಗಾರ, ಶಿವಚಿಂತನೆ ಮತ್ತು ಶಿವಜ್ಞಾನ ನಮ್ಮ ಮನದಲ್ಲಿ ನೆಲೆಗೊಳ್ಳಬೇಕಾದರೆ ಶ್ರೇಷ್ಠ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ. ಮನುಷ್ಯ ಆಧ್ಯಾತ್ಮಿಕ ಪಥದಲ್ಲಿ ಸಾಗಲು ಶರಣರು ಬೋಧಿಸಿರುವ ಅಷ್ಟಾವರಣಗಳು ಜೀವನಕ್ಕೆ ರಕ್ಷಾಕವಚಗಳಿದ್ದಂತೆ ಎಂದರು.
ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರಗಳೆಂಬ ಅಷ್ಟಾವರಣಗಳಲ್ಲಿ ಗುರುವಿಗೆ ಮೊದಲ ಸ್ಥಾನವಿದೆ. ಜೀವನದಲ್ಲಿ ಎದುರಾಗುವ ಅಡ್ಡಿ-ಆತಂಕಗಳು, ಎಡರು-ತೊಡರುಗಳು ಹಾಗೂ ದುಶ್ಚಟ, ದುರ್ನಡತೆಗಳಿಂದ ಮುಕ್ತರಾಗಿ ಸನ್ಮಾರ್ಗದಲ್ಲಿ ನಡೆಯಲು ಲಿಂಗಾಯತ ಧರ್ಮ ಅಷ್ಟಾವರಣಗಳ ಮಹತ್ವವನ್ನು ತಿಳಿಸಿದೆ. ಮಾನವ ದೇವಮಾನವನಾಗಲು ಅಷ್ಟಾವರಣಗಳ ಅರಿವು ಮತ್ತು ಆಚರಣೆ ಮುಖ್ಯ ಎಂದು ಹೇಳಿದರು.
ಶರಣ ಅಮರೇಶಪ್ಪ ಗಡಿಹಳ್ಳಿ (ಸೋಮಸಾಗರ) ಮಾತನಾಡಿ, ಶಿಷ್ಯನ ಅಜ್ಞಾನವನ್ನು ನಿವಾರಿಸಿ ಜ್ಞಾನದ ಕಣ್ಣು ತೆರೆಸುವವನೇ ನಿಜವಾದ ಗುರು. ಶಿಷ್ಯನನ್ನು ಸುಜ್ಞಾನಿಯನ್ನಾಗಿಸಿ ಶಿವಪಥದತ್ತ ಮುನ್ನಡೆಸುವ ಜವಾಬ್ದಾರಿ ಗುರುವಿನ ಮೇಲಿದೆ ಎಂದರು.
ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಅವರು,
“ಮಡಿಕೆಯ ಮಾಡುವಡೆ ಮಣ್ಣೆ ಮೊದಲು, ತೊಡಿಗೆಯ ಮಾಡುವಡೆ ಹೊನ್ನೇ ಮೊದಲು, ಶಿವಪಥವನ್ನರಿವಡೆ ಗುರುಪಥವೇ ಮೊದಲು, ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು”
ಎಂಬ ವಚನದ ಮೂಲಕ ಶಿವಪಥವನ್ನು ಅರಿಯಲು ಗುರುಪಥವೇ ಮೊದಲ ಮೆಟ್ಟಿಲು ಎಂಬುದನ್ನು ಬಸವಣ್ಣನವರು ಮನಗಾಣಿಸಿದ್ದಾರೆ ಎಂದು ವಿವರಿಸಿದರು.
ಮರಕಟ್ ಬಸವ ಕೇಂದ್ರದ ಅಧ್ಯಕ್ಷ ಶರಣ ಅಮರೇಶಪ್ಪ ಬಳ್ಳಾರಿ ಮಾತನಾಡಿ, ಅಜ್ಞಾನವನ್ನು ನಿವಾರಿಸಿ ಸುಜ್ಞಾನವನ್ನು ಕರುಣಿಸುವವನೇ ಗುರು. ಲಿಂಗಾಯತ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಶ್ರೇಷ್ಠ ಗುರುವಿನಿಂದ ಲಿಂಗದೀಕ್ಷೆ ಪಡೆದು, ಲಿಂಗಾಂಗ ಸಾಮರಸ್ಯದ ತತ್ವದೊಂದಿಗೆ ಸತ್ಯಶುದ್ಧ ಕಾಯಕ ನಡೆಸಿ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ, ನಿವೃತ್ತ ಪಿಎಸ್ಐ ಶರಣ ಬಸವನಗೌಡ ಪೊಲೀಸ್ ಪಾಟೀಲ್ (ಶರಣ ಗ್ರಾಮ ಗುಳೆ) ಮಾತನಾಡಿ, ಲಿಂಗಾಯತ ಧರ್ಮದಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗುರುವಿನ ಮೂಲಕ ಶಿಷ್ಯನಿಗೆ ಇಷ್ಟಲಿಂಗ ದೀಕ್ಷೆ ದೊರೆಯುತ್ತದೆ. ಆದರೆ ಯಾರನ್ನೂ ಬೇಕಾದರೂ ಗುರು ಎಂದು ಸ್ವೀಕರಿಸಬಾರದು. ಸುಜ್ಞಾನಿ ಮತ್ತು ಅರ್ಹ ಗುರುವಿನಿಂದಲೇ ದೀಕ್ಷೆ ಪಡೆಯಬೇಕು ಎಂಬ ಎಚ್ಚರಿಕೆಯನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದರು.
ಅಜ್ಞಾನಿಯನ್ನೇ ಗುರುವಾಗಿ ಸ್ವೀಕರಿಸಿದರೆ ಗುರು ಮತ್ತು ಶಿಷ್ಯ ಇಬ್ಬರೂ ಭ್ರಷ್ಟರಾಗುವ ಅಪಾಯವಿದೆ. ಅಯೋಗ್ಯನಿಗೆ ಅಧಿಕಾರ ನೀಡಿದರೆ ಅನಾಹುತ ಸಂಭವಿಸುವಂತೆ, ಅರ್ಹತೆಯಿಲ್ಲದ ಗುರುವಿನಿಂದ ದೀಕ್ಷೆ ಪಡೆದರೆ ಆಧ್ಯಾತ್ಮಿಕ ಜೀವನದ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ ಗುರು ಯೋಗ್ಯ ಶಿಷ್ಯನಿಗೆ ದೀಕ್ಷೆ ನೀಡಬೇಕು; ಶಿಷ್ಯನೂ ಅರ್ಹ ಗುರುವಿನಿಂದಲೇ ದೀಕ್ಷೆ ಪಡೆಯಬೇಕು ಎಂದು ತಿಳಿಸಿದರು.
ದೀಕ್ಷೆಯ ಮೂರು ವಿಧಗಳನ್ನು ವಿವರಿಸಿದ ಅವರು, ವೇದ ದೀಕ್ಷೆ, ಕ್ರಿಯಾ ದೀಕ್ಷೆ ಮತ್ತು ಮಂತ್ರ ದೀಕ್ಷೆಗಳೆಂಬ ಮೂರು ಹಂತಗಳಿವೆ. ಧರ್ಮ, ಇಷ್ಟಲಿಂಗ ಪೂಜೆ, ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲಗಳ ಕುರಿತು ಶಿಷ್ಯನಿಗೆ ಸಮಗ್ರ ಅರಿವು ಮೂಡಿಸುವುದು ವೇದ ದೀಕ್ಷೆ. ಗುರುವಿನ ಜ್ಞಾನಾನುಗ್ರಹದ ಮೂಲಕ ಶಿಷ್ಯನ ಅಂತರಂಗದಲ್ಲಿ ಇಷ್ಟಲಿಂಗದ ಅರಿವನ್ನು ಮೂಡಿಸಿ ಅಂಗೈಯಲ್ಲಿ ಇಷ್ಟಲಿಂಗ ಕರುಣಿಸುವುದು ಕ್ರಿಯಾ ದೀಕ್ಷೆ. ಇಷ್ಟಲಿಂಗದ ಅನುಸಂಧಾನದ ಸಂದರ್ಭದಲ್ಲಿ ‘ಓಂ ನಮಃ ಶಿವಾಯ’ ಷಡಕ್ಷರಿ ಮಂತ್ರವನ್ನು ಜಪಿಸುವ ವಿಧಾನವನ್ನು ತಿಳಿಸಿಕೊಡುವುದು ಮಂತ್ರ ದೀಕ್ಷೆಯಾಗಿದೆ ಎಂದು ವಿವರಿಸಿದರು.
ಪ್ರತಿಯೊಬ್ಬರೂ ಶ್ರೇಷ್ಠ ಗುರುವಿನಿಂದ ಲಿಂಗದೀಕ್ಷೆ ಪಡೆದು, ಗುರುವಿನ ಮಾರ್ಗದರ್ಶನದಲ್ಲಿ ಲಿಂಗಾಂಗ ಸಾಮರಸ್ಯದ ತತ್ವದಂತೆ ಬದುಕಿದಾಗ ಮಾತ್ರ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹನುಮಂತಪ್ಪ ಹುಣಸಿಹಾಳ್ ಮರಕಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭದಲ್ಲಿ ವನಜಭಾವಿ ಗ್ರಾಮದ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ದೇವಪ್ಪ ಕೋಳೂರು ಅವರು ಭಾಗವಹಿಸಿದ ಶರಣರಿಗೆ ದಾಸೋಹ ಸೇವೆ ಸಲ್ಲಿಸಿದರು.
ನಾಗನಗೌಡ ಜಾಲಿಹಾಳ, ರೇವಣಪ್ಪ, ಮಾತ್ರ ಗಿರಿಮಲ್ಲಪ್ಪ, ಪರಂಗಿ ವಿರೂಪಾಕ್ಷಪ್ಪ, ಮೇಟಿ ಹನುಮಂತಪ್ಪ, ನಿಂಗಪ್ಪ ಪರಂಗಿ, ಶರಣಪ್ಪ ಗೊಂದಿ, ಹನುಮಂತಪ್ಪ ಪರಂಗಿ, ಚನ್ನಬಸಪ್ಪ ಮೇಟಿ, ಭೀಮನಗೌಡ ಗೌಡ್ರು, ಪರಮೇಶ್ವರ ಉಚ್ಚಲಕುಂಟಿ, ಮಹಿಳಾ ಗಣದ ಯಮನಮ್ಮ ಗೌಡ್ರು ಸೇರಿದಂತೆ ಅನೇಕ ಶರಣರು ಭಾಗವಹಿಸಿದ್ದರು.
ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ವರದಿ: ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ, ಶರಣ ಗ್ರಾಮ ಗುಳೆ.



