ಜಿಬಿಎ ಅಧಿಕಾರಿ ಕೆ.ಟಿ. ಮಂಜುನಾಥ್ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
SC/ST Atrocity Case Against GBA Official K.T. Manjunath

ಜಿಬಿಎ ಅಧಿಕಾರಿ ಕೆ.ಟಿ. ಮಂಜುನಾಥ್ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣ

ಜಾಹೀರಾತು


ದಲಿತ ಗುತ್ತಿಗೆದಾರನಿಗೆ ಜಾತಿ ನಿಂದನೆ, ಲಂಚಕ್ಕೆ ಬೇಡಿಕೆ ಆರೋಪ


ಬೆಂಗಳೂರು, ಅ.11: ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ (ಜಿಬಿಎ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯಾಧಿಕಾರಿ (ಆರ್‌ಎಫ್‌ಒ) ಕೆ.ಟಿ. ಮಂಜುನಾಥ್ ವಿರುದ್ಧ ಜಾತಿ ನಿಂದನೆ, ಲಂಚದ ಬೇಡಿಕೆ ಹಾಗೂ ಜೀವ ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹42.39 ಲಕ್ಷ ಬಿಲ್ ಬಾಕಿ; ₹2 ಲಕ್ಷ ಪಡೆದರೂ ಬಿಲ್ ಮಾಡಿಲ್ಲ ಎಂಬ ಆರೋಪ
ಕನಕಪುರ ತಾಲೂಕಿನ ಪರಿಶಿಷ್ಟ ಜಾತಿಗೆ ಸೇರಿದ ಕ್ಲಾಸ್-1 ಸಿವಿಲ್ ಗುತ್ತಿಗೆದಾರ ಶ್ರೀನಿವಾಸ ವಿ. ಅವರು ಕಳೆದ 15 ವರ್ಷಗಳಿಂದ ಬಿಬಿಎಂಪಿ/ಜಿಬಿಎ ದಕ್ಷಿಣ ವಲಯದಲ್ಲಿ ಮಳೆ ನೀರು ಕಾಲುವೆ ಹಾಗೂ ಮರಗಳ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ತಮ್ಮ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಒಟ್ಟು ₹42.39 ಲಕ್ಷ ಬಿಲ್ ಬಾಕಿ ಇದ್ದು, ಪಾರ್ಟ್ ಬಿಲ್ ಮಾಡಿಕೊಡುವುದಾಗಿ ಹೇಳಿ ಈಗಾಗಲೇ ₹2 ಲಕ್ಷ ಹಣ ಪಡೆದಿದ್ದರೂ ಬಿಲ್ ಮಾಡಿಕೊಡದೆ ಸತಾಯಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಅ.5ರಂದು ಮಧ್ಯಾಹ್ನ 1.11ರ ಸುಮಾರಿಗೆ ಜಯನಗರದ ಜಿಬಿಎ ದಕ್ಷಿಣ ವಲಯ ಕಚೇರಿಯ ತಾರಸಿ ಮೇಲೆ ಬಿಲ್ ಕುರಿತು ವಿಚಾರಿಸಲು ತೆರಳಿದ್ದಾಗ, ಆರ್‌ಎಫ್‌ಒ ಕೆ.ಟಿ. ಮಂಜುನಾಥ್ ಅವರು ಮತ್ತೊಮ್ಮೆ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೀನಿವಾಸ ಅವರು ದೂರಿನಲ್ಲಿ ಆರೋಪಿಸಿದ್ದಾರೆ.


ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಸಂದರ್ಭದಲ್ಲಿ, ಅಧಿಕಾರಿ ತಮ್ಮನ್ನು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ, ಕೊರಳಪಟ್ಟಿ ಹಿಡಿದು ಎಳೆದಾಡಿ, ಕೊಲೆ ಮಾಡುವುದಾಗಿ ಹಾಗೂ ಕುಟುಂಬದವರಿಗೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಯ ಬಳಿಕ ಮಾನಸಿಕವಾಗಿ ನೊಂದಿದ್ದ ಶ್ರೀನಿವಾಸ ಅವರು ಅ.9ರಂದು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಸಿಆರ್‌ ನಂ.201/2026ರಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)(ಆರ್), 3(1)(ಎಸ್) ಹಾಗೂ ಬಿಎನ್‌ಎಸ್‌ 2023ರ ಕಲಂ 351(2), 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಅನ್ನು ಅ.9ರಂದು ರಾತ್ರಿ 8.55ಕ್ಕೆ 4ನೇ ಹೆಚ್ಚುವರಿ ಸಿಎಂಎಂ ನ್ಯಾಯಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.


ಅಮಾನತು, ಕಾನೂನು ಕ್ರಮಕ್ಕೆ ಆಗ್ರಹ
ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಟಿ. ಮಂಜುನಾಥ್ ಅವರು ಸರ್ಕಾರಿ ಗೆಜೆಟೆಡ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ, ದೂರು ಮತ್ತು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಸರ್ಕಾರ ಸೂಕ್ತ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.
ಆರೋಪಗಳು ತನಿಖೆಯಿಂದ ದೃಢಪಡಬೇಕಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

Writing
ಆರೋಪ ಸಾಬೀತಾದರೆ ಕಠಿಣ ಕ್ರಮಕ್ಕೆ ಆಗ್ರಹ
ದಲಿತ ಗುತ್ತಿಗೆದಾರನಿಗೆ ಜಾತಿ ನಿಂದನೆ, ಲಂಚದ ಬೇಡಿಕೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪಗಳು ಗಂಭೀರವಾಗಿವೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಾನೂನು ಹಾಗೂ ಇಲಾಖಾ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

Total Views: 0
ಜಾಹೀರಾತು
Share This Article