ಕುರಿ ಸಾಕಾಣಿಕೆ, ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿಗಳಿಗೆ ಉಚಿತ ತರಬೇತಿ: ಅರ್ಜಿ ಆಹ್ವಾನ
ಜಾಹೀರಾತು

ಕೊಪ್ಪಳ ಜುಲೈ 10, (ಕರ್ನಾಟಕ ವಾರ್ತೆ): ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ವತಿಯಿಂದ ಕುರಿ ಸಾಕಾಣಿಕೆ ಹಾಗೂ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಕುರಿತ ಉಚಿತ ವಸತಿ ಸಹಿತ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿರುವ ಈ ತರಬೇತಿಯಲ್ಲಿ 18 ರಿಂದ 50 ವರ್ಷದೊಳಗಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರು ಭಾಗವಹಿಸಬಹುದು. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಊಟ ಹಾಗೂ ವಸತಿ ಸೌಲಭ್ಯವನ್ನು ಸಂಸ್ಥೆಯೇ ಒದಗಿಸಲಿದೆ. ಮೊದಲು ಅರ್ಜಿ ಸಲ್ಲಿಸುವವರಿಗೆ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ಅವಧಿಯಲ್ಲಿ ಕೌಶಲ್ಯಾಭಿವೃದ್ಧಿ, ಸಾಧನಾ ಪ್ರೇರಣೆ, ಉದ್ಯಮಶೀಲತಾ ಗುಣಗಳ ಬೆಳವಣಿಗೆ, ಹೊಸ ಉದ್ಯಮ ಸ್ಥಾಪನೆಗೆ ಮಾರ್ಗದರ್ಶನ, ಮಾರುಕಟ್ಟೆ ಸಮೀಕ್ಷೆ, ಮಾರಾಟ ತಂತ್ರಗಳು, ಯಶಸ್ವಿ ಉದ್ಯಮಿಗಳ ಅನುಭವ ಹಂಚಿಕೆ, ಕ್ಷೇತ್ರ ಭೇಟಿ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ, ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಆರಂಭಿಸುವ ವಿಧಾನ, ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಯೋಜನಾ ವರದಿ ತಯಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು ಹಾಗೂ ವಿಳಾಸವನ್ನು ನೋಂದಾಯಿಸಿಕೊಳ್ಳಲು ಜುಲೈ 30 ಕೊನೆಯ ದಿನವಾಗಿದ್ದು, ಅರ್ಜಿಯನ್ನು www.rsetihaliyal.org ಮೂಲಕ ಆನ್‌ಲೈನ್ ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಅಥವಾ ಮೊ.ಸಂ: 8217236973, 9483485489 ಹಾಗೂ 9482188780 ಗಳಿಗೆ ಕರೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Total Views:
0

