ಸಿದ್ದರಾಮಯ್ಯ ನಗರ ನಿವೇಶನ ಹಂಚಿಕೆಯಲ್ಲಿ ವಂಚನೆ ಆರೋಪ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

Allegation of fraud in Siddaramaiah-era urban site allotment

ಸಿದ್ದರಾಮಯ್ಯ ನಗರ ನಿವೇಶನ ಹಂಚಿಕೆಯಲ್ಲಿ ವಂಚನೆ ಆರೋಪ

ಲೋಕಾಯುಕ್ತರ ಜನಸಂಪರ್ಕ ಸಭೆಯಲ್ಲಿ ದೂರು ಸಲ್ಲಿಸಿದ ರೈತ ಮುಖಂಡ ಶರಣಬಸಪ್ಪ ದಾನಕೈ

ಯಲಬುರ್ಗಾ, ಅ.9: ಪಟ್ಟಣದ ಮಲಕಸಮುದ್ರ ರಸ್ತೆಯಲ್ಲಿರುವ ಶ್ರೀ ಸಿದ್ದರಾಮಯ್ಯ ನಗರದ ಸರ್ವೇ ನಂ. 222 ಮತ್ತು 224ರಲ್ಲಿ ಹಾಲುಮತ ಸಮಾಜದ ಸಂಘ-ಸಂಸ್ಥೆಗಳು ಹಾಗೂ ಸದಸ್ಯರಿಗೆ ಹಂಚಿಕೆ ಮಾಡಬೇಕಿದ್ದ ನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಯಲಬುರ್ಗಾ ತಾಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಜಾಹೀರಾತು

ಯಲಬುರ್ಗಾ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಕರ್ನಾಟಕ ಲೋಕಾಯುಕ್ತರ ಜನಸಂಪರ್ಕ ಸಭೆಯಲ್ಲಿ ಕೊಪ್ಪಳದ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಅವರಿಗೆ ದೂರು ಸಲ್ಲಿಸಿ, ನಿವೇಶನ ಹಂಚಿಕೆ ಕುರಿತ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶರಣಬಸಪ್ಪ ದಾನಕೈ, ಹೋರಾಟಗಾರರು ಹಾಗೂ ಬುದ್ಧಿಜೀವಿಗಳು ಮೌನವಾಗಿ ಕುಳಿತರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಯುವಜನತೆ ಧೈರ್ಯದಿಂದ ಮುನ್ನಡೆಯಬೇಕು ಎಂದು ಹೇಳಿದರು.

ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಸರ್ವೇ ನಂ.222 ಹಾಗೂ 224ರ ಜಮೀನುಗಳನ್ನು ಖರೀದಿಸಿ, ಎನ್.ಎ. ಮಾಡಿಸಿ, ಸಮಾಜದ ಸಂಘ-ಸಂಸ್ಥೆಗಳಿಗೆ ಹಾಗೂ ಹಣ ಪಾವತಿಸಿರುವ ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಈ ಉದ್ದೇಶ ಈಡೇರದೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಹಾಗೂ ವಂಚನೆ ನಡೆದಿದೆ ಎಂದು ಅವರು ಆರೋಪಿಸಿದರು.

ಸರ್ವೇ ನಂ.222ರ ಜಮೀನಿಗೆ ಸಂಬಂಧಿಸಿದಂತೆ ಹಣ ಪಾವತಿಸಿ ವಚನಪತ್ರ ಮಾಡಿಸಿಕೊಂಡಿರುವುದು ಸೇರಿದಂತೆ ಹಲವು ವ್ಯವಹಾರಗಳು ನಡೆದಿವೆ. ಸರ್ವೇ ನಂ.224ರ ಜಮೀನಿನ ಖರೀದಿ ಹಾಗೂ ನಂತರದ ನೋಂದಣಿ ಮತ್ತು ಎನ್.ಎ. ಪ್ರಕ್ರಿಯೆಯಲ್ಲಿಯೂ ಹಲವು ಅನುಮಾನಾಸ್ಪದ ಅಂಶಗಳಿವೆ. ಈ ಎಲ್ಲ ದಾಖಲೆಗಳನ್ನು ಲೋಕಾಯುಕ್ತರು ಪರಿಶೀಲಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಹಾಲುಮತ ಸಮಾಜದ ಸಂಘ-ಸಂಸ್ಥೆಗಳಾದ ಶ್ರೀ ಕನಕದಾಸ ಯುವಕ ಮಂಡಳ, ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘ, ಯಲಬುರ್ಗಾ ತಾಲೂಕು ಕುರುಬರ ಸಂಘ, ಕನಕ ಭವನ ಹಾಗೂ ನಿವೇಶನಕ್ಕಾಗಿ ಹಣ ಪಾವತಿಸಿರುವ ಹಲವು ಸದಸ್ಯರಿಗೆ ಅನ್ಯಾಯವಾಗಿದೆ ಎಂದು ದಾನಕೈ ದೂರಿನಲ್ಲಿ ತಿಳಿಸಿದ್ದಾರೆ.

ನಿವೇಶನ ಹಂಚಿಕೆ ಕುರಿತು ಹಲವು ಬಾರಿ ಪ್ರಶ್ನೆಗಳನ್ನು ಎತ್ತಿದರೂ ಇದುವರೆಗೆ ಸಮರ್ಪಕ ದಾಖಲೆಗಳನ್ನು ಸಾರ್ವಜನಿಕವಾಗಿ ನೀಡಿಲ್ಲ. ಈ ಕುರಿತು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದರೂ ಸಂಬಂಧಪಟ್ಟವರು ಸ್ಪಷ್ಟನೆ ನೀಡಿಲ್ಲ ಎಂದು ಅವರು ಆರೋಪಿಸಿದರು.

“ತಿಳಿದು ಬದುಕಬೇಕಾದವರು ತುಳಿದು ಬದುಕುತ್ತಿದ್ದಾರೆ; ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಸಮಾಜದ ಹೆಸರಿನಲ್ಲಿ ಉಳಿಸಿಕೊಂಡ ನಿವೇಶನಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು” ಎಂದು ಶರಣಬಸಪ್ಪ ದಾನಕೈ ಹೇಳಿದರು.

ಸಮಾಜದ ಆಸ್ತಿಯ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ತಪ್ಪಿಲ್ಲದಿದ್ದರೆ ಸಂಬಂಧಪಟ್ಟವರು ಬಹಿರಂಗ ಸಭೆಯಲ್ಲಿ ದಾಖಲೆಗಳನ್ನು ನೀಡುವ ಮೂಲಕ ಸ್ಪಷ್ಟನೆ ನೀಡಲಿ ಎಂದು ಅವರು ಸವಾಲು ಹಾಕಿದರು.

ಈ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು, ಕುಟುಂಬಸ್ಥರು ಹಾಗೂ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿದ್ದರೆ ತನಿಖೆ ಹಾಗೂ ದಾಳಿ ನಡೆಸುವ ಮೂಲಕ ಅಕ್ರಮದ ಸತ್ಯಾಂಶವನ್ನು ಹೊರತರಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು, ಕೊಪ್ಪಳದಲ್ಲಿ ದೂರು ದಾಖಲಿಸುವುದರ ಜೊತೆಗೆ ಪೊಲೀಸ್ ಇಲಾಖೆಯಲ್ಲಿಯೂ ದೂರು ನೀಡುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಯಲಬುರ್ಗಾ–ಕುಕನೂರು ತಹಶೀಲ್ದಾರರು, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಒಟ್ಟು 9 ಜನ ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಿದರು. ಲೋಕಾಯುಕ್ತರ ಜನಸಂಪರ್ಕ ಸಭೆ ನಡೆಯುವ ಕುರಿತು ಸಮರ್ಪಕ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಕೆಲ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

— ಕಲ್ಯಾಣಸಿರಿ ವೆಬ್ ನ್ಯೂಸ್ ವಿಶೇಷ ವರದಿ

Total Views: 0
ಜಾಹೀರಾತು
Share This Article