
Church construction encroaches upon a public road; Hindu Jagarana Vedike demands removal of the encroachment and a halt to the construction work!
ಸಾರ್ವಜನಿಕ ರಸ್ತೆ ನುಂಗಿದ ಚರ್ಚ್ ನಿರ್ಮಾಣ?
ಅತಿಕ್ರಮಣ ತೆರವುಗೊಳಿಸಿ, ಕಾಮಗಾರಿ ತಡೆಗೆ ಹಿಂ.ಜಾ.ವೇ ಆಗ್ರಹ!
ಗಂಗಾವತಿ, ಅ.15: ನಗರದ ವಾರ್ಡ್ ನಂ.8ರ ಮಹೆಬೂಬನಗರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಬಳಕೆಯಾಗುತ್ತಿರುವ ರಸ್ತೆಯನ್ನೇ ಅತಿಕ್ರಮಿಸಿ ಎಂ.ಬಿ. ಜೇರೋಸ್ ರೋಮಿಯೋ ಚರ್ಚ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಸ್ತೆ ಅತಿಕ್ರಮಣ ತೆರವುಗೊಳಿಸಿ, ನಿರ್ಮಾಣ ಕಾಮಗಾರಿಯನ್ನು ತಕ್ಷಣ ತಡೆಹಿಡಿಯಬೇಕು ಎಂದು ಹಿಂದೂ ಜಾಗರಣ ವೇದಿಕೆ ನಗರಸಭೆಯನ್ನು ಒತ್ತಾಯಿಸಿದೆ.
ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಿ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಾರ್ವಜನಿಕ ರಸ್ತೆಯ ಅತಿಕ್ರಮಣದ ಕುರಿತು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಮಹೆಬೂಬನಗರದ ವಾರದ ಸಂತೆ ಬಯಲು ಪ್ರದೇಶದಲ್ಲಿ ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸುವ ರಸ್ತೆಯಲ್ಲೇ ಚರ್ಚ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವೇದಿಕೆ ಆರೋಪಿಸಿದೆ.
ನಗರಸಭೆಯಿಂದಲೇ ಅಭಿವೃದ್ಧಿಪಡಿಸಲಾದ ಸಾರ್ವಜನಿಕ ರಸ್ತೆ ಅತಿಕ್ರಮಣವಾಗಿದ್ದರೆ, ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಳ್ಳದೆ ತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕು. ರಸ್ತೆ ವ್ಯಾಪ್ತಿ, ದಾಖಲೆಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಾರ್ವಜನಿಕರ ಸಂಚಾರಕ್ಕೆ ಮೀಸಲಾಗಿರುವ ರಸ್ತೆ ಅಥವಾ ಸಾರ್ವಜನಿಕ ಸ್ಥಳವನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅತಿಕ್ರಮಿಸಲು ಅವಕಾಶ ನೀಡಬಾರದು. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಗರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಚನ್ನಬಸವ ಹೂಗಾರ, ಮಂಜುನಾಥ ಗಾಂಧಿನಗರ, ಕುಮಾರೇಶ ಹೂಗಾರ, ಗಾದಿಲಿಂಗೇಶ ಗಾಂಧಿನಗರ, ಪುಟ್ಟರಾಜ ಸೇರಿದಂತೆ ವಾರ್ಡ್ನ ಪ್ರಮುಖರು ಉಪಸ್ಥಿತರಿದ್ದರು.




