Dr. Sarvepalli Radhakrishnan Award for Dr. Anil Kumar K.V.
ಡಾ. ಅನಿಲ್ ಕುಮಾರ್ ಕೆ.ವಿ. ಅವರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ

ಬೆಂಗಳೂರು: ನವಭಾರತ ಉದಯ ಪ್ರತಿಷ್ಠಾನದ ವತಿಯಿಂದ ಜ್ಞಾನ ಸೌಧ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 10ನೇ ವರ್ಷದ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಿ.ವಿ.ಪಿ. ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರದ ಪ್ರಾಂಶುಪಾಲರಾದ ಡಾ. ಅನಿಲ್ ಕುಮಾರ್ ಕೆ.ವಿ. ಅವರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಡಾ. ಅನಿಲ್ ಕುಮಾರ್ ಕೆ.ವಿ. ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ವಿಮರ್ಶಕರಾದ ಶ್ರೀಯುತ ಭೈರಮಂಗಲ ರಾಮೇಗೌಡ, ನವಭಾರತ ಉದಯ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ತುಕ್ಕಪ್ಪ, ವೇದಿಕೆಯ ಮೇಲಿನ ಗಣ್ಯರು ಹಾಗೂ ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಅನಿಲ್ ಕುಮಾರ್ ಕೆ.ವಿ. ಅವರು ಮಾತನಾಡಿ, “ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ದೊರೆತಿರುವ ಈ ಗೌರವವು ಮತ್ತಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ, ಸಾಹಿತ್ಯ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.



