False drought declaration: Sharanabasappa Danakai condemns it

ಹುಸಿಯಾದ ಬರ ಘೋಷಣೆ: ಶರಣಬಸಪ್ಪ ದಾನಕೈ ಖಂಡನೆ

ಯಲಬುರ್ಗಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ; ವಿಳಂಬವಾದರೆ ಹೋರಾಟದ ಎಚ್ಚರಿಕೆ
ಯಲಬುರ್ಗಾ: ತಾಲೂಕಿನಲ್ಲಿ ಸಕಾಲದಲ್ಲಿ ಮಳೆಯಾಗದೆ ಬೆಳೆಗಳು ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಮಿ ಬಿತ್ತನೆಗಾಗಿ ಬೀಜ, ಗೊಬ್ಬರ, ಹರಗುವಿಕೆ, ಉಳುಮೆ ಸೇರಿದಂತೆ ಪ್ರತಿ ಎಕರೆಗೆ ₹10ರಿಂದ ₹15 ಸಾವಿರದವರೆಗೆ ಖರ್ಚು ಮಾಡಿ, ಸಾಲ-ಶೂಲ ಮಾಡಿಕೊಂಡು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಯಲಬುರ್ಗಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಲ್ಲಿ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಖಂಡಿಸಿದ್ದಾರೆ.
ಮಳೆ ಕೊರತೆಯಿಂದ ಯಲಬುರ್ಗಾ, ಕುಷ್ಟಗಿ ಹಾಗೂ ಕೊಪ್ಪಳ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ಆದರೂ ಬರ ಘೋಷಣೆ ಮಾಡುವ ವಿಚಾರದಲ್ಲಿ ಅಧಿಕಾರಿಗಳು, ಶಾಸಕರು ಹಾಗೂ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ಬರ ಘೋಷಣೆಗೆ ಯಾವ ಮಾನದಂಡಗಳು ಬೇಕು?” ಎಂದು ಪ್ರಶ್ನಿಸಿದ ಶರಣಬಸಪ್ಪ ದಾನಕೈ, ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ರೈತರ ಕಣ್ಣಿಗೆ ಮಣ್ಣು ಎರಚುವ ಕಾರ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ
ಯಲಬುರ್ಗಾ, ಕುಷ್ಟಗಿ ಹಾಗೂ ಕೊಪ್ಪಳ ತಾಲೂಕುಗಳ ಬರ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇನ್ನೂ ಒಂದು ವಾರದೊಳಗೆ ಯಲಬುರ್ಗಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬರ ಘೋಷಣೆಯಲ್ಲಿ ವಿಳಂಬವಾದರೆ ರೈತರೆಲ್ಲರೂ ಒಗ್ಗೂಡಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಎಚ್ಚರಿಕೆ ನೀಡಿದರು.

