ಅಧಿಕಾರಿಗಳ ಆಡಳಿತ ವೈಖರಿ ಸುಧಾರಣೆಯಾಗಬೇಕು: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
ಜಾಹೀರಾತು

The administrative style of officials must improve: Lokayukta Justice B.S. Patil




ಅಧಿಕಾರಿಗಳ ಆಡಳಿತ ವೈಖರಿ ಸುಧಾರಣೆಯಾಗಬೇಕು: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

ಜಾಹೀರಾತು
ಜಾಹೀರಾತು

ಕೊಪ್ಪಳ, ನವೆಂಬರ್ 06, : ಅಧಿಕಾರಿಗಳು ತಮ್ಮ ಆಡಳಿತ ವೈಖರಿಯಲ್ಲಿ ಬದಲಾವಣೆ ತರಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅರ್ಹರಿಗೆ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ದೊರಕಿಸಿಕೊಡಬೇಕು ಎಂದು ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ತಿಳಿಸಿದರು.
ಶುಕ್ರವಾರದಂದು ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರವು ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅದಕ್ಕೆ ಸಾಕಷ್ಟು ಅನುದಾನವನ್ನು ಒದಗಿಸುತ್ತಿದೆ. ಸರಕಾರದ ಯೋಜನೆ ಹಾಗೂ ಅನುದಾನವನ್ನು ಸಮರ್ಪಕ ಹಾಗೂ ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವುದು ಎಲ್ಲ ಅಧಿಕಾರಿಗಳ ಕರ್ತವ್ಯ. ಒಂದು ವೇಳೆ ಅಧಿಕಾರಿ ಸಿಬ್ಬಂದಿಗಳು ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯ ಆಡಳಿತದಲ್ಲಿ ಜನಪರ ಕಾಳಜಿ, ಚಾಕಚಕ್ಯತೆ ಇದ್ದರೆ ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡುವುದರ ಜೊತೆಗೆ ಸರಕಾರದ ಅನುದಾನ ಅರ್ಹರಿಗೆ ಪ್ರಾಮಾಣಿಕವಾಗಿ ತಲುಪಿಸಿದಲ್ಲಿ ಜನರ ಜೀವನ ಮಟ್ಟ ಸುಧಾರಣೆಯಾಗುತ್ತದೆ. ಸರ್ಕಾರಿ ನೌಕರರಿಗೆ ಸರಕಾರವು ಅನೇಕ ಸವಲತ್ತುಗಳನ್ನು ನೀಡಿದೆ ಅದರಲ್ಲಿ ಉತ್ತಮ ಜೀವನ ಸಾಗಿಸಬಹುದಾಗಿದೆ. ಆದರೆ ಕೆಲ ಅಧಿಕಾರಿಗಳು ಅತಿ ಆಸೆಗಾಗಿ ಭ್ರಷ್ಟಾಚಾರದಲ್ಲಿ ತೊಡಗುತ್ತಿರುವ ಕುರಿತು ದೂರುಗಳು ಬಂದಿದ್ದು, ಭ್ರಷ್ಟಾಚಾರ ಸಾಬೀತಾದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ಅವರದೇ ಆದಂತಹ ಕಾರ್ಯಗಳನ್ನು ವರ್ಗೀಕರಣ ಮಾಡಿ ಕೊಡಲಾಗಿರುತ್ತದೆ. ಈ ಕಾರ್ಯ ಪರೀಶಿಲನೆಗಾಗಿ ಮೇಲುಸ್ತುವಾರಿಯನ್ನು ನೇಮಿಸಲಾಗಿದ್ದರೂ ಸಹ ಸರಕಾರಿ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ. ಒಬ್ಬ ವ್ಯಕ್ತಿ ಒಂದೇ ಕೆಲಸದ ವೇಳೆ ಪದೇ ಪದೇ ಕಚೇರಿಗೆ ಆಗಮಿಸುತ್ತಾನೆ ಎಂದರೆ ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ ಎಂದರ್ಥವಾಗುತ್ತದೆ. ಅಧಿಕಾರಿ, ಸಿಬ್ಬಂದಿಗಳು ದುರಾಸೆಗೊಳಗಾಗಿ ತಾವು ಮಾಡುವ ತಪ್ಪಿಗೆ ತಮ್ಮ ಇಡೀ ಕುಟುಂಬವನ್ನು ಮುಜುಗರಕ್ಕೆ ತಳ್ಳುತ್ತಾರೆ. ನಾವು ಬೆಳೆದು ಬಂದ ಹಾದಿಯಲ್ಲಿ, ತಂದೆ ತಾಯಿಯರ ಮಾರ್ಗದರ್ಶನದಲ್ಲಿ ಪ್ರಜ್ಞೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಸರಕಾರಿ ಅಧಿಕಾರಿ, ಸಿಬ್ಬಂದಿಗಳು ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಜನ ಸೇವಕನಾಗುತ್ತಾನೆ. ಆಗ ಸರಕಾರಿ ಕೆಲಸ ದೇವರ ಕೆಲಸ ಎಂಬ ಸಂದೇಶಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿ ಇರುವ ಪ್ರತಿಯೊಬ್ಬರು ಲೋಕಾಯುಕ್ತ ಕಾಯ್ದೆಯ ಬಗ್ಗೆ ಅರಿವು ಹೊಂದಿರಬೇಕು. ಈ ಕಾಯ್ದೆಯಡಿ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರ್ವಹಿಸುವವರು ಮಾಡುವ ತಪ್ಪು ಸಣ್ಣದಾಗಲಿ ದೊಡ್ಡದಾಗಲಿ ಅದಕ್ಕೆ ಶಿಕ್ಷೆ ಖಚಿತವಾಗಿರುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯ, ವಸತಿ ಶಾಲೆಗಳಲ್ಲಿ ಸಾಮರ್ಥ್ಯ ಮೀರಿ ಪ್ರವೇಶ ನೀಡಬೇಡಿ. ಇದರಿಂದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯದ ಕೊರತೆ ಮುಖ್ಯವಾಗಿ ಎದುರಾಗುತ್ತದೆ. ಇದರಿಂದ ಶೈಕ್ಷಣಿಕವಾಗಿಯೂ ಮಕ್ಕಳು ಉತ್ತಮ ಪ್ರಗತಿ ಸಾಧಿಸಲು ಕಷ್ಟವಾಗುತ್ತದೆ. ಪ್ರಸ್ತುತ ಹೆಚ್ಚುವರಿ ಸಂಖ್ಯೆ ಇರುವ ವಸತಿ ನಿಲಯಗಳಿಂದ ವಿದ್ಯಾರ್ಥಿಗಳನ್ನು ಬಾಡಿಗೆ ಕಟ್ಟಡಗಳಿಗೆ ವರ್ಗಾಯಿಸಿ, ಅಗತ್ಯ ಮೂಲಸೌಕರ್ಯ ಒದಗಿಸಿ. ಸ್ವಚ್ಛತೆ ಹಾಗೂ ಶಿಸ್ತಿಗೆ ಆದ್ಯತೆ ನೀಡಿ ಎಂದು ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಲೋಕಾಯುಕ್ತದ ಕಾರ್ಯದರ್ಶಿ ಶ್ರೀನಾಥ, ಅಪರ ನಿಬಂಧಕರಾದ ಕೃಷ್ಣಯ್ಯ, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಕರ್ನಾಟಕ ಲೋಕಾಯುಕ್ತದ ರಾಯಚೂರು ಎಸ್‌ಪಿ ಸಿದ್ದರಾಜು ಸೇರಿದಂತೆ ಲೋಕಾಯುಕ್ತದ ಇತರೆ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article
Leave a Comment