
Scrap anti-people SIR process: SFI demands
ಜನವಿರೋಧಿ SIR ಪ್ರಕ್ರಿಯೆ ರದ್ದುಪಡಿಸಿ: SFI ಆಗ್ರಹ
ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ

ಕೊಪ್ಪಳ, ಅ.9: ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಿರುವ SIR (Special Intensive Revision) ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲಾ ಅಧಿಕಾರಿಗಳ ಮೂಲಕ ರಾಷ್ಟ್ರಪತಿ ಭವನಕ್ಕೆ ಸಲ್ಲಿಸಿದ ಮನವಿಯನ್ನು ಜಿಲ್ಲಾ ಅಧಿಕಾರಿಗಳಾದ ಶ್ರೀ ಸಿದ್ದರಾಮೇಶ್ವರ ಅವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ SFI ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಯು., ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಕಳಕಳಿಯಿಂದ ಈ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಬಿಹಾರದಿಂದ ಪ್ರಾಯೋಗಿಕವಾಗಿ ಆರಂಭಿಸಲಾದ SIR ಪ್ರಕ್ರಿಯೆಯಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸೇರಿದಂತೆ ಅನೇಕ ನೈಜ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ಆರೋಪಿಸಿದರು. ಆಧಾರ್, ಮತದಾರರ ಗುರುತಿನ ಚೀಟಿ ಸೇರಿದಂತೆ ದಾಖಲೆಗಳಿದ್ದರೂ ಹೆಸರುಗಳನ್ನು ತೆಗೆದುಹಾಕುವ ಕ್ರಮಗಳು ನಡೆಯುತ್ತಿವೆ ಎಂದು ದೂರಿದರು.
ಮತದಾನದ ಹಕ್ಕು ಸಂವಿಧಾನದ 326ನೇ ವಿಧಿಯಡಿ ದೊರೆತಿರುವ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಾಗಿದ್ದು, ಅದನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಬಾರದು ಎಂದು ನಾಗರಾಜ್ ಯು. ಒತ್ತಾಯಿಸಿದರು.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂಬುದು SFIಯ ಆರೋಪವಾಗಿದೆ. SIR ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲಾಗುತ್ತಿಲ್ಲ ಎಂದು ಅವರು ಟೀಕಿಸಿದರು.
ಆದ್ದರಿಂದ SIR ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಮತದಾರರ ಸಂವಿಧಾನಬದ್ಧ ಹಕ್ಕನ್ನು ರಕ್ಷಿಸಬೇಕು. ಅಲ್ಲದೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ SFI ಜಿಲ್ಲಾ ಸಹ ಕಾರ್ಯದರ್ಶಿ ಆಕಾಶ್ ಹನುಮೇಶ್, ಜಿಲ್ಲಾ ಸಮಿತಿ ಸದಸ್ಯರಾದ ಕನಕನಗೌಡ, ಪ್ರದೀಪ್, ಸಂಕೇತ್ ಹಾಗೂ ಸಾಯಿ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
— ಕಲ್ಯಾಣಸಿರಿ ವೆಬ್ ನ್ಯೂಸ್




