Launch of the project to fill 28 lakes within the Gangavathi Assembly constituency
ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 28 ಕೆರೆಗಳ ಕೆರೆ ತುಂಬಿಸುವ ಯೋಜನೆಗೆ ಚಾಲನೆ
ಕೊಪ್ಪಳ ಜುಲೈ 02, (ಕರ್ನಾಟಕ ವಾರ್ತೆ): ಗಂಗಾವತಿ ವಿಧಾನಸಭಾ ಕ್ಷೇತ್ರದ ರೈತರ ಬಹುಕಾಲದ ಬೇಡಿಕೆಯಾಗಿದ್ದ 28 ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗುರುವಾರದಂದು ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಅಧಿಕೃತ ಚಾಲನೆ ನೀಡಿದರು.
ಸುಮಾರು ರೂ.153.76 ಕೋಟಿ ವೆಚ್ಚದ ಈ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಗುರುವಾರದಂದು ಇಂದರಿಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಯೋಜನೆಯಡಿ ವಿವಿಧ ಹಂತಗಳಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಗಂಗಾವತಿ ಹಾಗೂ ಕೊಪ್ಪಳ ತಾಲ್ಲೂಕಿನ ಒಟ್ಟು 28 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಡಮಕಲ್ ಕೆರೆ ವ್ಯಾಪ್ತಿಯ ಆಗೋಲಿ, ಹಂಪಸದುರ್ಗ, ಗಡ್ಡಿ, ಹೇಮಗುಡ್ಡ, ಮಲಕನಮರಡಿ, ಭಟ್ಟರನರಸಾಪುರ ಹಾಗೂ ಉಡಮಕಲ್ ಕೆರೆಗಳು, ಚಿಕ್ಕಬೊಮ್ಮನಾಳ ಹಾಗೂ ಚಳ್ಳಾರಿ ಕೆರೆಗಳು, ಕೊಪ್ಪಳ ತಾಲ್ಲೂಕಿನ ಹೊಸೂರು ಕೆರೆ ವ್ಯಾಪ್ತಿಯ ಹೊಸೂರು, ಹಾಸಗಲ್, ಕೊಡದಾಳ ಹಾಗೂ ಹಿರೇಸೂಳಿಕೇರಿ ಕೆರೆಗಳು, ದನಕನದೊಡ್ಡಿ ಕೆರೆ ವ್ಯಾಪ್ತಿಯ ದನಕನದೊಡ್ಡಿ, ಹಾಲಹಳ್ಳಿ, ಸಂಗಾಪುರ, ಕಲ್ ತಾವರಗೇರ, ಭೀಮನೂರು ಹಾಗೂ ಕೂಕನಪಳ್ಳಿ ಕೆರೆಗಳು, ಇಂದರಗಿ ಕೆರೆ ವ್ಯಾಪ್ತಿಯ ಇಂದರಗಿ, ವನಬಳ್ಳಾರಿ, ಬೂದಗುಂಪ, ಹೊಸಹಳ್ಳಿ, ನಾಗೇಶನಹಳ್ಳಿ ಹಾಗೂ ಜಬ್ಬಲಗುಡ್ಡ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುತ್ತಿವೆ.
ಭೂಮಿ ಪೂಜೆ ಬಳಿಕ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಈ ಯೋಜನೆಯಿಂದ ಗಂಗಾವತಿ ಕ್ಷೇತ್ರದ ನೀರಾವರಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಮಳೆ ಕೊರತೆಯ ಸಮಯದಲ್ಲೂ ಕೆರೆಗಳಿಗೆ ನೀರು ಪೂರೈಕೆಯಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಕೃಷಿ ಚಟುವಟಿಕೆಗಳಿಗೆ ನಿರಂತರ ನೀರಿನ ಲಭ್ಯತೆ ದೊರೆತು ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಕೆರೆಗಳು ತುಂಬುವುದರಿAದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವ ಜೊತೆಗೆ ಜಾನುವಾರುಗಳಿಗೆ ನೀರಿನ ಲಭ್ಯತೆ ಹೆಚ್ಚಲಿದೆ. ಅಂತರ್ಜಲ ಮರುಪೂರಣದಿಂದ ಬೋರ್‌ವೆಲ್‌ಗಳ ನೀರಿನ ಮಟ್ಟವೂ ಏರಿಕೆಯಾಗುವ ನಿರೀಕ್ಷೆಯಿದ್ದು, ಪರಿಸರ ಸಮತೋಲನಕ್ಕೂ ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂದರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರಾಜ, ತುಂಗಭದ್ರಾ ಪ್ರಾಧಿಕಾರದ ಅಧಿಕಾರಿ ಪುನೀತ್, ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ್, ಡಿ.ಕೆ.ಆಗೋಲಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಪ್ರಮುಖರಾದ ದೇವಪ್ಪ ಈಶಪ್ಪ ಭೋವಿ, ಇಂದ್ರೇಶ್ ಹನುಮಂತಪ್ಪ ಭೋವಿ, ಗಾಳೆಪ್ಪ ಮಾದಿಗ, ಹನುಮಂತಪ್ಪ ಹ್ಯಾಟಿ, ಕನಕಪ್ಪ ಪೂಜಾರ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


