ಗಂಗಾವತಿಯಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ಮಹಿಳೆಯರಿಗೆ ಆತ್ಮರಕ್ಷಣಾ ತರಬೇತಿ ಶಿಬಿರ ಯಶಸ್ವಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Karate belt examination and self-defense training camp for women successfully held in Gangavathi.

ಗಂಗಾವತಿಯಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ಮಹಿಳೆಯರಿಗೆ ಆತ್ಮರಕ್ಷಣಾ ತರಬೇತಿ ಶಿಬಿರ ಯಶಸ್ವಿ

ಜಾಹೀರಾತು

ಗಂಗಾವತಿ: ಅಕ್ಟೋಬರ್ 11 ರಂದು ಬಿ.ಎಲ್. ಬುಲ್ಸ್ ಕರಾಟೆ ಡು ಸ್ಪೋರ್ಟ್ಸ್ ಸಂಸ್ಥೆ, ಗಂಗಾವತಿ ಹಾಗೂ ಶ್ರೀ ಧರ್ಮದ ಗುಡ್ಡ ಕರಾಟೆ ಡು ಸ್ಪೋರ್ಟ್ಸ್ ವಿಜಯನಗರ ಸಂಸ್ಥೆಯ ವತಿಯಿಂದ ಕರಾಟೆ ಬೆಲ್ಟ್ ಪರೀಕ್ಷೆ ಮತ್ತು ಮಹಿಳೆಯರಿಗಾಗಿ ಉಚಿತ ಆತ್ಮರಕ್ಷಣಾ ತರಬೇತಿ ಶಿಬಿರವನ್ನು ಗಂಗಾವತಿ ನಗರದ ಎ.ಪಿ.ಎಂ.ಸಿ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕರಾಟೆ ತರಬೇತುದಾರರಾದ ಮಂಜುನಾಥ ರಾಥೋಡ್ ಮತ್ತು ವೀರೇಶ್ ಗುಂಜಾಳ್ ಅವರ ನೇತೃತ್ವದಲ್ಲಿ ನಡೆಯಿತು. ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಆತ್ಮರಕ್ಷಣಾ ಕೌಶಲಗಳನ್ನು ಕಲಿತುಕೊಳ್ಳಬೇಕು ಹಾಗೂ ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಆತ್ಮರಕ್ಷಣೆಯ ವಿವಿಧ ತಂತ್ರಗಳನ್ನು ಕಲಿತುಕೊಂಡರು.
ಇದೇ ಸಂದರ್ಭದಲ್ಲಿ ಕರಾಟೆ ವಿದ್ಯಾರ್ಥಿಗಳಿಗಾಗಿ ಬೆಲ್ಟ್ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕರಾಟೆ ಕೌಶಲ, ಶಿಸ್ತು, ದೈಹಿಕ ಸಾಮರ್ಥ್ಯ ಹಾಗೂ ತಾಂತ್ರಿಕ ಪರಿಣತಿಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಮುಖ್ಯ ಪರೀಕ್ಷಕರಾಗಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಖ್ಯಾತ ಕರಾಟೆ ಶಿಕ್ಷಕರಾದ ಶಿಹಾನ್ ಕೆ.ಎಂ.ಡಿ. ಶಕೀಲ್ (ಬ್ಲ್ಯಾಕ್ ಬೆಲ್ಟ್ 6ನೇ ಡಾನ್, ಸ್ಟೈಲ್ ಚೀಫ್ ಮತ್ತು ಎಕ್ಸಾಮಿನರ್ – RJSKAI) ಅವರು ಆಗಮಿಸಿ ವಿದ್ಯಾರ್ಥಿಗಳ ಬೆಲ್ಟ್ ಪರೀಕ್ಷೆಯನ್ನು ನಡೆಸಿದರು.
ಬೆಲ್ಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಆರಾಧ್ಯ ಮತ್ತು ವೈಷ್ಣವಿ ಬೆಲ್ಟ್ ಪ್ರಮೋಷನ್ ಪಡೆದರು. ಇದೇ ಸಂದರ್ಭದಲ್ಲಿ ಶಿವರಾಜ್ ಪಲ್ಲೇದ್ ಅವರು ಬ್ಲ್ಯಾಕ್ ಬೆಲ್ಟ್ ಪಡೆದು ಕರಾಟೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದರು. ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತುದಾರರು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ಗಾಂಧಿ ಪೈ ಮೆಡಿಕಲ್ ಅಕಾಡೆಮಿ ಡೈರೆಕ್ಟರ್ ಮುಕ್ತಾರ್ ಹುಸೇನ್, ಮಂಜುನಾಥ, ರಾಮಕೃಷ್ಣ, ಗಿರೀಶ್, ವಕೀಲರಾದ ಮಂಜುನಾಥ ಹಾಗೂ ರಘು ಅವರು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಬಿ.ಎಲ್. ಬುಲ್ಸ್ ಕರಾಟೆ ಸಂಸ್ಥೆಯ ಬ್ಲ್ಯಾಕ್ ಬೆಲ್ಟ್ ವಿದ್ಯಾರ್ಥಿಗಳಾದ ಮೀನಾಕ್ಷಿ ಮತ್ತು ಫಯಾಜ್ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಿಳೆಯರಲ್ಲಿ ಆತ್ಮರಕ್ಷಣೆಯ ಅರಿವು ಮೂಡಿಸುವುದರ ಜೊತೆಗೆ ಯುವಜನರಲ್ಲಿ ಶಿಸ್ತು, ಆತ್ಮವಿಶ್ವಾಸ, ಧೈರ್ಯ ಮತ್ತು ದೈಹಿಕ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಮಹಿಳೆಯರು, ಕರಾಟೆ ವಿದ್ಯಾರ್ಥಿಗಳು, ಪೋಷಕರು, ಅತಿಥಿಗಳು ಹಾಗೂ ಗಣ್ಯರಿಗೆ ಎರಡೂ ಕರಾಟೆ ಸಂಸ್ಥೆಗಳ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

Total Views: 0
ಜಾಹೀರಾತು
Share This Article