

ಕುಣಿಕೇರಿ ತಾಂಡದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ
Active tuberculosis detection campaign in Kunikeri Tanda
ಕ್ಷಯರೋಗ ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸಂಪೂರ್ಣ ಗುಣಪಡಿಸುವುದೇ ಗುರಿ: ಗಂಗಮ್ಮ ಕೆ.
ಕೊಪ್ಪಳ, ನ. 5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯನಗರ ವ್ಯಾಪ್ತಿಯ ಕುಣಿಕೇರಿ ತಾಂಡದಲ್ಲಿ ನ. 4ರಂದು ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ. ಮಾತನಾಡಿ, ಕ್ಷಯರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸಂಪೂರ್ಣ ಗುಣಪಡಿಸುವುದು ಆಂದೋಲನದ ಮುಖ್ಯ ಉದ್ದೇಶವಾಗಿದೆ. ರೋಗಲಕ್ಷಣಗಳಿದ್ದರೂ ಪತ್ತೆಯಾಗದ ವ್ಯಕ್ತಿಗಳನ್ನು ಮನೆಮನೆಗೆ ಭೇಟಿ ನೀಡಿ ಗುರುತಿಸುವ ಮೂಲಕ ಕ್ಷಯರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗ ಪರೀಕ್ಷೆ, ಆರು ತಿಂಗಳ ಉಚಿತ ಚಿಕಿತ್ಸೆ ಹಾಗೂ ಔಷಧಿಗಳು ಲಭ್ಯವಿವೆ. ಕ್ಷಯರೋಗ ದೃಢಪಟ್ಟವರಿಗೆ ಪೌಷ್ಟಿಕ ಆಹಾರಕ್ಕಾಗಿ ಸರ್ಕಾರದಿಂದ ಪ್ರತಿ ತಿಂಗಳು ₹1,000 ಪೋಷಣಾ ಸಹಾಯಧನವನ್ನು ನೇರವಾಗಿ ನೀಡಲಾಗುತ್ತದೆ. ಶಂಕಿತ ರೋಗಿಗಳಿಗೆ ಕಫ ಪರೀಕ್ಷೆ, ಎದೆಯ ಎಕ್ಸ್ರೇ ಹಾಗೂ ಸಿಬಿನಾಟ್ ಪರೀಕ್ಷೆ ನಡೆಸಲಾಗುತ್ತದೆ. ಸಾರ್ವಜನಿಕರು ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಂತರ ಟಿಬಿ ವಿಭಾಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಇಬ್ರಾಹಿಂ ಅವರು ಕ್ಷಯರೋಗದ ಸಾಮಾನ್ಯ ಲಕ್ಷಣಗಳು, ರೋಗ ಹರಡುವ ವಿಧಾನ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಸಾರ್ವಜನಿಕರು, ಸಮುದಾಯ ಆರೋಗ್ಯಾಧಿಕಾರಿ ಪದ್ಮಾವತಿ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುಮಾ ಹಿರೇಮಠ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ನೇತ್ರಾವತಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.




