ವನಜಭಾವಿ ಗ್ರಾಮದಲ್ಲಿ ವಚನ ಸಾಹಿತ್ಯದ ಪರಂಪರೆಯಂತೆ ಮಗುವಿಗೆ ನಾಮಕರಣ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
ಜಾಹೀರಾತು

Naming ceremony for a child in Vanajabhavi village, following the tradition of Vachana literature.





ವನಜಭಾವಿ ಗ್ರಾಮದಲ್ಲಿ ವಚನ ಸಾಹಿತ್ಯದ ಪರಂಪರೆಯಂತೆ ಮಗುವಿಗೆ ನಾಮಕರಣ

ಜಾಹೀರಾತು
ಜಾಹೀರಾತು


ನಾಮಕರಣ ಕೇವಲ ಆಡಂಬರವಲ್ಲ, ಅದೊಂದು ಸಂಸ್ಕಾರ: ಬಸವನಗೌಡ ಪೊಲೀಸ್ ಪಾಟೀಲ್


ಯಲಬುರ್ಗಾ: ತಾಲೂಕಿನ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶರಣೆ ನೀಲಮ್ಮ ಮತ್ತು ದೇವಪ್ಪ ಕೋಳೂರು ದಂಪತಿಯ ಪುತ್ರಿಯ ನಾಮಕರಣ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ವಚನ ಸಾಹಿತ್ಯ ಮತ್ತು ಶರಣ ಪರಂಪರೆಯ ಆಶಯದಂತೆ ಮಗುವಿಗೆ ‘ಅಕ್ಕಮಹಾದೇವಿ’ ಎಂದು ನಾಮಕರಣ ಮಾಡಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಹೂಗಾರ, ವಚನ ಸಾಹಿತ್ಯ ಮತ್ತು ಶರಣ ಪರಂಪರೆಯ ಅನುಗುಣವಾಗಿ ಮಗುವಿಗೆ ನಾಮಕರಣ ಮಾಡುವ ಮೂಲಕ ಸಂಸ್ಕಾರ ಹಾಗೂ ಬಸವಾದಿ ಶರಣರ ವಚನಗಳ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವನಿಗೆ’ ಎಂಬ ವಚನದ ಆಶಯದಂತೆ ನೀಲಮ್ಮ ಮತ್ತು ದೇವಪ್ಪ ಕೋಳೂರು ದಂಪತಿ ಏಕದೇವೋಪಾಸಕರಾಗಿ ಶರಣ ಸಂಸ್ಕೃತಿಯ ಪ್ರಕಾರ ಮಗುವಿಗೆ ನಾಮಕರಣ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂದಿನ ದಿನಗಳಲ್ಲಿ ಆಧುನಿಕತೆ ಮತ್ತು ವಿಚಿತ್ರ ಹೆಸರುಗಳ ಹಿಂದೆ ಹೋಗದೆ, ಉತ್ತಮ ಅರ್ಥ ಹಾಗೂ ಜೀವನಕ್ಕೆ ಪ್ರೇರಣೆ ನೀಡುವ ಹೆಸರುಗಳನ್ನು ಆಯ್ಕೆ ಮಾಡಬೇಕು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ ಸೇರಿದಂತೆ ಶರಣರ ಹೆಸರುಗಳು ಮತ್ತು ವಚನಗಳಲ್ಲಿರುವ ಧನಾತ್ಮಕ ಪದಗಳನ್ನು ಮಕ್ಕಳಿಗೆ ಇಡುವುದು ಸೂಕ್ತ. ಈ ಹಿನ್ನೆಲೆಯಲ್ಲಿ ಅಕ್ಕಮಹಾದೇವಿ ಎಂದು ನಾಮಕರಣ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಸವ ದಳದ ಶರಣ ಗ್ರಾಮ ಗುಳೆಯ ಗೌರವಾಧ್ಯಕ್ಷರು ಹಾಗೂ ನಿವೃತ್ತ ಪಿಎಸ್‌ಐ ಬಸವನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ನಾಮಕರಣ ಕೇವಲ ಪ್ರದರ್ಶನವಲ್ಲ, ಅದೊಂದು ಸಂಸ್ಕಾರ. ಇತ್ತೀಚಿನ ದಿನಗಳಲ್ಲಿ ನಾಮಕರಣ ಕಾರ್ಯಕ್ರಮಗಳು ಆಡಂಬರ ಮತ್ತು ಅತಿಥಿಗಳ ಸತ್ಕಾರಕ್ಕೆ ಸೀಮಿತವಾಗುತ್ತಿರುವುದು ವಿಷಾದನೀಯ. ಶರಣರ ಆಶಯದಂತೆ ಮಗುವಿನ ಮನಸ್ಸು ಹಸಿಗೋಡೆಯಿದ್ದಂತೆ. ಬಾಲ್ಯದಿಂದಲೇ ವಚನಗಳ ಸಂಸ್ಕಾರ, ಉತ್ತಮ ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಪರಿಚಯಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಗೌರವ ಉಪಸ್ಥಿತರಾಗಿ ಮಾತನಾಡಿದ ಶರಣ ಅಮರೇಶಪ್ಪ ಬಳ್ಳಾರಿ, ಮಾರುಕಟ್ಟೆ ಗ್ರಾಮ ಘಟಕದ ಬಸವ ಕೇಂದ್ರದ ಅಧ್ಯಕ್ಷರು, ನಾಮಕರಣದ ದಿನದಿಂದಲೇ ಮಗುವಿನ ಸುತ್ತ ಜ್ಞಾನ ಮತ್ತು ಭಕ್ತಿಯ ವಾತಾವರಣ ನಿರ್ಮಾಣವಾಗಬೇಕು. ವಚನ ಸಾಹಿತ್ಯವು ಮೂಢನಂಬಿಕೆ, ಅಂಧಶ್ರದ್ಧೆ ಮತ್ತು ಜಾತೀಯತೆಯನ್ನು ವಿರೋಧಿಸಿದೆ. ಆದ್ದರಿಂದ ಗ್ರಹಬಲ, ಜಾತಕ ಅಥವಾ ಯಾವುದೇ ಅಂಧಶ್ರದ್ಧೆಗೆ ಒಳಗಾಗದೆ, ಮಗುವಿನ ಭವಿಷ್ಯಕ್ಕೆ ಘನತೆ ತರುವಂತಹ ಸಾರ್ವತ್ರಿಕ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಹೆಸರನ್ನು ಇಡಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮನಗುಳಿಯ ವಿರಕ್ತ ಮಠದ ಪೂಜ್ಯ ಶ್ರೀ ವಿರತೀಶಾನಂದ ಸ್ವಾಮಿಗಳು ಮಾತನಾಡಿ, ಮಗುವಿಗೆ ಶರಣರ ಹೆಸರಿಡುವುದು ಎಷ್ಟು ಮುಖ್ಯವೋ, ಆ ಹೆಸರಿಗೆ ತಕ್ಕಂತೆ ಮಗು ಬೆಳೆಯುವಂತೆ ನೋಡಿಕೊಳ್ಳುವುದೂ ಪೋಷಕರ ಜವಾಬ್ದಾರಿಯಾಗಿದೆ. ಮನೆಯಲ್ಲಿ ಪ್ರತಿದಿನ ಶರಣರ ವಚನಗಳನ್ನು ಪ್ರಾರ್ಥನೆಯ ರೂಪದಲ್ಲಿ ಹೇಳಿಕೊಡುವುದರಿಂದ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ನಾಮಕರಣ ಮಾಡುವುದು ಕೇವಲ ಹೆಸರಿಡುವ ಕಾರ್ಯಕ್ರಮವಲ್ಲ; ಮಗುವನ್ನು ಸಮಾಜದ ಜವಾಬ್ದಾರಿಯುತ, ಸಂಸ್ಕಾರವಂತ ಹಾಗೂ ಕಾಯಕನಿಷ್ಠ ಪ್ರಜೆಯನ್ನಾಗಿ ರೂಪಿಸುವ ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು. ಬಳಿಕ ಮಗುವಿಗೆ ಲಿಂಗದೀಕ್ಷೆ ನೀಡಿ, ಅಕ್ಕಮಹಾದೇವಿ ಎಂದು ನಾಮಕರಣ ಮಾಡಲಾಯಿತು. ನಂತರ ಅನುಭವಿಗಳ ಅನುಭಾವ ಕಾರ್ಯಕ್ರಮ ಜರುಗಿತು. ಷಟಸ್ಥಲ ಧ್ವಜಾರೋಹಣವನ್ನು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀ ರುದ್ರಪ್ಪ ಮರಕಟ ನೆರವೇರಿಸಿದರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶರಣ ದಂಪತಿಗಳಾದ ಅಮರೇಶಪ್ಪ ಬಳ್ಳಾರಿ ಮತ್ತು ಬಸವರಾಜ ಹೂಗಾರ ದಂಪತಿಗಳನ್ನು ಗೌರವಿಸಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣರಾದ ಹಂಪಣ್ಣ ತಾವರಗೇರಾ, ರುದ್ರಪ್ಪ ಹಳ್ಳಿ, ಶಂಕ್ರಪ್ಪ ಬೇವೂರು, ಶರಣಪ್ಪ ಅಬ್ಬಿ, ಗಿರಮಲ್ಲಪ್ಪ ಪರಂಗಿ, ವಿರುಪಾಕ್ಷಪ್ಪ ಮೇಟಿ, ಚಿದಾನಂದಪ್ಪ ಗೊಂದಿ, ನಿಂಗಪ್ಪ ಪರಂಗಿ, ಶರಣಮ್ಮ, ಯಮನಮ್ಮ ಗೌಡ್ರು, ಸಾವಿತ್ರಮ್ಮ ಆವಾರಿ, ಶಂಕ್ರಮ್ಮ, ಬಸಮ್ಮ ಹೂಗಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
✍️ ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ, ಶರಣ ಗ್ರಾಮ ಗುಳೆ

Total Views: 0
ಜಾಹೀರಾತು
Share This Article
Leave a Comment