
Koppal District Tour by Minister Shivaraj Tangadagi

ಸಚಿವ ಶಿವರಾಜ ತಂಗಡಗಿ ಅವರಿಂದ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ, ನವೆಂಬರ್ 06, (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ನವೆಂಬರ್ 7ರಿಂದ 11ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಚಿವರು ನ.7 ರಂದು ಬೆಳಿಗ್ಗೆ 9.30 ಗಂಟೆಗೆ ಕಾರಟಗಿಯಿಂದ ನಿರ್ಗಮಿಸಿ 10 ಗಂಟೆಗೆ ಕನಕಗಿರಿಗೆ ಆಗಮಿಸುವರು. ಕನಕಗಿರಿಯಲ್ಲಿ ನಡೆಯಲಿರುವ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶ್ರೀ ಕನಕಾಚಲಪತಿ ದೇವಸ್ಥಾನ ಆವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡುವರು. ಕನಕಗಿರಿಯಿಂದ 10.30 ಗಂಟೆಗೆ ಕನಕಗಿರಿಯಿಂದ ನಿರ್ಗಮಿಸಿ 11:15 ಕ್ಕೆ ಕುಷ್ಟಗಿಗೆ ಆಗಮಿಸಿ ಕುಷ್ಟಗಿಯ ಪಿ.ಸಿ.ಎಚ್. ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 12 ಗಂಟೆಗೆ ಕುಷ್ಟಗಿಯಿಂದ ನಿರ್ಗಮಿಸಿ 12.45 ಕ್ಕೆ ಕನಕಗಿರಿಗೆ ಆಗಮಿಸಿ, ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಕನಕಗಿರಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಕನಕಗಿರಿಯಿಂದ ನಿರ್ಗಮಿಸಿ ಸಂಜೆ 04 ಗಂಟೆಗೆ ಕಾರಟಗಿ ಆಗಮಿಸಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ನಡೆಸುವರು.
ನ.08 ರಿಂದ 11 ರವರೆಗೆ ಕಾರಟಗಿಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ನಡೆಸುವರು. ನ.11 ರಂದು ಮಧ್ಯಾಹ್ನ 03 ಗಂಟೆಗೆ ಕಾರಟಗಿಯಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



