

ನಾಳೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪರಿಷ್ಕರಣೆ ಕಾರ್ಯಾಗಾರ
Evaluation Process Refinement Workshop at Maharani Cluster University tomorrow

ಬೆಂಗಳೂರು, ಅ.30: ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸುಧಾರಣೆ ಹಾಗೂ ಪರಿಷ್ಕರಣೆ ತರುವ ಉದ್ದೇಶದಿಂದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ನಾಳೆ (ಅ.31) ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.
ನಗರದ ಮಹಾರಾಣಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಾಗಾರ ನಡೆಯಲಿದೆ ಎಂದು ಕಾರ್ಯಾಗಾರದ ಸಂಯೋಜಕರಾದ ಕುಲಸಚಿವರು (ಮೌಲ್ಯಮಾಪನ) ಪ್ರೊ. ವೈ. ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಾಗಾರವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ರಮೇಶ್ ಉದ್ಘಾಟಿಸಲಿದ್ದಾರೆ. ‘ಮೌಲ್ಯಮಾಪನದ ಸವಾಲುಗಳು’ ವಿಷಯದ ಕುರಿತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಡಿ. ಡೊಮಿನಿಕ್ ಹಾಗೂ ‘ಪರೀಕ್ಷಾ ಮಂಡಳಿ ಅಧ್ಯಕ್ಷರ ಪಾತ್ರ ಮತ್ತು ಜವಾಬ್ದಾರಿಗಳು’ ವಿಷಯದ ಕುರಿತು ಎಂಸಿಯು ಮಾಜಿ ಕುಲಸಚಿವ ಪ್ರೊ. ಎಚ್. ರಾಮಕೃಷ್ಣಯ್ಯ ಉಪನ್ಯಾಸ ನೀಡಲಿದ್ದಾರೆ.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಮಮತಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ಕುಲಸಚಿವೆ ಸೀಮಾ ಬಿ. ನಾಯಕ್, ವಿತ್ತಾಧಿಕಾರಿ ಎಂ.ಎಸ್. ಚೇತನ್ ಕುಮಾರ್, ಆಡಳಿತ ಉಪಕುಲಸಚಿವರಾದ ಪ್ರೊ. ಎಸ್.ಡಿ. ನಾಗೇಂದ್ರ, ಪ್ರೊ. ಎಲ್.ಎಚ್. ಶಿವಶಂಕರಪ್ಪ, ಮೌಲ್ಯಮಾಪನ ಉಪಕುಲಸಚಿವ ಶ್ರೀನಾಥ್ ರಾಜ್ ಸೇರಿದಂತೆ ವಿವಿಧ ವಿಭಾಗಗಳ ನಿರ್ದೇಶಕರು, ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿರಲಿದ್ದಾರೆ.
ಇದಲ್ಲದೆ, ವಿವಿಧ ವಿಷಯಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರೊ. ವೈ. ರಮೇಶ್ ತಿಳಿಸಿದ್ದಾರೆ.



