

Social worker Shankrappa Hoogar receives the Karnataka Rajyotsava Award
ಸಮಾಜ ಸೇವಕ ಶಂಕ್ರಪ್ಪ ಹೂಗಾರ್ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ


ಬಡವರ ಬಂಧುವಿನ ಸಮಾಜ ಸೇವೆಗೆ ರಾಜ್ಯಮಟ್ಟದ ಗೌರವ; ನ.23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
ಗಂಗಾವತಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟ್ ವತಿಯಿಂದ ಪ್ರತಿವರ್ಷ ನೀಡಲಾಗುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಗಂಗಾವತಿಯ ಸಮಾಜ ಸೇವಕ ಹಾಗೂ ಹೂವಿನ ವ್ಯಾಪಾರಿ ಶಂಕ್ರಪ್ಪ ನರಸಿಂಗಪ್ಪ ಹೂಗಾರ್ ಅವರು ಆಯ್ಕೆಯಾಗಿದ್ದಾರೆ.
ಗಂಗಾವತಿಯ ಹೃದಯಭಾಗದಲ್ಲಿರುವ ಮಹಾತ್ಮ ಗಾಂಧಿ ವೃತ್ತದಲ್ಲಿ ಹಲವು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿರುವ ಶಂಕ್ರಪ್ಪ ಹೂಗಾರ್ ಅವರು, ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಬಡವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹಾಗೂ ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಾ, ಯಾವುದೇ ಪ್ರಚಾರದ ಆಸೆಯಿಲ್ಲದೆ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಮಾನವೀಯ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಂಕ್ರಪ್ಪ ನರಸಿಂಗಪ್ಪ ಹೂಗಾರ್ ಅವರನ್ನು ಗುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸೋಮಶೇಖರ ಹೂಗಾರ ಗುಂಡೂರು, ಹೂಗಾರ ಸಮಾಜದ ಪ್ರಮುಖರಾದ ಬಸಪ್ಪ ಹೂಗಾರ ಗುಂಡೂರು, ನಿಂಗಪ್ಪ ಹೂಗಾರ್ ಕನಕಗಿರಿ, ಬಾಲಪ್ಪ ಹೂಗಾರ್ ಗಂಗಾವತಿ, ನಾಗರಾಜ ಹೂಗಾರ ಬಸಾಪಟ್ಟಣ, ಶರಣಪ್ಪ ಹೂಗಾರ ಜಂತಕಲ್, ಮಂಜುನಾಥ ಹೂಗಾರ ಹೇರೂರು, ನಾಗರಾಜ ಹೂಗಾರ ಗಂಗಾವತಿ ಸೇರಿದಂತೆ ಗಂಗಾವತಿ ತಾಲೂಕಿನ ಹೂಗಾರ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ನವೆಂಬರ್ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಶಂಕ್ರಪ್ಪ ನರಸಿಂಗಪ್ಪ ಹೂಗಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಶೇಖರ್ ತೆಗ್ಗಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಯಕ ತಿಳಿಸಿದ್ದಾರೆ.
ಸಮಾಜ ಸೇವೆಯ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿರುವ ಶಂಕ್ರಪ್ಪ ಹೂಗಾರ್ ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಗಂಗಾವತಿ ಹಾಗೂ ಹೂಗಾರ ಸಮಾಜದ ಬಾಂಧವರಲ್ಲಿ ಸಂತಸ ಮೂಡಿಸಿದೆ. ಅವರ ಸೇವೆಯನ್ನು ಶ್ಲಾಘಿಸಿರುವ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಶುಭ ಹಾರೈಸಿದ್ದಾರೆ.



